ಡಿ.ಕೆ.ಶಿವ ಕುಮಾರ್‌ಗೆ ಸುಳ್ಯ ನ್ಯಾಯಾಲಯದಿಂದ ವಾರಂಟ್ | ನ್ಯಾಯಾಲಯಕ್ಕೆ ಹಾಜರು ಪಡಿಸಲು ಐಜಿಪಿ ಮತ್ತು ಡಿಐಜಿಗೆ ನೋಟಿಸ್
ಸುಳ್ಯ : ಬೆಳ್ಳಾರೆಯ ಸಾಯಿ ಗಿರಿಧರ್ ರೈ ಮತ್ತು ಇಂಧನ ಖಾತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ನಡುವಿನ ಫೋನ್ ಸಂಭಾಷಣೆ ಪ್ರಕರಣಕ್ಕೆ ಸಂಬಂಧಿಸಿ ಹಲವು ಬಾರಿ ಸಮನ್ಸ್ ಜಾರಿ ಮಾಡಿದ ಬಳಿಕವೂ ನ್ಯಾಯಾಲಯಕ್ಕೆ ಸಾಕ್ಷ್ಯ ಹೇಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಜರಾಗದಿರುವುದರಿಂದ ಅವರ ವಿರುದ್ಧ ಸುಳ್ಯ ನ್ಯಾಯಾಲಯ ವಾರಂಟ್ ಜಾರಿ ಮಾಡಿದೆ.
ನ್ಯಾಯಾಲಯಕ್ಕೆ ಹಾಜರಾಗದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಧೀಶರು ಡಿ.ಕೆ. ಶಿವಕುಮಾರ್ ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಲು ಐಜಿಪಿ ಮತ್ತು ಡಿಐಜಿಗೆ ಕೂಡ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದ್ದಾರೆ ಎನ್ನಲಾಗಿದೆ.
ಸೆಪ್ಟೆಂಬರ್ 29ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.
ಪ್ರಕರಣದ ಹಿನ್ನೆಲೆ
ಸ್ಥಳೀಯವಾಗಿ ನಿರಂತರ ಕಾಡುತ್ತಿದ್ದ ವಿದ್ಯುತ್ ಸಮಸ್ಯೆ ಬಗ್ಗೆ ಬೆಳ್ಳಾರೆಯ ವರ್ತಕರ ಸಂಘದ ಮಾಜಿ ಅಧ್ಯಕ್ಷ ಸಾಯಿ ಗಿರಿಧರ ರೈ ಎಂಬವರು 2016ರ ಫೆಬ್ರವರಿ 28ರಂದು ರಾತ್ರಿ ಅಂದಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ತಿಳಿಸಿದ್ದರು. ಈ ವೇಳೆ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಅವಾಚ್ಯ ಶಬ್ದಗಳ ಬಳಕೆ ಕೂಡ ಆಗಿತ್ತು ಎಂದು ಹೇಳಲಾಗುತ್ತಿದ್ದು, ಇದು ಡಿಕೆ ಶಿವಕುಮಾರ್ ಅವರಿಗೆ ಪಿತ್ತ ನೆತ್ತಿಗೇರಲು ಕಾರಣವಾಗಿತ್ತು ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಸಚಿವ ಡಿಕೆ ಶಿವಕುಮಾರ್ ಅವರು ಮೆಸ್ಕಾಂ ಎಂಡಿ ಮೂಲಕ ಅಂದಿನ ಸುಳ್ಯ ಮೆಸ್ಕಾಂ ಪ್ರಭಾರ ಎಇಇ ಹರೀಶ್ ನಾೖಕ್ ಅವರಿಂದ ಸಾಯಿ ಗಿರಿಧರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಕೇಸು ದಾಖಲಿಸಿಕೊಂಡಿದ್ದ ಪೊಲೀಸರು ರಾತ್ರಿಯೇ ಬೆಳ್ಳಾರೆಗೆ ಹೋಗಿ ಗಿರಿಧರ ರೈ ಅವರನ್ನು ಬಂಧಿಸಿದ್ದರು.