ಆಲಂಕಾರು ರೈತನ ಜಮೀನು ವಶಪಡಿಸಿ ಅರಣ್ಯ ಇಲಾಖೆಯಿಂದ ದಬ್ಬಾಳಿಕೆ : ರೈತ ಸಂಘ ಆರೋಪ
ಕಡಬ:ಕಡಬ ತಾಲೂಕಿನ ಪೆರಾಬೆ ಗ್ರಾಮದ ಸುರುಳಿ ಎಂಬಲ್ಲಿ ರೈತರೊಬ್ಬರಿಗೆ ಸೇರಿದ ಸ್ವಾಧೀನದಲ್ಲಿದ್ದ ಜಮೀನಿಗೆ ಅರಣ್ಯ ಇಲಾಖೆಯವರು ಅಕ್ರಮವಾಗಿ ಪ್ರವೇಶಿಸಿ ಜಾಗವನ್ನು ಸ್ವಾಧೀನ ಪಡಿಸಿಕೊಂಡು ದಬ್ಬಾಳಿಕೆ ನಡೆಸಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ದ.ಕ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಆರೋಪಿಸಿದರು.
ರೈತ ಸುರುಳಿ ಲೋಲಾಕ್ಷ ಶೇಟ್ಟಿಯವರ ಪಟ್ಟಾ ಸ್ಥಳಕ್ಕೆ ಹೊಂದಿಕೊಂಡಿರುವ ಕುಮ್ಕಿ ಜಮೀನಿಗೆ ಅರಣ್ಯ ಇಲಾಖಾ ಫಾರೆಸ್ಟರ್ ಏಕಾಏಕಿ ಅಕ್ರಮವಾಗಿ ಪ್ರವೇಶಿಸಿ ಜಮೀನಿನಲ್ಲಿದ್ದ ಅಡಕೆ ತೆಂಗು, ಗಿಡಗಳನ್ನು ನಾಶ ಮಾಡಿ ಅಗಳು ನಿರ್ಮಿಸಿದ್ದಾರೆ ಎನ್ನುವ ವಿಚಾರದಲ್ಲಿ ರೈತ ಸಂಘದ ಪ್ರಮುಖರು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡಸಿದ ಬಳಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಧರ ಶೆಟ್ಟಿ ಬೈಲುಗುತ್ತು ರೈತ ಲೋಲಾಕ್ಷ ಅವರಿಗೆ ಸೇರಿದ ಭೂಮಿಯನ್ನು ವಶಪಡಿಸಿಕೊಂಡಿರುವ ಅರಣ್ಯಾದಿಕಾರಿಗಳು ತಮ್ಮ ಉದ್ದಟತನದಿಂದ ರಾಜ್ಯ ರಸ್ತೆಯ ಅಂಚಿನ ವರೆಗೂ ಭಾರೀ ಪ್ರಮಾಣದ ಅಗಳು ನಿರ್ಮಾಣ ಮಾಡಿ ಅನ್ಯಾಯ ಮಾಡಿದ್ದಾರೆ. ಇದು ಅರಣ್ಯಭೂಮಿ ಅಲ್ಲದಿದ್ದರೂ ಅರಣ್ಯಾದಿಕಾರಿಯವರು ಪೂರ್ವಾಗ್ರಹಪೀಡಿತರಾಗಿ ಜಮೀನನ್ನು ಅಕ್ರಮಿಸಿಕೊಂಡಿದ್ದಾರೆ.
ಇದು ತೀರಾ ಅನ್ಯಾಯ ಎಂದು ಅಕ್ರೋಶ ವ್ಯಕ್ತಪಡಿಸಿದರು. ಅರಣ್ಯಾಧಿಕಾರಿಗಳ ಕಣ್ಣ ಮುಂದೆಯೇ ಬೆಲೆಬಾಳುವ ಮರಗಳು ಕಳ್ಳರ ಪಾಲಾದರೂ ಸುಮ್ಮನಿರುತ್ತಾರೆ, ಅರಣ್ಯ ಭೂಮಿ ಅತಿಕ್ರಮಣ ಮಾಡಿ ಗೇರು ತೋಟ ನಿರ್ಮಾಣ ಮಾಡಿದರೂ ಕಣ್ಣಿದ್ದೂ ಕುರುಡರಾಗುತ್ತಾರೆ. ಆದರೆ ರೈತ ಲೋಲಾಕ್ಷ ಅವರ ಕುಮ್ಕಿ ಜಾಗವನ್ನೇ ವಶಪಡಿಸಿಕೊಂಡು ತಾರತಮ್ಯ ನೀತಿ ಅನುಸರಿಸಿದ್ದಾರೆ.
ಲೋಲಾಕ್ಷ ಅವರ ಭೂಮಿ ಅತಿಕ್ರಮಣ ಮಾಡಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆದೇಶ ನೀಡಿದ್ದಾರೆ, ಉನ್ನತ ಮಟ್ಟದ ಅಧಿಕಾರಿಗಳಿಗೆ ಈ ಬ್ಗಗೆ ಗೊತ್ತೇ ಇಲ್ಲ. ಯಾರ ಮಾತಿಗೂ ಬೆಲೆ ಕೊಡದೆ ಒಬ್ಬ ಫಾರೆಸ್ಟರ್ ನಿಂದ ಅತಿಕ್ರಮಣವಾಗಿದೆ ಎಂದು ಆರೋಪಿಸಿದ ಶ್ರೀಧರ ಶೆಟ್ಟಿ ತಕ್ಷಣ ಅಕ್ರಮವೆಸಗಿರುವ ಅರಣ್ಯಾಧಿಕಾರಿಯನ್ನು ಸೇವೆಯಿಂದ ವಜಾ ಮಾಡಬೇಕು , ಇಲಾಖೆಯವರು ನಿರ್ಮಾಣ ಮಾಡಿರುವ ಅಗಳನ್ನು ಮುಚ್ಚಬೇಕು, ನಷ್ಟವಾದ ಅಡಕೆ , ತೆಂಗು ಗಿಡಗಳಿಗೆ ಪರಿಹಾರ ನೀಡಬೇಕು ತಪ್ಪಿದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಈಶ್ವರ ಭಟ್ ಬಡಿಲ, ಮುಖಂಡರಾದ ಹರ್ಷಕುಮಾರ್ ಹೆಗ್ಡೆ, ಯತೀಂದ್ರ ಶೆಟ್ಟಿ ಮಠ ಸವಣೂರು, ಯತೀಶ್ ಇಡ್ಯಾಡಿ, ಈಶ್ವರ ಗೌಡ ಪಾಲೆಚ್ಚಾರು, ಯೂಸೂಫ್ ಪುಣಚ, ಶಶಿಕುಮಾರ್ ಮಲತ್ತಾರು, ಶಿವಚಂದ್ರ ಈಶ್ವರಮಂಗಲ, ಸುಬ್ರಹ್ಮಣ್ಯ ಭಟ್ ಉಪ್ಪಿನಂಗಡಿ,ವೆಂಕಪ್ಪ ಗೌಡ ಅಡೀಲು,ಭರತ್ ರೈ ಮತ್ತಿತರರು ಉಪಸ್ಥಿತರಿದ್ದರು.