ನಿಫಾ ಆತಂಕದಲ್ಲಿದ್ದ ಮಂಗಳೂರಿನ ಜನತೆಗೆ ರಿಲೀಫ್ | ನಿಫಾ ವೈರಸ್ ಲಕ್ಷಣಗಳಿವೆಯೆಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಯುವಕನ ವರದಿ ನೆಗೆಟಿವ್
ಮಂಗಳೂರು: ನಿಫಾ ಆತಂಕದಿಂದ ಶನಿವಾರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಕಾರವಾರ ಮೂಲದ 25ರ ಹರೆಯದ ಯುವಕನ ಪರೀಕ್ಷಾ ವರದಿ ನೆಗೆಟಿವ್ ಎಂದು ಬಂದಿದೆ.
ಇದರೊಂದಿಗೆ ಯುವಕನ ಜೊತೆಗೆ ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿಯಲ್ಲಿ ಉಂಟಾಗಿದ್ದ ಆತಂಕವೂ ದೂರವಾಗಿದೆ. ಗೋವಾದಲ್ಲಿ ಆರ್ ಟಿಪಿಸಿಆರ್ ಕಿಟ್ ತಯಾರಿಕಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ, ಸೆ. 8ರಂದು ಊರಿಗೆ ಬಂದಿದ್ದು, ಬಳಿಕ ಆತನಲ್ಲಿ ಜ್ವರ ಮತ್ತು ತಲೆ ನೋವು ಕಾಣಿಸಿಕೊಂಡಿತ್ತು. ಗೂಗಲ್‌ನಲ್ಲಿ ಸರ್ಚ್ ಮಾ ತನ್ನಲ್ಲಿ ನಿಫಾ ಲಕ್ಷಣಗಳಿವೆ ಎಂದು ಗಾಬರಿಗೊಂಡು ಕಾರವಾರ ಆಸ್ಪತ್ರೆಗೆ ದಾಖಲಾಗಿದ್ದ.
ಅಲ್ಲಿಂದ ಮಣಿಪಾಲ ಬಂದು ಬಳಿಕ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ. ಆತನ ನಿಫಾದ ಯಾವುದೇ ಲಕ್ಷಣಗಳು ಕಂಡು ಬರದಿದ್ದರೂ, ಸಮಾಧಾನಕ್ಕಾಗಿ ರಕ್ತ, ಮೂತ್ರ, ಮೂಗಿನದ್ರವ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರಂತೆ ಬುಧವಾರ ವರದಿ ಬಂದಿದ್ದು, ವರದಿ ನೆಗೆಟಿವ್ ಎಂದು ಇದೆ.
ಸದ್ಯ ಯುವಕ ಆರೋಗ್ಯದಿಂದ ಇದ್ದು, ಐಸೋಲೇಶನ್ ನಲ್ಲಿರುವ ಯುವಕ ಮತ್ತು ಆತನ ತಂದೆಯನ್ನು ಬಿಡುಗಡೆಗೊಳಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.