ಅಮ್ಮ ತನ್ನ ಮಗುವಿಗೆ ತೋರಿಸೋ ಪ್ರೀತಿ, ಕಾಳಜಿ ಜಗತ್ತಿನಲ್ಲಿ ಬೇರೆಲ್ಲೂ ಕಾಣಸಿಗದು!! ಹಾಗೆಯೇ ಇಲ್ಲೊಂದು ಖಡ್ಗಮೃಗ ತನ್ನ ಕಂದನ ಕಾಪಾಡೋ ದೃಶ್ಯವಂತೂ ಮನಮುಟ್ಟುವಂತಿದೆ
ಕೋಟಿ ದೇವರ ಹಿಂದಿಕ್ಕಿ ಕಾಣುವ ಮೊದಲ ದೇವತೆ, ಸದಾ ಮಕ್ಕಳ ಸುಖ ಬಯಸೊ ತ್ಯಾಗಮಯಿ ‘ಅಮ್ಮ’. ಮಕ್ಕಳಿಗಾಗಿ ಎಂತಹ ಕಷ್ಟವನ್ನು ಬೇಕಾದರೂ ಎದುರಿಸಲು ಅಮ್ಮ ಸಿದ್ಧರಿರುತ್ತಾರೆ ಎಂಬುದು ಕೂಡಾ ಸತ್ಯ. ತಾನು ಯಾವುದೇ ಕೆಲಸದಲ್ಲಿ ತೊಡಗಿಕೊಂಡಿದ್ದರೂ ತನ್ನ ಕಂದಮ್ಮಗಳತ್ತ ತಾಯಿಗೆ ಗಮನ ಇದ್ದೇ ಇರುತ್ತದೆ. ಬರೀ ಮನುಷ್ಯರಲ್ಲಿ ಮಾತ್ರ ಅಲ್ಲ, ಬೇರೆ ಜೀವಿಗಳಲ್ಲೂ ನಾವು ಇದೇ ತೆರನಾದ ಕಾಳಜಿ, ಮಮತೆಯನ್ನು ನೋಡಬಹುದು. ಇದು ಕೂಡಾ ಅಂತಹದ್ದೇ ಒಂದು ದೃಶ್ಯ.ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುವ ಕೆಲವೊಂದು ದೃಶ್ಯಗಳು ಬಹುಬೇಗ ನಮ್ಮ ಗಮನ ಸೆಳೆಯುತ್ತವೆ ಎಂಬುದು ಸತ್ಯ. ಈ ರೀತಿಯ ಸಾಕಷ್ಟು ದೃಶ್ಯಗಳನ್ನು ನೀವು ಪ್ರತಿದಿನ ನೋಡುತ್ತಿರಬಹುದು. ಇದೀಗ, ಇದಕ್ಕೆ ಇನ್ನೊಂದು ಸೇರ್ಪಡೆಯಾಗಿದೆ. ಇದು ತಾಯಿ ಖಡ್ಗಮೃಗ ತನ್ನ ಕಂದನ ಬಗೆಗೆ ಎಚ್ಚರಿಕೆ ವಹಿಸಿಕೊಳ್ಳುವ ದೃಶ್ಯ.
https://twitter.com/kaziranga_/status/1438512794341498880?s=20
ಕಾಜಿರಂಗ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ರಕ್ಷಿತಾರಣ್ಯ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ದೃಶ್ಯ ಇದು. ತಾಯಿ ಮತ್ತು ಮರಿ ಖಡ್ಗಮೃಗ ಕಾಡಿನ ಕೊಳದಲ್ಲಿರುವ ದೃಶ್ಯದ ಮೂಲಕ ಈ 53 ಸೆಕೆಂಡಗಳ ಕ್ಲಿಪ್ ಶುರುವಾಗುತ್ತದೆ. ತಾಯಿ ಮತ್ತು ಮರಿಯ ನಡುವೆ ಸಣ್ಣ ಅಂತರ ಇರುತ್ತದೆ. ಅಷ್ಟರಲ್ಲಿ ತಾಯಿಗೆ ಏನೂ ಅಪಾಯ ಇದೆ ಎಂದೆನಿಸುತ್ತದೆ. ಇದಕ್ಕೆ ಸರಿಯಾಗಿ ಹಕ್ಕಿಗಳ ಕೂಗಿನ ಧ್ವನಿಯ ವ್ಯತ್ಯಾಸವನ್ನೂ ಇವಳು ಸೂಕ್ಷ್ಮವಾಗಿ ಗ್ರಹಿಸಿದ್ದಳು. ಹೀಗಾಗಿ, ತನ್ನ ಕಂದನಿಗೆ ಏನಾದರೂ ಅಪಾಯ ಸಂಭವಿಸಬಹುದು ಎಂಬ ಕಾರಣಕ್ಕೆ ಓಡಿ ಹೋಗಿ ಮರಿಯ ಬಳಿ ನಿಂತಿದ್ದಳು. ಅಪಾಯದ ಸೂಚನೆ ಸಿಗುತ್ತಿದ್ದಂತೆಯೇ ತಾಯಿ ಅಲರ್ಟ್ ಆಗಿದ್ದಳು. ಬಹುಶಃ ದೃಶ್ಯ ಸೆರೆ ಹಿಡಿಯುತ್ತಿದ್ದ ಮನುಷ್ಯರ ಇರುವಿಕೆ ಕೂಡಾ ಇವಳ ಗಮನಕ್ಕೆ ಬಂದಿರಬಹುದೋ ಏನೋ. ಜೊತೆಗೆ, ಪರಭಕ್ಷಕದ ಆತಂಕವೂ ಕಾಡಿರಬಹುದು. ಹೀಗೆ ಕಂದನ ಬಳಿ ಹೋದ ಅಮ್ಮ ಮರಿಗೆ ಅಡ್ಡವಾಗಿ ನಿಂತು ನಾಲ್ಕು ಸುತ್ತಲೂ ಸೂಕ್ಷ್ಮವಾಗಿ ನೋಡುವ ಈ ದೃಶ್ಯವೇ ಹೃದಯಸ್ಪರ್ಶಿಯಾಗಿದೆ. ಅಮ್ಮನ ಪ್ರೀತಿ ಎಂದರೆ ಹಾಗೆಯೇ ಅಲ್ವಾ…