ಪತಿಯ ವರ್ಕ್ ಫ್ರಮ್ ಹೋಮ್ ನಿಲ್ಲಿಸಿ ಆಫೀಸಿಗೆ ಕರೆಸಿಕೊಳ್ಳಿ ಎಂದು ಬಾಸ್ ಗೆ ಪತ್ರ ಬರೆದ ಉದ್ಯೋಗಿಯ ಪತ್ನಿ !? | ಆ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್!!
ಕೊರೋನ ವೈರಸ್ ಜನರ ಜೀವನ ಶೈಲಿಯನ್ನು ಮಾತ್ರ ಬದಲಾಯಿಸದೆ, ಅವರು ಕೆಲಸ ಮಾಡುವ ವಿಧಾನವನ್ನೂ ಬದಲಿಸಿದೆ. ಕೊರೋನಾ ಪ್ರಾರಂಭವಾದಾಗಿನಿಂದ, ಸಾಕಷ್ಟು ಜನರು ಮನೆಯಿಂದ ಕಚೇರಿ ಕೆಲಸ ಮಾಡುತ್ತಿರುವುದು ಎಲ್ಲರಿಗೂ ತಿಳಿದೇ ಇದೆ.
ಇತ್ತೀಚೆಗೆ, ಉದ್ಯಮಿ ಹರ್ಷ ಗೋಯೆಂಕಾ ಅವರು, ಸಾಮಾಜಿಕ ಮಾಧ್ಯಮದಲ್ಲಿ ಒಂದು ಆಸಕ್ತಿಕರ ಪತ್ರವನ್ನು ಹಂಚಿಕೊಂಡಿದ್ದಾರೆ. ಆ ಪತ್ರವನ್ನು ಅವರ ಕಂಪನಿಯೊಂದರಲ್ಲಿ ಕೆಲಸ ಮಾಡುವ ಉದ್ಯೋಗಿಯ ಪತ್ನಿ ಕಳುಹಿಸಿದ್ದಾರೆ. ಅದರಲ್ಲಿ, ಉದ್ಯೋಗಿಯ ಪತ್ನಿ ತನ್ನ ಗಂಡನ ಮನೆಯಿಂದ ಕೆಲಸ ಸ್ಥಗಿತಗೊಳಿಸಬೇಕು ಮತ್ತು ಕಚೇರಿಯಿಂದ ಕೆಲಸ ಆರಂಭಿಸಬೇಕು ಎಂದು ಕೋರಿದ್ದಾರೆ. ಇದಕ್ಕಾಗಿ ಉದ್ಯೋಗಿಯ ಪತ್ನಿ ಹಲವು ಕಾರಣಗಳನ್ನು ನೀಡಿದ್ದಾಳೆ.
ಹರ್ಷ ಗೋಯೆಂಕಾ ಉದ್ಯೋಗಿಯ ಪತ್ನಿ ಬರೆದ ಪತ್ರವನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ, ‘ಪ್ರಿಯ ಸರ್, ನಾನು ನಿಮ್ಮ ಉದ್ಯೋಗಿ ಮನೋಜ್ ಅವರ ಪತ್ನಿ. ನಾನು ನಿಮಗೆ ಮನವಿ ಮಾಡುತ್ತೇನೆ ದಯವಿಟ್ಟು ಈಗ ಕಚೇರಿಯಿಂದ ಕೆಲಸ ಆರಂಭಿಸಿ. ನನ್ನ ಪತಿ ಕೊರೋನಾ ಲಸಿಕೆಯ ಎರಡೂ ಪ್ರಮಾಣಗಳನ್ನು ತೆಗೆದುಕೊಂಡಿದ್ದಾರೆ ಮತ್ತು ಕೊರೋನಾ ಪ್ರೋಟೋಕಾಲ್ ಅನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಾರೆ. ಇನ್ನೂ ಸ್ವಲ್ಪ ಸಮಯ ಮನೆಯಿಂದ ಕೆಲಸ ಮುಂದುವರಿದರೆ ನಮ್ಮ ಮದುವೆ ಮುರಿದು ಬೀಳುವ ಸಾಧ್ಯತೆ ಇದೆ’ ಎಂದು ಬರೆದಿದ್ದಾಳೆ.
ಮುಂದುವರೆದು ಬರೆದಿರುವ ಪತ್ನಿ, ‘ನನ್ನ ಗಂಡ ದಿನದಲ್ಲಿ 10 ಬಾರಿ ಕಾಫಿ ಸೇವಿಸುತ್ತಾರೆ. ಬೇರೆ ಬೇರೆ ಕೊಠಡಿಗಳಿಗೆ ಹೋಗುತ್ತಾರೆ ಮತ್ತು ಎಲ್ಲವನ್ನು ಅಸ್ತವ್ಯಸ್ತ ಮಾಡುತ್ತಾರೆ. ಇದಲ್ಲದೆ ಸತತವಾಗಿ ಅವರು ತಿನ್ನಲು ಏನಾದರು ಕೇಳುತ್ತಾರೆ. ಕೆಲಸದ ಅವಧಿಯಲ್ಲಿ ಅವರು ಮಲಗುವುದನ್ನೂ ನಾನು ನೋಡಿದ್ದೇನೆ. ನನ್ನ ಬಳಿ ಈಗಾಗಲೇ ಎರಡು ಮಕ್ಕಳಿವೆ. ನಾನು ನನ್ನ ಮಕ್ಕಳ ಕಾಳಜಿ ವಹಿಸಬೇಕು. ನನಗೆ ಸಹಾಯ ಮಾಡಿ, ನಮಸ್ಕಾರ’ ಎಂದು ಹೇಳಿದ್ದಾರೆ.
ಈ ಸ್ವಾರಸ್ಯಕರ ಪತ್ರವನ್ನು ಹಂಚಿಕೊಂಡ ಹರ್ಷ ಗೋಯೆಂಕಾ, ‘ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ತಮಗೆ ತಿಳಿದಿಲ್ಲ’ ಎಂದಿದ್ದಾರೆ. ಆದರೆ ಅವರು ಹಂಚಿಕೊಂಡ ಈ ಪತ್ರ ಇದೀಗ ಭಾರಿ ವೈರಲ್ ಆಗಿದೆ. ಹರ್ಷ ಗೋಯೆಂಕಾ ಅವರ ಉದ್ಯೋಗಿಯ ಹೆಂಡತಿಯ ಕೈಬರಹವನ್ನು ನೋಡಿ, ಬಳಕೆದಾರರು ಗೊಂದಲಕ್ಕೊಳಗಾಗಿದ್ದಾರೆ. ಅನೇಕ ಬಳಕೆದಾರರು ಇದನ್ನು ತಮ್ಮೊಂದಿಗೆ ಸಂಬಂಧ ಕಲ್ಪಿಸಿ ನೋಡುತ್ತಿದ್ದಾರೆ. ನಿಜಾರ್ಥದಲ್ಲಿ ಕೆಲವರಿಗೆ ಇದು ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.
ಇದಲ್ಲದೆ ಈ ಪತ್ರದ ವಿಷಯದಲ್ಲಿ ಜನರು ಪರಸ್ಪರ ತದ್ವಿರುದ್ಧ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕೆಲ ಜನರು ಮನೋಜ್ ಅವರನ್ನು ಬೆಂಬಲಿಸಿ ಹೇಳಿಕೆಗಳನ್ನು ನೀಡುತ್ತಿದ್ದರೆ, ಕೆಲವರು ಅವರ ಪತ್ನಿಯನ್ನು ಬೆಂಬಲಿಸಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಲೆಳೆಯುವ ರೀತಿಯಲ್ಲಿ ಪ್ರತಿಕ್ರಿಯೆ ನೀಡಿರುವ ಒಬ್ಬ ಬಳಕೆದಾರ, ಮನೋಜ್ ಇಷ್ಟೊಂದು ಕಾಫಿ ಕುಡಿಯುತ್ತಿರುವ ಕಾರಣ ಅವರ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆಯಾ ಎಂಬುದನ್ನು ಪರೀಕ್ಷಿಸಿ ಎಂದು ಹೇಳಿದ್ದಾನೆ.