ದೇವಸ್ಥಾನಕ್ಕೆ ದಲಿತ ಮಗು ಪ್ರವೇಶಿಸಿ ಅಪವಿತ್ರವಾಯಿತೆಂದು ಇಡೀ ದೇವಸ್ಥಾನದಲ್ಲಿ ನಡೆಯಿತು ಶುದ್ಧೀಕರಣ ಕಾರ್ಯ | ಅಷ್ಟೇ ಅಲ್ಲದೆ ಶುದ್ಧೀಕರಣಕ್ಕಾಗಿ ನಡೆಯುವ ಹೋಮ-ಹವನಗಳಿಗೆ 11 ಸಾವಿರ ರೂ. ದಂಡ !!
ಕೊಪ್ಪಳ: ಕೊಪ್ಪಳ ಜಿಲ್ಲೆಯ ಹನುಮಸಾಗರ ಸಮೀಪದಲ್ಲಿ ದಲಿತ ಕುಟುಂಬದ ಮಗು ದೇವಾಲಯ ಪ್ರವೇಶಿಸಿದ್ದಕ್ಕೆ ಅಪವಿತ್ರ ಆಗಿದೆ ಎಂದು ಹೇಳಿ ದೇವಸ್ಥಾನ ಶುದ್ಧೀಕರಿಸಿದ್ದಲ್ಲದೇ ಪೋಷಕರಿಗೆ ದೇವಸ್ಥಾನದ ಶುದ್ಧೀಕರಣ ಹೆಸರಲ್ಲಿ 11ಸಾವಿರ ರೂಪಾಯಿ ದಂಡ ಹಾಕಲಾಗಿದೆ.
ಮಿಯಾಪುರ ನಾಲ್ಕು ವರ್ಷದ ಮಗುವಿನ ಜನ್ಮದಿನದ ಹಿನ್ನೆಲೆಯಲ್ಲಿ ಅವರ ತಂದೆ ದೇವರ ದರ್ಶನಕ್ಕೆಂದು ಆಂಜನೇಯ ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದು, ದಲಿತರಿಗೆ ಪ್ರವೇಶ ಇಲ್ಲದ ಕಾರಣ ಹೊರಗಿನಿಂದಲೇ ನಮಸ್ಕರಿಸಿ ತೆರಳಿದ್ದಾರೆ.
ಆದರೆ, ಚನ್ನದಾಸರ ಸಮುದಾಯದ ಮಗು ಗ್ರಾಮದ ಆಂಜನೇಯ ದೇವಸ್ಥಾನ ಪ್ರವೇಶಿಸಿದೆ.ದಲಿತರು ದೇವಸ್ಥಾನ ಪ್ರವೇಶಿಸಿದ್ದಕ್ಕೆ ಅಪವಿತ್ರವಾಗಿದೆ ಎಂದು ಸವರ್ಣಿಯರು ದೇವಸ್ಥಾನ ಶುದ್ದಿಕರಿಸಿದ್ದರು.ಹೋಮ, ಹವನ ಶುದ್ಧಿ ಕಾರ್ಯಗಳಿಗೆ ತಗಲುವ ವೆಚ್ಚ ಭರಿಸಲು 11 ಸಾವಿರ ರೂ. ಕೊಡಬೇಕೆಂದು ದಂಡ ಹಾಕಲಾಗಿದೆ.
ಇದನ್ನು ವಿರೋಧಿಸಿ ಚನ್ನದಾಸರ ಸಮುದಾಯ ಪ್ರತಿಭಟನೆ ಮಾಡಿತ್ತು. ದೇವಸ್ಥಾನ ಪ್ರವೇಶ ಮಾಡಿರೋ ದಲಿತ ಮಗುವಿನ ಕುಟುಂಬಕ್ಕೆ ದಂಡ ವಿಧಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಜೀವಂತ ಇರಿಸಿದ್ದು ತಡವಾಗಿ ಬೆಳಕಿಗೆ ಬಂದು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಸಭೆ ಮಾಡಿದ್ದಾರೆ. ಗ್ರಾಮಕ್ಕೆ ಕುಷ್ಟಗಿ ತಹಶೀಲ್ದಾರ ಸಿದ್ದೇಶ, ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಭೇಟಿ ನೀಡಿ ಸಭೆ ನಡೆಸಿದ್ದಾರೆ.