ಬೆಳ್ತಂಗಡಿಯಲ್ಲಿ ಮತ್ತೆ ಸದ್ದು ಮಾಡಿದ ಸ್ಯಾಟಲೈಟ್ ಕಾಲ್ | ಬೆಳ್ತಂಗಡಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರಿನ ಅರಣ್ಯಗಳಲ್ಲಿ ಮತ್ತೆ ಟ್ರೇಸ್ ಆದ ಕಾಲ್
ದಕ ಜಿಲ್ಲೆಯಲ್ಲಿ ಮತ್ತೆ ಮತ್ತೆ ಸ್ಯಾಟಲೈಟ್ ಕಾಲ್ ಸದ್ದು ಮಾಡುತ್ತಿದ್ದು ಮೂರು ದಿನಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಹಾಗೂ ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಂಪರ್ಕ ಸಾಧಿಸಿರುವ ಬಗ್ಗೆ ರಾಜ್ಯ ಏಜೆನ್ಸಿ ಹೆಚ್ಚಿನ ತನಿಖೆಗೆ ಆಂತರಿಕ (ಐಎಸ್ ಡಿ)ವಿಭಾಗಕ್ಕೆ ನೀಡಿದೆ.
ಕಳೆದ ಒಂದು ವಾರದಲ್ಲಿ ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ದಟ್ಟಾರಣ್ಯದಲ್ಲಿ ಸ್ಯಾಟಲೈಟ್ ಫೋನ್ ರಿಂಗ್ ಆಗಿದ್ದು, ಇಲ್ಲಿಂದ ವಿದೇಶಕ್ಕೆ ಕನೆಕ್ಟ್ ಆಗಿರುವುದನ್ನು ಗುಪ್ತಚರ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಸ್ಯಾಟಲೈಟ್ ಫೋನ್ ಬಳಕೆಯನ್ನು ದೇಶದಲ್ಲಿ ನಿಷೇಧಿಸಲಾಗಿದ್ದರೂ, ರಾಜ್ಯದ ಕರಾವಳಿಯಲ್ಲಿ ಹಲವು ಬಾರಿ ಸಂಪರ್ಕ ಆಗಿರುವುದನ್ನು ಗುಪ್ತಚರ ಪಡೆಗಳು ದೃಢಪಡಿಸಿವೆ.
ಬೆಳ್ತಂಗಡಿ ತಾಲೂಕಿನಲ್ಲಿ ವರ್ಷಗಳಿಂದ ನಾವೂರು,ಇಂದಬೆಟ್ಟು ,ಧರ್ಮಸ್ಥಳ, ಬೆಳಾಲು, ಮೇಲಂತಬೆಟ್ಟು, ಗೋವಿಂದೂರು ಹಾಗೂ ವಿವಿಧೆಡೆ ಹಲವು ಬಾರಿ ಸ್ಯಾಟಲೈಟ್ ಕಾಲ್ ಸಂಪರ್ಕ ಸಾಧಿಸಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ದೇವಾಸ್ಥಾನದ ಬಳಿ ಸಂಪರ್ಕ ಸಾಧಿಸಲಾಗಿತ್ತು. ಈಗ ಮತ್ತೆ ಬೆಳ್ತಂಗಡಿಯ ಅರಣ್ಯ ಪ್ರದೇಶದಲ್ಲಿ ಸಂಪರ್ಕ ಸಾಧಿಸಿರುವ ಬಗ್ಗೆ ಮಾಹಿತಿ ಲಭಿಸಿದೆ. ಆದರೆ ಎಲ್ಲಿಂದ, ಯಾರು ಸ್ಯಾಟಲೈಟ್ ಕಾಲ್ ಮಾಡುತ್ತಿದ್ದಾರೆ ಎಂದು ಪತ್ತೆ ಹಚ್ಚಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.
ಇತ್ತೀಚೆಗೆ ಲಂಕಾ ಮೂಲದ 13 ಮಂದಿ ಶಂಕಿತರು ಪಾಕಿಸ್ಥಾನ ಅಥವಾ ಸಿರಿಯಾಕ್ಕೆ ತೆರಳುವ ಉದ್ದೇಶದಿಂದ ಭಾರತದ ಕರಾವಳಿಗೆ ಬಂದಿದ್ದಾರೆ ಎನ್ನಲಾಗಿತ್ತು. ತಮಿಳು ಮೀನುಗಾರರ ಸೋಗಿನಲ್ಲಿ ಶಂಕಿತರು ಬಂದಿದ್ದರು ಎನ್ನುವ ಮಾಹಿತಿ ಇತ್ತಾದರೂ, ಅದನ್ನು ಪತ್ತೆ ಮಾಡಲು ಗುಪ್ತಚರ ಪಡೆಗಾಗಲೀ, ಪೊಲೀಸರಿಗಾಗಲೀ ಸಾಧ್ಯವಾಗಿಲ್ಲ. ಪತ್ತೆ ಮಾಡಿದ್ರೂ ಅದರ ಬಗ್ಗೆ ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ನೀಡಿಲ್ಲ. ಇದರ ನಡುವಲ್ಲೇ ತುರಾಯಾ ಫೋನ್ ಸದ್ದು ಮಾಡಿದ್ದು, ಸ್ಲಿಪರ್ ಸೆಲ್ ನೆಟ್ವರ್ಕ್ ಬಗ್ಗೆ ಶಂಕೆ ಮೂಡಿಸಿದೆ. ಉತ್ತರ ಕನ್ನಡ ಮತ್ತು ಚಿಕ್ಕಮಗಳೂರಿನ ಅರಣ್ಯ ಪ್ರದೇಶದಲ್ಲಿ ಫೋನ್ ಟ್ರೇಸ್ ಆಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಅರಣ್ಯ ಭಾಗದಲ್ಲಿ ಫೋನ್ ನೆಟ್ವರ್ಕ್ ಟ್ರೇಸ್ ಆಗಿದೆ.
ಸ್ಯಾಟಲೈಟ್ ಫೋನ್ ಬಳಕೆ ಮಾಡಿದಲ್ಲಿ ಅದನ್ನು ಯಾರು ಬಳಕೆ ಮಾಡಿದ್ದಾರೆ ಮತ್ತು ಯಾರಿಗೆ ಕನೆಕ್ಟ್ ಆಗಿದೆ ಅನ್ನುವುದನ್ನು ಖಚಿತವಾಗಿ ಪತ್ತೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ಫೋನ್ ಗಳ ಬಳಕೆಯನ್ನು ಭಾರತದಲ್ಲಿ 2012ರಲ್ಲೇ ನಿಷೇಧ ಮಾಡಲಾಗಿತ್ತು. ಇದಲ್ಲದೆ, ಈ ಫೋನ್ ಬಳಕೆಯಾದ ಒಂದು ದಿನದ ಬಳಿಕ ಗುಪ್ತಚರ ಪಡೆಗಳಿಗೆ ಸಂದೇಶ ಬರುತ್ತವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕರಾವಳಿಯಲ್ಲಿ ಪದೇ ಪದೇ ಸ್ಯಾಟಲೈಟ್ ಫೋನ್ ಬಳಕೆ ಕಂಡುಬರುತ್ತಿರುವುದು, ಇದು ಉಗ್ರರದ್ದೇ ಹೆಜ್ಜೆಗುರುತು ಅನ್ನೋ ಬಲವಾದ ಶಂಕೆ ಮೂಡುವಂತಾಗಿದೆ.