ಸಂಪಾದಕ ಶಂಕರ್ ಕುಟುಂಬದ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ | ಮನೆಯ ಯಜಮಾನ ಶಂಕರ್ ಮತ್ತು ಅಳಿಯಂದಿರ ಸುತ್ತಲೇ ಗಿರಗಿರ ತಿರುಗಿದೆ ಅನುಮಾನದ ಮುಳ್ಳು
ಬೆಂಗಳೂರು: ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣ ಇದೀಗ ಕ್ಷಣಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಸಾಮೂಹಿಕ ಆತ್ಮಹತ್ಯೆಮಾಡಿಕೊಂಡ ಕುಟುಂಬದ ಐವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಅನುಮಾನದ ಮುಳ್ಳು ಮನೆಯ ಯಜಮಾನ ಶಂಕರ್ ಮತ್ತವರ ಅಳಿಯಂದಿರ ಸುತ್ತ ಸುತ್ತುತ್ತಿದೆ.
ನಿನ್ನೆ ಪೊಲೀಸರು ಶಂಕರ್ ಅವರ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಿದರು. ನನ್ನ ಇರುವಿಕೆಯಲ್ಲಿ ಸ್ಥಳ ಮಹಜರು ಮಾಡಬೇಕೆಂದು ಶಂಕರ್ ಅವರು ಪೊಲೀಸರನ್ನು ಕೇಳಿಕೊಂಡಿದ್ದರು. ಸರಳ ಮಹಜರು ಈ ವೇಳೆ ಪೊಲೀಸರಿಗೆ ಮೂರು ಡೆತ್ ನೋಟ್ ಲಭ್ಯವಾಗಿದೆ. ಇದರ ಆಧಾರದ ಮೇಲೆ ಮನೆ ಯಜಮಾನ ಶಂಕರ್, ಅಳಿಯಂದಿರಾದ ಪ್ರವೀಣ್, ಶ್ರೀಕಾಂತ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ.
ಈ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಮೇಲೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ನಲ್ಲಿ ಶಂಕರ್ ಹಾಗೂ ಪ್ರವೀಣ್, ಶ್ರೀಕಾಂತ್ ಕಿರುಕುಳದ ಬಗ್ಗೆ ಉಲ್ಲೇಖ ಮಾಡಲಾಗಿತ್ತು. ಈ ಎಲ್ಲ ಆಧಾರದ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಶಾಸಕ ಪತ್ರಿಕೆಯ ಸಂಪಾದಕ ಶಂಕರ್ ಮನೆಯ ಹಾಲ್ನ ಎಂಟ್ರಿಯಲ್ಲಿ ಸಿಸಿಟಿವಿ ಹಾಕಲಾಗಿದೆ. ಸಿಸಿಟಿಯ ಸಂಪೂರ್ಣ ಕಂಟ್ರೋಲ್ ಶಂಕರ್ ಮೊಬೈಲ್ ನಲ್ಲಿತ್ತು. ಅದಕ್ಕೆ 64 ಜಿಬಿಯ ಮೆಮೊರಿ ಕಾರ್ಡ್ ಹಾಕಲಾಗಿದ್ದು, ಅದು ಫುಲ್ ಆಗಿದ್ದವು. 64 ಜಿಬಿ ಮುಗಿದ ಕಾರಣ, ಭಾನುವಾರದ ನಂತರದ ಚಟುವಟಿಕೆಗಳು ಸಿಕ್ಕಿಲ್ಲ. ಅದೂ ತನಿಖೆಗೆ ತೊಡಕಾಗಿದೆ.
ತಿಗಳರಪಾಳ್ಯದ ಮನೆಯಲ್ಲಿ ಎಸಿಪಿ, ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ಸ್ಥಳ ಮಹಜರು ನಡೆಸಲಾಗಿದ್ದು, ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಮನೆಯಲ್ಲಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಮನೆ ಮಾಲೀಕ ಶಂಕರ್, ಇಬ್ಬರು ಅಳಿಯಂದಿರು, ಒಬ್ಬ ಸಂಬಂಧಿಕ ಸಹ ಇದ್ದರು. ಪರಿಶೀಲನೆ ವೇಳೆ ಮಧುಸಾಗರ್, ಸಿಂಚನ, ಸಿಂಧುರಾಣಿ ಮೂವರ ಡೆತ್ ನೋಟ್ಗಳು ಪತ್ತೆಯಾಗಿವೆ. ಮೂವರು ಸಹ ಅಪ್ಪನ ವಿರುದ್ಧ ಆರೋಪ ಮಾಡಿದ್ದು, ತಂದೆಯ ಅನೈತಿಕ ಸಂಬಂಧ, ದೌರ್ಜನ್ಯ ನಡೆಸಿರುವ ಬಗ್ಗೆ ಉಲ್ಲೇಖಿಸಿದ್ದಾರೆ.
ಸಾವಿನ ಸಂಬಂಧ ಕೆಲ ಸಾಕ್ಷ್ಯಗಳು ಲ್ಯಾಪ್ ಟಾಪ್ನಲ್ಲಿ ಇರುವ ಶಂಕೆ ಇದೆ. ಹೀಗಾಗಿ ಅವುಗಳನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. 9 ತಿಂಗಳ ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಸಿಂಧುರಾಣಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಹ ಸಾಕ್ಷ್ಯ ಲಭ್ಯವಾಗಿದೆ ಎನ್ನಲಾಗಿದೆ. ಮನೆಯ ರೂಮ್ಗಳಲ್ಲಿ ಅಲ್ಲಲ್ಲಿ ನೋಟುಗಳು ಹರಿದು ಬಿದ್ದಿದ್ದವು. ಬಹುತೇಕ ಎಲ್ಲರೂ ಶಂಕರ್ ಮೇಲೆಯೇ ಆರೋಪ ಮಾಡಿದ್ದಾರೆ. ಅಪ್ಪ ಸರಿಯಿಲ್ಲ ಎಂದು ದೂರಿದ್ದಾರೆ.
ಡೆತ್ ನೋಟ್ನಲ್ಲಿ ಏನಿದೆ?
ನಮ್ಮ ಅಪ್ಪನಿಗೆ ಅನೈತಿಕ ಸಂಬಂಧ ಇತ್ತು, ಇದರಿಂದ ಸಂಸಾರದಲ್ಲಿ ಗಲಾಟೆಗಳು ನಡೆಯುತ್ತಿದ್ದವು. ಅಪ್ಪ ಸರಿಯಾಗಿ ಇದ್ದಿದ್ದರೆ ನಾವ್ಯಾಕೆ ಸಾಯುವ ಯೋಚನೆ ಮಾಡಬೇಕಿತ್ತು. ನಾವೆಲ್ಲ ಸಾಯುವುದಕ್ಕೆ ಅಪ್ಪ ಅಕ್ರಮ ಸಂಬಂಧ ಹೊಂದಿರುವುದೇ ಕಾರಣ ಎಂದು ಮಧುಸಾಗರ್ ಡೆತ್ ನೋಟ್ನಲ್ಲಿ ಬರೆದಿದ್ದಾರೆ. ಅಪ್ಪ ಮತ್ತು ಪತಿಯಂದಿರು ಕಿರುಕುಳ ಕೊಡುತ್ತಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದೆವು. ಗಂಡನ ಮನೆಯಲ್ಲೂ ಸುಖ ಸಿಗಲಿಲ್ಲ, ತವರು ಮನೆಯಲ್ಲೂ ಸುಖ ಸಿಗಲಿಲ್ಲ, ಇನ್ಯಾವ ಖುಷಿಗೆ ಬದುಕಬೇಕು. ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ಇಲ್ಲಿಗಾದ್ರೂ ಕೊನೆಯಾಗಲಿ ಎಂದು ಸಿಂಚನ, ಸಿಂಧುರಾಣಿ ಡೆತ್ ನೋಟ್ ಬರೆದಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.