ಪುತ್ತೂರು | ಬೇರೆ ಯಾರದ್ದೋ ಮಕ್ಕಳನ್ನು ಬಸ್ ನಿಲ್ದಾಣದ ಬಳಿ ಭಿಕ್ಷಾಟನೆಯಲ್ಲಿ ತೊಡಗಿಸಿಕೊಂಡ ಮಹಿಳೆ | ಸಾರ್ವಜನಿಕರಿಂದ ಚೈಲ್ಡ್ ಲೈನ್ ಗೆ ಮಾಹಿತಿ, ಮಕ್ಕಳ ರಕ್ಷಣೆ
ಬೇರೆಯವರ ಮಕ್ಕಳನ್ನು ತನ್ನೊಂದಿಗೆ ಇರಿಸಿಕೊಂಡು ಭಿಕ್ಷಾಟನೆ ಮಾಡಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಚೈಲ್ಡ್ ಲೈನ್ 1098 ಹೆಲ್ಪ್ ಲೈನ್ ಗೆ ಬಂದ ಮಾಹಿತಿ ಮೇರೆಗೆ ಚೈಲ್ಡ್ ಹೆಲ್ಪ್ ಲೈನ್ ಕೇಂದ್ರ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನೆ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಪುತ್ತೂರಿನ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿ ನಡೆದಿದೆ.
ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಹಿಡಿದುಕೊಂಡು ಸುರತ್ಕಲ್ ಮೂಲದ ಮಹಿಳೆಯೊಬ್ಬರು ಪುತ್ತೂರು ತಾಲೂಕಿನ ಖಾಸಗಿ ಬಸ್ ನಿಲ್ದಾಣದ ಬಳಿ ಅಪ್ರಾಪ್ತ ವಯಸ್ಸಿನ ಮಕ್ಕಳು ಭಿಕ್ಷಾಟನೆಯಲ್ಲಿ ನಿರತರಾಗಿದ್ದಾರೆ ಎಂಬುದಾಗಿ ಸಾರ್ವಜನಿಕರಿಂದ ಬಂದ ಮಾಹಿತಿ ಪ್ರಕಾರ ಚೈಲ್ಡ್ ಹೆಲ್ಡ್ ಲೈನ್ ಕೇಂದ್ರ ಸಂಯೋಜಕರಾದ ದೀಕ್ಷಿತ್ ಅಚಪ್ಪಾಡಿ ಮತ್ತು ಸದಸ್ಯರಾದ ರೇವತಿ ಹೊಸಬೆಟ್ಟು ಅಸುಂತ ಡಿಸೋಜ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯಾದ ಗಾಯತ್ರಿ ಮತ್ತು ಪುತ್ತೂರು ಮಹಿಳಾ ಪೊಲೀಸ್ ಠಾಣಾ ಸಿಬ್ಬಂದಿಗಳು ಮಕ್ಕಳಿಬ್ಬರನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ ಮಕ್ಕಳಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ವಲಸೆ ಕಾರ್ಮಿಕ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿಕೊಂಡಿರುತ್ತಾರೆ. ಹೆಚ್ಚಿನ ಮಕ್ಕಳ ರಕ್ಷಣೆಯನ್ನು ಮಾಡಿ ಪುನರ್ವಸತಿಯನ್ನು ಕಲ್ಪಿಸಿಕೊಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯಾವುದೋ ಮಗುವನ್ನು ಎಲ್ಲಿಂದಲೋ ತಂದು ಭಿಕ್ಷಾಟನೆ ನಡೆಸುತ್ತಿರುವ ಈ ದಂಧೆಗೆ ಕಡಿವಾಣ ಹಾಕಬೇಕಾಗಿರುತ್ತದೆ. ಎಲ್ಲಿಯಾದರೂ ಮಕ್ಕಳನ್ನು ಭಿಕ್ಷಾಟನೆಯಲ್ಲಿ ತೊಡಗಿಸಿಕೊಂಡಲ್ಲಿ ಕೂಡಲೇ ಸಾರ್ವಜನಿಕರು ಚೈಲ್ಡ್ ಲೈನ್- 1098 ಸಂಖ್ಯೆ ಗೆ ಮಾಹಿತಿ ನೀಡಬಹುದಾಗಿದೆ.