ಸದ್ಯದಲ್ಲೇ ಬಾನಂಗಳದಲ್ಲಿ ಹಾರಾಡಲಿದೆ ಫ್ಲೈಯಿಂಗ್ ಕಾರು | ಏಷ್ಯಾದಲ್ಲಿಯೇ ಮೊದಲ ಹಾರುವ ಕಾರನ್ನು ಅನಾವರಣ ಮಾಡಿದ ಭಾರತ

ಇತ್ತೀಚಿನ ದಿನಗಳಲ್ಲಿ ವಾಹನಗಳ ಮೇಲಿನ ಪ್ರಯೋಗ ಬಹಳ ಹೆಚ್ಚುತ್ತಿದೆ. ಎಲೆಕ್ಟ್ರಿಕ್ ವಾಹನಗಳಂತೂ ಬಹಳ ಜೋರಾಗಿಯೇ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇದರ ಮಧ್ಯೆ ಹಲವು ವರ್ಷಗಳಿಂದ ಹರಿದಾಡುತ್ತಿದ್ದ ಮೆನ್ಸ್ ಒಂದು ನೆನಪಿಗೆ ಬರುತ್ತದೆ. ಅದೇನೆಂದರೆ 2020ರ ಹೊತ್ತಿಗೆ ಪ್ರಪಂಚದಲ್ಲಿ ಹಾರುವ ಕಾರು ತಯಾರಾಗುತ್ತದೆ ಎಂಬುದು. ಇದಕ್ಕೆ ರೆಕ್ಕೆ ಮೂಡಿಸಿದೆ ನಮ್ಮ ದೇಶ.

 

ಹೌದು, ಚೆನ್ನೈ ಮೂಲದ ಸ್ಟಾರ್ಟ್‌ಅಪ್‌ ಹೈಬ್ರಿಡ್ ಫ್ಲೈಯಿಂಗ್ ಕಾರಿನ ಪರಿಕಲ್ಪನೆ ಮಾದರಿಯನ್ನು ಪರಿಚಯಿಸಿದೆ. ಈ ಫ್ಲೈಯಿಂಗ್ ಕಾರನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸೋಮವಾರ ಪರಿಶೀಲಿಸಿದ್ದಾರೆ.

ಈ ಕುರಿತಂತೆ ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ಟ್ವೀಟರ್‌​ನಲ್ಲಿ, ಶೀಘ್ರದಲ್ಲಿಯೇ ಏಷ್ಯಾದ ಮೊದಲ ಹೈಬ್ರಿಡ್ ಫ್ಲೈಯಿಂಗ್ ಕಾರ್ ಎನಿಸಿಕೊಳ್ಳುತ್ತಿರುವ ಪರಿಕಲ್ಪನೆಯ ಮಾದರಿಯನ್ನು ಪರಿಚಯಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಫ್ಲೈಯಿಂಗ್ ಕಾರನ್ನು ಜನರು, ಸರಕು ಸಾಗಣಿಕೆ ಮತ್ತು ವೈದ್ಯಕೀಯ ತುರ್ತು ಸೇವೆಗಳನ್ನು ಒದಗಿಸಲು ಬಳಸಲಾಗುತ್ತದೆ. ಇಡೀ ತಂಡಕ್ಕೆ ನನ್ನ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.

ವಿನತಾ ಏರೋಮೊಬಿಲಿಟಿಯಲ್ಲಿರುವ ತಂಡವು ಹೈಬ್ರಿಡ್ ಫ್ಲೈಯಿಂಗ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನಲ್‍ಗಳನ್ನು ಹೊಂದಿದೆ. ಸ್ಟಾರ್ಟ್‌ಅಪ್‌ನ ಸಿಇಒ ಯೋಗೇಶ್ ಅಯ್ಯರ್ ಅವರ ಆಳವಾದ ಸಂಶೋಧನೆಯ ನಂತರ ಈ ಹೆಸರನ್ನು ಆಯ್ಕೆ ಮಾಡಲಾಗಿದ್ದು, ಇದನ್ನು ಮದರ್ ಆಫ್ ಆಲ್ ಬರ್ಡ್ಸ್ ಎಂದು ಅರ್ಥೈಸಲಾಗಿದೆ.

ಈ ಫ್ಲೈಯಿಂಗ್ ಕಾರಿನ ವಿಶೇಷತೆ ಎಂದರೆ ಇದು ಎಂಟು ಏಕಾಕ್ಷ ರೋಟರ್, ಜೈವಿಕ ಇಂಧನ ಮತ್ತು ಬ್ಯಾಟರಿ ಮೂಲಕ ಚಲಿಸುವ ಹೈಬ್ರಿಡ್ ಮೋಟಾರ್ ಹೊಂದಿರುತ್ತದೆ. ಹೈಬ್ರಿಡ್ ಕಾರಿನ ತೂಕ 1,100 ಕೆಜಿ ಇದ್ದು, ಇದು ಗರಿಷ್ಠ 1,300 ಕೆಜಿ ತೂಕವನ್ನು ಎತ್ತಬಲ್ಲದಾಗಿದೆ. ಈ ಕಾರನ್ನು ಇಬ್ಬರು ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಗಂಟೆಗೆ 100-120 ಕಿಮೀ ವೇಗದಲ್ಲಿ ಹಾರಬಹುದಾಗಿದೆ.

Leave A Reply

Your email address will not be published.