ಮಂಗಳೂರು :ಪತ್ನಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಗೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ ನ್ಯಾಯಾಲಯ!!
ಮಂಗಳೂರು: ಪತ್ನಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣವೊಂದರಲ್ಲಿ ಪತಿಗೆ ಮೂರು ವರ್ಷಗಳ ಕಠಿಣ ಜೈಲುಶಿಕ್ಷೆ ಮತ್ತು 19,500 ರೂ. ದಂಡ ವಿಧಿಸಿ ಮಂಗಳೂರಿನ 3 ನೇ ಸಿಜೆಎಂ (ಕಿರಿಯ ವಿಭಾಗ) ಮತ್ತು ಜೆಎಂಎಫ್ ಸಿ ನ್ಯಾಯಾಲಯ ತೀರ್ಪು ನೀಡಿದೆ.
ನಗರದ ಶಕ್ತಿನಗರ ನಿವಾಸಿಯಾದ ರಿಕ್ಷಾ ಚಾಲಕ ಶಿವಕುಮಾರ್ (45) ಶಿಕ್ಷೆಗೊಳಗಾದ ಆರೋಪಿ.
2019ರ ಫೆ. 20ರಂದು ರಾತ್ರಿ ಆರೋಪಿ ಶಿವಕುಮಾರ್ ಮನೆಗೆ ತೆರಳಿ ಪತ್ನಿ ಸಾಕಮ್ಮ (39) ಮತ್ತು ಪುತ್ರಿಗೆ ಹೀನಾಯವಾಗಿ ನಿಂದಿಸಿದ್ದ. ಈ ಸಂದರ್ಭದಲ್ಲಿ ಪತ್ನಿ ಸಾಕಮ್ಮ ಮನೆಯಿಂದ ಹೊರಗೆ ಬಂದಾಗ ಶಿವಕುಮಾರ್ ಆಕೆಯ ಎರಡೂ ಕೈಗಳಿಗೆ ಮತ್ತು ಕಾಲುಗಳಿಗೆ ಕಬ್ಬಿಣದ ಸರಳಿನಿಂದ ತೀವ್ರವಾಗಿ ಹೊಡೆದಿದ್ದನು ಎಂದು ಆರೋಪಿಸಲಾಗಿತ್ತು. ಈ ಹಲ್ಲೆಯಿಂದ ಸಾಕಮ್ಮ ಅವರ ಎರಡೂ ಮೊಣಕೈ ಮತ್ತು ಎರಡೂ ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಐಪಿಸಿ ಸೆಕ್ಷನ್ 341, 324, 326, 407, 506 ಅನ್ವಯ ಪ್ರಕರಣ ದಾಖಲಾಗಿತ್ತು. ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರದೀಪ್ ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ 3 ನೇ ಸಿಜೆಎಂ ಮತ್ತು ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶರಾದ ಮಧುಕರ ಭಾಗವತ್ ಅವರು ಶನಿವಾರ ಆರೋಪಿಗೆ ಐಪಿಸಿ 341 ಅನ್ವಯ 500 ರೂ. ದಂಡ, ಐಪಿಸಿ 324 ಅನ್ವಯ ಎರಡು ವರ್ಷ ಕಠಿಣ ಶಿಕ್ಷೆ ಮತ್ತು 9000 ರೂ. ದಂಡ ಹಾಗೂ ಐಪಿಸಿ 326 ಅನ್ವಯ 3 ವರ್ಷ ಕಠಿಣ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿ ತೀರ್ಪು ನೀಡಿ ಎರಡೂ ಸೆಕ್ಷನ್ಗಳಡಿ ವಿಧಿಸಲಾಗಿರುವ ಶಿಕ್ಷೆಯನ್ನು ಏಕ ಕಾಲದಲ್ಲಿ ಅನುಭವಿಸುವಂತೆ ಆದೇಶಿಸಿದ್ದಾರೆ.
ದಂಡ ಮೊತ್ತದಲ್ಲಿ 19,000 ರೂ.ನ್ನು ಸಂತ್ರಸ್ತೆ ಸಾಕಮ್ಮ ಅವರಿಗೆ ಹಾಗೂ 500 ರೂ.ಗಳನ್ನು ಸರಕಾರಕ್ಕೆ ಪಾವತಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ 7 ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದು 6 ದಾಖಲೆಗಳನ್ನು ನ್ಯಾಯಾಲಯ ಪರಿಗಣಿಸಿತ್ತು. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ನೇತ್ರಾವತಿ ವಾದಿಸಿದ್ದರು.