ವಿವಾಹಿತನಾದ ಗ್ರಾಮಲೆಕ್ಕಿಗನನ್ನು ಮದುವೆಯಾದ ತಹಶೀಲ್ದಾರ್ | ವಿವಾದಕ್ಕೀಡಾಗಿರುವ ಈ ವಿವಾಹ ಇದೀಗ ಜಿಲ್ಲಾಧಿಕಾರಿ ಅಂಗಳದಲ್ಲಿ !!
ಚಿಕ್ಕಮಗಳೂರು : ಎನ್.ಆರ್.ಪುರ ತಹಶೀಲ್ದಾರ್ ಸಿ.ಜಿ.ಗೀತಾ ಅವರು, ವಿವಾಹಿತನಾಗಿರುವ ತರೀಕೆರೆ ಗ್ರಾಮಲೆಕ್ಕಿಗ ಡಿ.ಟಿ.ಶ್ರೀನಿಧಿ ಎಂಬುವರನ್ನು ತಾಲೂಕಿನ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿದ್ದಾರೆ. ಇದೀಗ ಇವರ ವಿವಾಹ ವಿವಾದಕ್ಕೀಡಾಗಿದ್ದು, ಜಿಲ್ಲಾಧಿಕಾರಿ ಅಂಗಳ ತಲುಪಿದೆ.
ಶ್ರೀನಿಧಿ ಅವರ ಮೊದಲ ಪತ್ನಿ ಟಿ.ಆರ್.ಲೀಲಾ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.ಈ ಸಂಬಂಧ ಗೀತಾಗೆ ಕಾರಣ ಕೇಳಿ ಡಿಸಿ ಕೆ.ಎನ್. ರಮೇಶ್ ನೋಟಿಸ್ ನೀಡಿದ್ದಾರೆ.
ನನ್ನ ಪತಿ ಸಿ.ಜಿ.ಗೀತಾ ಅವರನ್ನು ಜು.19ರಂದು ವಿವಾಹವಾಗಿದ್ದಾರೆ. ಆದರೆ, 2006ರಲ್ಲೇ ನನ್ನನ್ನು ದಾವಣಗೆರೆ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಅವರು ನನಗೆ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ಕಾರಣ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೆ. ನಂತರ ಇಬ್ಬರೂ ಒಟ್ಟಾಗಿದ್ದೆವು ಎಂದು ಲೀಲಾ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ ಶ್ರೀನಿಧಿ ಅವರು ಲೀಲಾರಿಂದ ವಿವಾಹ ವಿಚ್ಛೇದನ ಕೋರಿ ಕಡೂರು ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಲೀಲಾ ನೀಡಿರುವ ಮನವಿ ವಿಚಾರವು ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮ-2021ರ ವ್ಯಾಪ್ತಿಗೆ ಬರುವುದರಿಂದ ಉತ್ತರ ನೀಡುವಂತೆ ಗೀತಾಗೆ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ.