ರಾಷ್ಟ್ರರಾಜಧಾನಿಯಲ್ಲಿ ಸೀರೆಯುಟ್ಟ ನಾರಿಗೆ ಅವಮಾನ | ಸೀರೆಯುಟ್ಟವರಿಗೆ ಪ್ರವೇಶ ಇಲ್ಲ ಎಂದು ಹೊರದಬ್ಬಿದ ರೆಸ್ಟೋರೆಂಟ್

ಭಾರತೀಯ ನಾರಿ ಎಂದಾಕ್ಷಣ ಕಣ್ಮುಂದೆ ಬರುವ ಚಿತ್ರ‌ ಸೀರೆಯುಟ್ಟ ಸ್ತ್ರೀ. ಹಿಂದೂ ದೇವತೆಗಳ ಉಡುಪುಗಳು ಕೂಡ ಸೀರೆಯೇ. ಹಾಗಾಗಿ ಸೀರೆ ಎಂಬುದು ಭಾರತೀಯ ಸಂಪ್ರದಾಯದ ಪ್ರತೀಕವಾಗಿದೆ. ಆದರೆ ಇಂತಹ ಸೀರೆ ಉಟ್ಟವರಿಗೆ ರೆಸ್ಟೋರೆಂಟ್‍ಗೆ ಪ್ರವೇಶ ಇಲ್ಲ ಎಂದು ಮಹಿಳೆಯನ್ನು ಸಿಬ್ಬಂದಿ ಹೊರಗೆ ಕಳುಹಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.

 

ಸೀರೆಯುಟ್ಟ ಮಹಿಳೆಯೊಬ್ಬರಿಗೆ ದೆಹಲಿಯ ಆಧುನಿಕ ರೆಸ್ಟೋರೆಂಟ್‍ನಲ್ಲಿ ಪ್ರವೇಶ ನಿರಾಕರಿಸಲಾಗಿದೆ. ದೆಹಲಿಯ ಅತ್ಯಾಧುನಿಕ ರೆಸ್ಟೋರೆಂಟ್‍ನಲ್ಲಿ ಸೀರೆ ತೊಟ್ಟವರಿಗೆ ಯಾವುದೇ ಕಾರಣಕ್ಕೂ ಪ್ರವೇಶ ಇಲ್ಲವಂತೆ. ಇದನ್ನು ತಿಳಿಯದ ಮಹಿಳೆಯೊಬ್ಬರು ಸೀರೆಯುಟ್ಟು ರೆಸ್ಟೋರೆಂಟ್ ಪ್ರವೇಶ ಮಾಡಿದ್ದಾರೆ. ಇದನ್ನು ಕಂಡ ಅಲ್ಲಿನ ಸಿಬ್ಬಂದಿ ಈ ಹೋಟೆಲ್‍ನಲ್ಲಿ ಸೀರೆ ತೊಟ್ಟವರಿಗೆ ಪ್ರವೇಶ ಇಲ್ಲ. ಸೀರೆಯನ್ನು ಸಾಮಾನ್ಯ ಉಡುಪು ಎಂದು ನಾವು ಪರಿಗಣಿಸುವುದಿಲ್ಲ. ಇಲ್ಲಿ ಏನಿದ್ದರೂ ಸ್ಮಾರ್ಟ್ ಕ್ಯಾಶುಯಲ್ ಉಡುಪಿಗೆ ಮಾತ್ರ ಅನುಮತಿ ನೀಡಲಾಗುವುದು ಎಂದು ಗ್ರಾಹಕ ಮಹಿಳೆಯನ್ನು ಹೊರಗೆ ಕಳುಹಿಸಿದ್ದಾರೆ.

ಈ ಘಟನೆಯ ವಿಡಿಯೋದ ಸಣ್ಣ ತುಣುಕು ಸಾಮಾಜಿಕ ಜಾಲತಾಣದಲ್ಲಿ ಈಗ ಭಾರೀ ವೈರಲ್‌ ಆಗುತ್ತಿದೆ. ಈ ವೀಡಿಯೋದಲ್ಲಿ ಮಹಿಳೆಯು ರೆಸ್ಟೋರೆಂಟ್‌ನ ಸಿಬ್ಬಂದಿಗಳ ಬಳಿ ಈ ರೆಸ್ಟೋರೆಂಟ್‌ ವಸ್ತ್ರ ಸಂಹಿತೆ ಬಗ್ಗೆ ಕೇಳಿದ್ದಾರೆ. ಹಾಗೆಯೇ ಈ ರೆಸ್ಟೋರೆಂಟ್‌ ವಸ್ತ್ರ ಸಂಹಿತೆ ಲಿಖಿತ ದಾಖಲೆಗಳನ್ನು ನೀಡುವಂತೆ ಹೇಳಿದ್ದಾರೆ.

ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಮಗಾದ ಅನುಭವ ಬರೆದಿರುವ ಪತ್ರಕರ್ತೆ ಅನಿತಾ ಚೌಧರಿ ಭಾರತೀಯ ಸೀರೆ ಸ್ಮಾರ್ಟ್ ಉಡುಗೆ ಅಲ್ಲ ಎಂಬ ಮಾತ್ರಕ್ಕೆ ತಮಗೆ ರೆಸ್ಟೋರೆಂಟ್‍ಗೆ ಅವಕಾಶ ನೀಡಲಿಲ್ಲ. ಈ ಸ್ಮಾರ್ಟ್ ಉಡುಗೆ ಎಂದರೆ ಏನು ತಿಳಿಸಿ. ಆಗ ನಾನು ಸೀರೆ ಧರಿಸುವುದನ್ನು ನಿಲ್ಲಿಸುತ್ತೇನೆ ಎಂದಿದ್ದಾರೆ.

ನನಗೆ ಮದುವೆಯಾಗಿದೆ. ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿರುವ ಕುಟುಂಬ ನನ್ನದು. ಸೀರೆ ಉಡುವುದೆಂದರೆ ನನಗೆ ತುಂಬಾ ಇಷ್ಟ. ಭಾರತೀಯ ಉಡುಪನ್ನು ತುಂಬಾ ಪ್ರೀತಿಸುತ್ತೇನೆ. ಇದು ಭಾರತೀಯ ಸಂಸ್ಕೃತಿ ಆಗಿದ್ದು, ಸೀರೆ ಸರ್ವಕಾಲಿಕಕ್ಕೂ ಒಪ್ಪುವ ಸರಳ ಸುಂದರ ಉಡುಪು ಎಂಬುದನ್ನು ನಾನು ನಂಬುತ್ತೇನೆ .ಸ್ಮಾರ್ಟ್ ಉಡುಪಿನ ಬಗ್ಗೆ ನನಗೆ ಪ್ರಧಾನ ಮಂತ್ರಿ, ಗೃಹ ಸಚಿವ, ದೆಹಲಿ ಸಿಎಂ, ದೆಹಲಿ ಪೊಲೀಸ್ ಮತ್ತು ರಾಷ್ಟ್ರೀಯ ಮಹಿಳಾ ಆಯೋಗ ವ್ಯಾಖ್ಯಾನ ನೀಡಿದರೆ, ನಾನು ಈ ಸೀರೆ ಉಡುವುದನ್ನು ನಿಲ್ಲಿಸುತ್ತೇನೆ ಎಂದು ಇದೇ ವೇಳೆ ರೆಸ್ಟೋರೆಂಟ್ ಕಾರ್ಯದ ವಿರುದ್ಧ ಹರಿಹಾಯ್ದಿದ್ದಾರೆ.

ಕಳೆದ ವರ್ಷ ಕೂಡ ದೆಹಲಿಯಲ್ಲಿ ಇಂತಹದ್ದೆ ಘಟನೆ ನಡೆದಿತ್ತು. 2020ರ ಮಾರ್ಚ್‍ನಲ್ಲಿ ಇಲ್ಲಿನ ವಸಂತ್ ಕುಂಜ್ ಮಾಲ್‍ನ ರೆಸ್ಟೋರೆಂಟ್ ಬಾರ್‍ಗೆ ಸೀರೆಯುಟ್ಟ ಮಹಿಳೆಗೆ ಪ್ರವೇಶ ನಿರಾಕರಿಸಲಾಗಿತ್ತು.

Leave A Reply

Your email address will not be published.