ಇನ್ನು ಮುಂದೆ ಮಹಿಳಾ ಪಂಚಾಯತಿ ಅಧ್ಯಕ್ಷರ ಪತಿರಾಯರು ಆಡಳಿತದಲ್ಲಿ ಮೂಗು ತೂರಿಸುವಂತಿಲ್ಲ|ಅಧಿಕಾರ ಚಲಾಯಿಸಿದರೆ ಪತ್ನಿಯ ಸದಸ್ಯತ್ವವೇ ರದ್ದು!!

ಮಹಿಳಾ ಅಧ್ಯಕ್ಷರು ಇರುವ ಗ್ರಾಮ ಪಂಚಾಯಿತಿಗಳ ಆಡಳಿತದಲ್ಲಿ ಪತಿರಾಯರು ಮೂಗು ತೂರಿಸುತ್ತಿರುವ ಬಗ್ಗೆ ಇತ್ತೀಚೆಗೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಪತ್ನಿ ಪರವಾಗಿ ಪತಿ ಅಥವಾ ಇನ್ನಾರೇ ಆಗಲಿ ಅಧಿಕಾರ ಚಲಾಯಿಸಿದರೆ ಅಧ್ಯಕ್ಷರ ಸದಸ್ಯತ್ವ ರದ್ದುಪಡಿಸಲು ಕಾನೂನಿನಲ್ಲಿ ಅವಕಾಶವಿದ್ದು, ಕಾರ್ಯರೂಪಕ್ಕೆ ತರಲು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಂದಾಗಿದೆ.

 

ಬಹುತೇಕ ಗ್ರಾಪಂಗಳಲ್ಲಿ ಮಹಿಳಾ ಮತ್ತು ಜಾತಿ ಮೀಸಲು ಅನ್ವಯ ಹೆಚ್ಚಿನ ಸಂಖ್ಯೆಯ ಸದಸ್ಯೆಯರು ಗ್ರಾಪಂಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಆದರೆ, ಅವರ ಪರವಾಗಿ ಗಂಡಂದಿರ ಅಧಿಪತ್ಯವೇ ಜೋರಾಗಿದೆ. ಪರಿಣಾಮ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವಿನ ಸಂಘರ್ಷಕ್ಕೆ ಇದು ಕಾರಣವಾಗಿದೆ.

ತಮಗೆ ಅಧಿಕಾರವಿಲ್ಲದಿದ್ದರೂ ಅಧ್ಯಕ್ಷರ ಪತಿರಾಯರು ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದು, ಅಧಿಕಾರಿಗಳಿಗೆ ನಿರ್ದೇಶನ ನೀಡುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ತಮ್ಮ ಹಿಂಬಾಲಕರ ಮೂಲಕ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸುತ್ತಿರುವುದು ಸಾಮಾನ್ಯವಾಗಿದೆ. ಈ ಬಗ್ಗೆ ದೂರುಗಳು ವ್ಯಾಪಕವಾಗಿವೆ.

ಸದಸ್ಯತ್ವ ರದ್ದತಿಗೆ ಪ್ರಸ್ತಾವನೆ

ಪತ್ನಿಯರ ಪರವಾಗಿ ಪತಿಯರ ಹಾಗೂ ಸಂಬಂಧಿಕರ ಹಸ್ತಕ್ಷೇಪ ಅಥವಾ ನಿರ್ಧಾರ ತೆಗೆದುಕೊಳ್ಳುವುದು ಕಾನೂನು ಬಾಹಿರವಾಗಿದೆ. ಹಸ್ತಕ್ಷೇಪ ನಡೆಸಿದ ಸಂದರ್ಭದಲ್ಲಿ ಅಂಥವರ ವಿರುದ್ಧ ಕ್ರಮ ಜರುಗಿಸಲು ಹಾಗೂ ಸದಸ್ಯತ್ವವನ್ನು ರದ್ದುಪಡಿಸಲು ಜಿಲ್ಲಾ/ತಾಲೂಕು ಪಂಚಾಯಿತಿಗೆ ಪ್ರಸ್ತಾವನೆ ಸಲ್ಲಿಸುವಂತೆ ಬೆಂಗಳೂರು ಗ್ರಾಮಾಂತರ ಜಿಪಂ ಸಿಇಒ ರವಿಕುಮಾರ್‌ ಅವರು ಪಿಡಿಒಗಳಿಗೆ ಸೂಚನೆ ನೀಡಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಮುಂದಿನ ಕ್ರಮ ಜರುಗಿಸುವಂತೆ ಆಯಾ ತಾಲೂಕುಗಳ ಕಾರ್ಯನಿರ್ವಹಣಾ ಅಧಿಕಾರಿ (ಇಒ)ಗಳಿಗೆ ಹಾಗೂ ಜಿಪಂ ಕಚೇರಿ ಸಿಬ್ಬಂದಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಕಾನೂನು ಏನು ಹೇಳುತ್ತದೆ?

ಪಂಚಾಯಿತಿಯ ಯಾವುದೇ ಕಾಮಗಾರಿಗಳನ್ನು ಕಾರ್ಯಗತಗೊಳಿಸುವಾಗ, ಕರಾರು ಸಂಬಂಧದ ಅಥವಾ ಕಾಮಗಾರಿಗೆ ಸಂಬಂಧಿಸಿದ ಯಾವುದೇ ವ್ಯವಹಾರದಲ್ಲಿ ಕುಟುಂಬದ ಹತ್ತಿರದ ಸಂಬಂಧಿಯಾಗಿರುವ ಯಾವೊಬ್ಬ ವ್ಯಕ್ತಿಯೊಂದಿಗೆ ಪ್ರತ್ಯಕ್ಷವಾಗಿ ತೊಡಗಿರುವುದು ಕಂಡುಬಂದರೆ ಅಥವಾ ಪಾಲುದಾರನಂತೆ, ನೌಕರನಂತೆ ಅಥವಾ ಅನ್ಯ ಸಂಘ-ಸಂಸ್ಥೆ, ಮಂಡಳಿಯಲ್ಲಿ ಸದಸ್ಯನಂತೆ ಸಹಭಾಗಿಯಾಗಿರುವುದು ಖಚಿತಪಟ್ಟರೆ ಆ ಸದಸ್ಯರನ್ನು ಸದಸ್ಯತ್ವದಿಂದ ತೆಗೆದುಹಾಕಬಹುದಾಗಿದೆ ಎಂದು ಕರ್ನಾಟಕ ಗ್ರಾಮಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮದಲ್ಲಿ ತಿಳಿಸಲಾಗಿದೆ.

ಗ್ರಾಮಾಂತರ ಜಿಲ್ಲೆಯ ಯಾವುದೇ ಗ್ರಾಪಂಗಳಲ್ಲಿ ಮಹಿಳಾ ಸದಸ್ಯರ ಹೆಸರಲ್ಲಿ ಪತಿ ಅಥವಾ ಕುಟುಂಬಸ್ಥರ ಹಸ್ತಕ್ಷೇಪವಿರುವ ಬಗ್ಗೆ ದೂರು ಬಂದ 24 ಗಂಟೆಯೊಳಗೆ ಸದಸ್ಯತ್ವ ರದ್ದತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಪಂ ಸಿಇಒ ರವಿಕುಮಾರ್‌ ತಿಳಿಸಿದ್ದಾರೆ.

ಈ ರೀತಿಯ ಕ್ರಮ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಬಂದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ಯಾವುದೇ ರೀತಿಯ ಸಂಘರ್ಷಗಳಿಗೆ ಜಾಗವಿರುವುದಿಲ್ಲ. ಇಂತಹ ಒಳ್ಳೆಯ ಕ್ರಮ ಕೈಗೊಳ್ಳುವ ನಿರ್ಧಾರ ತೆಗೆದುಕೊಂಡ ಈ ಜಿಲ್ಲಾ ಪಂಚಾಯಿತಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Leave A Reply

Your email address will not be published.