ಮುಕ್ಕೂರು : ಗಣೇಶೋತ್ಸವ ಆಚರಣೆ,ಸಭಾಕಾರ್ಯಕ್ರಮ ಹಾಗೂ ಸಮ್ಮಾನ ಸಮಾರಂಭ
ಗ್ರಾಮಾಭಿವೃದ್ಧಿ ಚಿಂತನೆ ಅನುಷ್ಠಾನದಿಂದ ಊರು ಬೆಳಗುತ್ತದೆ : ಮಹೇಶ್ ಪುಚ್ಚಪ್ಪಾಡಿ
ಪವರ್ ಮ್ಯಾನ್ ಮಹಾಂತೇಶ್, ಗ್ರಾಫಿಕ್ ಡಿಸೈನರ್ ನಿತಿನ್ ಕಾನಾವು ಅವರಿಗೆ ಗೌರಾವರ್ಪಣೆ
ಮುಕ್ಕೂರು : ಸಾಮಾಜಿಕ ಬದ್ಧತೆಯ ನೆಲೆಯಲ್ಲಿ ಸಂಘಟನೆಗಳು ಗ್ರಾಮಾಭಿವೃದ್ಧಿಯ ಚಿಂತನೆಗಳನ್ನು ಅನುಷ್ಠಾನಿಸಿದಾಗ ಆಗ ಊರು ಬೆಳಗುತ್ತದೆ. ಸಂಘಟನೆಯು ಶಕ್ತಿಯುತವಾಗುತ್ತದೆ ಎಂದು ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಮಹೇಶ್ ಪುಚ್ಛಪ್ಪಾಡಿ ಅಭಿಪ್ರಾಯಿಸಿದರು.
ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಮುಕ್ಕೂರು ವಠಾರದಲ್ಲಿ 12 ನೇ ವರ್ಷದ ಗಣೇಶೋತ್ಸವ ಆಚರಣೆಯ ಸಭಾಕಾರ್ಯಕ್ರಮ ಹಾಗೂ ಸಮ್ಮಾನ ಸಭೆ ಹಾಗೂ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ತನ್ನೂರಿನ ಹಿತ ಕಾಪಾಡುವುದು ಸಂಘಟನೆಯ ಆದ್ಯತೆಯಾಗಬೇಕು. ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಸದಾ ಕ್ರಿಯಾಶೀಲತೆಯಿಂದ ಮುನ್ನಡೆಯಬೇಕು. ಆ ಕಾರ್ಯ ಮುಕ್ಕೂರು ಕುಂಡಡ್ಕ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮೂಲಕ ಸಾಕಾರಗೊಳ್ಳುತ್ತಿರುವುದು ಶ್ಲಾಘನೀಯ ಸಂಗತಿ ಎಂದು ಪ್ರಶಂಸಿದರು.
ಸಭಾಧ್ಯಕ್ಷತೆ ವಹಿಸಿದ ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಹತ್ತಾರು ವರ್ಷಗಳ ಹತ್ತಾರು ಕಾರ್ಯಚಟುವಟಿಕೆಗಳ ಮೂಲಕ ಸಮಿತಿಯು ತನ್ನ ಸಾಮಾಜಿಕ ಸೇವಾ ಕಾರ್ಯವನ್ನು ನಡೆಸಿದೆ. ಸಂಘದ ಪ್ರತಿ ಕಾರ್ಯಕ್ಕೆ ಈ ಊರಿನ ಜನರು ಸಹಕಾರವೇ ಯಶಸ್ಸಿಗೆ ಕಾರಣ. ಕೊರೊನಾ ಸಂಕಷ್ಟದ ಕಾಲಘಟ್ಟದಲ್ಲಿ ಮಕ್ಕಳ ಮನಸ್ಸನ್ನು ದೇಸಿಯ ಕ್ರೀಡೆಯತ್ತ ಸೆಳೆಯುವ ಜತೆಗೆ ಇಬ್ಬರು ಸಾಧಕರನ್ನು ಸಮ್ಮಾನಿಸುವ ಕಾರ್ಯ ನಡೆದಿದ್ದು ಭವಿಷ್ಯದಲ್ಲಿ ಇನ್ನಷ್ಟು ಜನಪರ ಕಾರ್ಯ ನಡೆಸಲಾಗುವುದು ಎಂದರು.
ಸಮ್ಮಾನ ನೆರವೇರಿಸಿದ ಮಂಗಳೂರು ರಾಮಕೃಷ್ಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ನಿರ್ದೇಶಕ ಕುಂಬ್ರ ದಯಾಕರ ಆಳ್ವ ಮಾತನಾಡಿ, ಗಣೇಶೋತ್ಸವ ಸಮಿತಿ ಪ್ರತಿ ವರ್ಷವು ಮಾದರಿ ಕಾರ್ಯಕ್ರಮ ಅನುಷ್ಠಾನಿಸುತ್ತದೆ. ಹಾಗಾಗಿ ಹತ್ತೂರಲ್ಲಿಯು ಸಂಘಟನೆ ಛಾಪು ಹಬ್ಬಿದೆ. ಜಾತಿ, ಮತ, ಧರ್ಮದ ಬೇಧವಿಲ್ಲದ ಸಾಮರಸ್ಯದ ಕೊಂಡಿಯಾಗಿ ಸಂಘಟನೆ ಕೆಲಸ ಮಾಡುತ್ತಿರುವುದರಿಂದ ಊರಿಗೆ ಕೀರ್ತಿ ಬಂದಿದೆ ಎಂದರು.
ಪೆರುವಾಜೆ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ, ನಿರ್ದಿಷ್ಟ ಗುರಿಯೊಂದಿಗೆ ಸಂಘಟನೆಯು ತನ್ನ ಕಾರ್ಯಕ್ಷೇತ್ರದಲ್ಲಿ ಮುನ್ನೆಡೆದಾಗ ಅದರಿಂದ ಯಶಸ್ಸು ದೊರೆಯಲು ಸಾಧ್ಯವಿದೆ. ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆ ನಿಟ್ಟಿನಲ್ಲಿ ಅತ್ಯುತ್ತಮ ಕೆಲಸ ಕಾರ್ಯ ನಡೆಸಿದೆ ಎಂದರು.
ಪುತ್ತೂರು ನೋಟರಿ ನ್ಯಾಯವಾದಿ ಬಾಬು ಗೌಡ ಅಡ್ಯತಕಂಡ ಮಾತನಾಡಿ, ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥಭಾವದಿಂದ ದುಡಿಯುವ ಸಂಘಟನೆ ಸಮಾಜದಲ್ಲಿ ಶ್ವಾಶತ ಸ್ಥಾನ ಪಡೆಯುತ್ತದೆ. ಮುಕ್ಕೂರಿನಲ್ಲಿ ಹತ್ತಾರು ಮಂದಿ ಸೇರಿಕೊಂಡು ಸಂಘಟನೆಯನ್ನು ರಚಿಸಿಕೊಂಡು ಊರಿಗೆ ಪ್ರಗತಿಗೋಸ್ಕರ ಚಟುವಟಿಕೆ ನಡೆಸುತ್ತಾರೆ. ಆ ಕಾರ್ಯಕ್ಕೆ ನಮ್ಮೆಲ್ಲರ ಬೆಂಬಲವಿದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ವಕ್ಪ್ ಬೋರ್ಡ್ ಸದಸ್ಯ ಇಸ್ಮಾಯಿಲ್ ಕಾನಾವು, ಪೆರುವಾಜೆ ಗ್ರಾ.ಪಂ.ಉಪಾಧ್ಯಕ್ಷ ಚಂದ್ರಾವತಿ ಇಟ್ರಾಡಿ, ಸದಸ್ಯೆ ಗುಲಾಬಿ ಬೊಮ್ಮೆಮ್ಮಾರು,ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ ಉಪಸ್ಥಿತರಿದ್ದರು. ಪುಣ್ಯಶ್ರೀ ಪ್ರಾರ್ಥಿಸಿದರು. ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು ವಂದಿಸಿದರು. ರಕ್ಷಿತಾ ಅಡ್ಯತಕಂಡ ನಿರೂಪಿಸಿದರು.
ಸಮ್ಮಾನ ಸಮಾರಂಭ
ಕೊರೊನಾ ಕಾಲಘಟ್ಟದಲ್ಲಿ ಸೇವೆ ಸಲ್ಲಿಸಿದ ಪೆರುವಾಜೆ ಗ್ರಾಮದ ಪವರ್ ಮೆನ್ ಮಹಾಂತೇಶ್, ವಿಶಿಷ್ಟ ಸಾಧಕ ಗ್ರಾಫಿಕ್ ಡಿಸೈನರ್ ನಿತಿನ್ ಕಾನಾವು ಅವರನ್ನು ಸಮ್ಮಾನಿಸಲಾಯಿತು. ಬೃಂದಾ ಮುಕ್ಕೂರು, ನಮಿತಾ ಅಡ್ಯತಕಂಡ,ಅಶ್ವಿನಿ ಜಾಲ್ಪಣೆ ಸಮ್ಮಾನಪತ್ರ ವಾಚಿಸಿದರು.
ದೀಪ, ಹೂವಿನ ಅಲಂಕಾರ
ತುಳುನಾಡಿನ ಸಂಪ್ರದಾಯ ಪ್ರಕಾರ ಗಣಪತಿ ಭಾವಚಿತ್ರ ಹೂವಿನಿಂದ ಶೃಂಗರಿಸಿ ಗಣಪತಿಯನ್ನು ಸ್ಮರಿಸಲಾಯಿತು. ಪತಂಜಲಿ ಶಾಸ್ತ್ರೀ ಮುಕ್ಕೂರು ದೀಪ ಪ್ರಜ್ವಲಿಸಿದರು. ಭಜನೆ ಹಾಡುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ವಿವಿಧ ಸ್ಪರ್ಧೆಗಳು
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಹಾಗೂ ಸಾರ್ವಜನಿಕ ವಿಭಾಗದಲ್ಲಿ ವಿವಿಧ ಸರ್ಧೆಗಳು ನಡೆಯಿತು. ಪ್ರಶಸ್ತಿ ವಿಜೇತರಿಗೆ ಪದಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಯಕ್ಷಿತಾ ಚಾಮುಂಡಿಮೂಲೆ ಬಹುಮಾನ ಪಟ್ಟಿ ವಾಚಿಸಿದರು. ಕ್ರೀಡಾ ತೀರ್ಪುಗಾರರಾಗಿ ಯತೀಶ್ ಕಾನಾವುಜಾಲು, ದಿನೇಶ್ ಕಂಬುರ್ತೋಡಿ, ಪುರುಷೋತ್ತಮ ಕುಂಡಡ್ಕ, ರೂಪಾ, ಬೃಂದಾ ಮಂಜುನಾಥನಗರ, ಮಹೇಶ್ ಕುಂಡಡ್ಕ, ಶಶಿಕುಮಾರ್ ಮೊದಲಾದವರು ಸಹಕರಿಸಿದರು. ಸಮಾರೋಪ ಸಮಾರಂಭದಲ್ಲಿ ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ, ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು, ಪ್ರಗತಿಪರ ಕೃಷಿಕ ಗುಡ್ಡಪ್ಪ ಗೌಡ ಅಡ್ಯತಕಂಡ, ಅಂಗನವಾಡಿ ಶಿಕ್ಷಕಿ ರೂಪಾ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.