ಸ್ವಯಂ ನಿವೃತ್ತರಾದ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕ ಗಿರಿಶಂಕರ್ ಸುಲಾಯರಿಗೆ ಹಿರಿಯ ವಿದ್ಯಾರ್ಥಿಗಳಿಂದ ಗುರುವಂದನೆ
ಪುತ್ತೂರು: ಗುರು ಮತ್ತು ಶಿಷ್ಯರು ಅನ್ನುವ ಪವಿತ್ರ ಸಂಬಂದಕ್ಕೆ ಸಮಾಜದ ಮುಂದೆ ಸ್ಪಷ್ಟ ಅರ್ಥವನ್ನು ಕೊಟ್ಟ ಪ್ರಗತಿ ವಿದ್ಯಾದೇಗುಲದ ಹಿರಿಯ ವಿದ್ಯಾರ್ಥಿಗಳು. ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯ ಗಿರಿಶಂಕರ್ ಸುಲಾಯ ಸ್ವಯಂ ನಿವೃತ್ತಿಗೊಂಡಿದ್ದರಿಂದ ಅವರ ಹಳೆ ವಿದ್ಯಾರ್ಥಿಗಳು ಅವರನ್ನು ಶಿಕ್ಷಕರ ದಿನಾಚರಣೆಯ ದಿನ ಅಭೂತಪೂರ್ವವಾದ ಕಾರ್ಯಕ್ರಮ ಆಯೋಜಿಸಿ ಗುರುಕಾಣಿಕೆಯನ್ನು ಅರ್ಪಿಸಿ ಅವರ ಮುಂದಿನ ಜೀವನ ತನ್ನ ಸಂಸಾರದೊಂದಿಗೆ ಸುಖಮಯವಾಗಿ ಮುಂದುವರಿಯಲಿ ಎಂದು ಹಿರಿಯ ವಿದ್ಯಾರ್ಥಿಗಳು ಹಾರೈಸಿದರು.
ಗಿರಿಶಂಕರ್ ಸುಲಾಯರ ಗುರುವಂದನೆ ಕಾರ್ಯಕ್ರಮ ಸವಣೂರಿನ ದೇವಸ್ಯದಲ್ಲಿ ನಡೆಯಿತು.
ಗಿರಿಶಂಕರ್ ಅನ್ನುವ ಒಬ್ಬ ಶಿಕ್ಷಕನಾಗಿ, ಸಾಮಾಜಿಕವಾಗಿ,ಸಾಂಸ್ಕೃತಿಕ ವಾಗಿ,ಸಂಘಟಕನಾಗಿ, ಕಾಣಿಯೂರು,ಸವಣೂರು,ಬೆಳ್ಳಾರೆ ಮತ್ತು ಕಡಬ ತಾಲೂಕಿನ ಹೆಚ್ಚಿನ ಕಡೆ ಚಿರಪರಿಚಿತ.
ತನ್ನ ಹಠ,ಸಮಾಜದ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ತುಂಬುವಲ್ಲಿಂದ ಹಿಡಿದು ಅವರು ಭೋದಿಸುವ ಗಣಿತದ ವಿಚಾರಗಳಿಂದ ವಿದ್ಯಾರ್ಥಿಗಳಿಂದ ಹಿಡಿದು ವಿದ್ಯಾರ್ಥಿಗಳ ಹೆತ್ತವರಲ್ಲದೆ ಇಡೀ ಊರಿಗೆ ಅಚ್ಚುಮೆಚ್ಚಿನ ಆದರ್ಶ ಶಿಕ್ಷಕ.
ಅವರ ಹಿರಿಯ ವಿದ್ಯಾರ್ಥಿಗಳು ಸೇರಿ ಸುಮಾರು ಒಂದು ಲಕ್ಷ ಅರವತ್ತು ಸಾವಿರ ವೆಚ್ಚದ ಚಿನ್ನದ ನಾಣ್ಯ ಮತ್ತು ಹೊಸ ರೀತಿಯ ಅದ್ಬುತ ಕಾರ್ಯಕ್ರಮ ನಡೆಸಲು ಸಹಕರಿಸಿದ ಹಿರಿಯ ವಿದ್ಯಾರ್ಥಿಗಳ ಹೆಸರುಗಳನ್ನು ಒಳಗೊಂಡ ದೊಡ್ಡ ಮೊಮೆಂಟೋ ಅರ್ಪಿಸಿದರು.
ಗಿರಿಶಂಕರ್ ಸುಲಾಯ, ಪತ್ನಿ ಕಾಣಿಯೂರು ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಸುಜಯ, ಪುತ್ರಿ ಮಾನ್ವಿಗೆ ವೇದಿಕೆಯಲ್ಲಿ ಅತಿಥಿಗಳು ಸನ್ಮಾನಿಸಿದರು.
ಸನ್ಮಾನ ಕಾರ್ಯಕ್ರಮ ನೆರವೇರಿಸಿದ ಬೆಳ್ಳಾರೆ ಠಾಣೆಯ ಎಸ್.ಐ ಆಂಜನೇಯ ರೆಡ್ಡಿ ಮಾತನಾಡಿ ಶಿಕ್ಷಣ, ಸಾಮಾಜಿಕ, ರಾಜಕೀಯ, ಆಟೋಟ, ಸಾಂಸ್ಕೃತಿಕ ಕ್ಷೇತ್ರದ ಸಾಧಕರಿಗೆ ಒಟ್ಟುಮಾಡಿ ಸರ್ಕಾರ ಆಲ್ರೌಂಡರ್ ಪ್ರಶಸ್ತಿ ನೀಡಿದರೆ ಅದಕ್ಕೆ ಗಿರಿಶಂಕರ್ ಸುಲಾಯರೇ ಅರ್ಹರು ಎಂದರು. ಅವರು ಅನೇಕ ವಿದ್ಯಾರ್ಥಿಗಳನ್ನು ತಿದ್ದಿ ಶ್ರೇಷ್ಟ ಪ್ರಜೆಗಳನ್ನು ಸಮಾಜಕ್ಕೆ ನೀಡಿದ ಶ್ರೇಷ್ಟ ವ್ಯಕ್ತಿ ಅಂದರು.
ನಾನು ಕಡು ಬಡತನದಿಂದ ಬಂದು ಶಿಕ್ಷಕನಾಗಿ ಸೇರಿದ್ದೆ ಇಂದು ಈ ಹುದ್ದೆಯಲ್ಲಿದ್ದರೂ ಸಮಾಜದ ಅತ್ಯುನ್ನತ ಆತ್ಮ ತೃಪ್ತಿ ಇರುವ ಕೆಲಸ ಶಿಕ್ಷಕ ವೃತ್ತಿ ಎಂದರು. ಗಿರಿಶಂಕರ್ ಅವರು ಶಿಲ್ಪಿಯ ರೂಪದಲ್ಲಿ ನಿಂತು ಅನೇಕ ದೇವರುಗಳನ್ನ ಸಮಾಜಕ್ಕೆ ನೀಡಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿದಲ್ಲೂ ಅಧ್ಬುತ ಸಾಧಕನಾಗಿ, ರಾಜಕೀಯದಲ್ಲೂ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲೆಯಲ್ಲೇ ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ದಾಖಲಿಸುವುದು ಅಷ್ಟು ಸುಲಭದ ವಿಷಯವಲ್ಲ, ಅವರೊಬ್ಬ ಸ್ವಾರ್ಥ ರಹಿತ ವ್ಯಕ್ತಿತ್ವ. ನಾನು ಈ ಊರಿನಲ್ಲಿ ಇಷ್ಟಪಡುವ ವ್ಯಕ್ತಿಗಳಲ್ಲಿ ಇವರು ಒಬ್ಬರು ಎಂದರು.
ಅತಿಥಿಯಾಗಿದ್ದ ಸವಣೂರು ಪುದುಬೆಟ್ಟು ಜಿನ ಮಂದಿರದ ಅಧ್ಯಕ್ಷ ಶತ್ರುಂಜಯ ಜೈನ್ ಮಾತನಾಡಿ ಗಿರಿ ಶಂಕರ್ ಸುಲಾಯ ಅತ್ಯುತ್ತಮ ವಿದ್ಯಾರ್ಥಿಗಳೆಂಬ ಪ್ರಾಡಕ್ಟ್ ಗಳನ್ನು ಸಮಾಜಕ್ಕೆ ಅರ್ಪಿಸಿದ ಪ್ಯಾಕ್ಟರಿ ಮತ್ತು ಸ್ವಾರ್ಥ ರಹಿತ ವ್ಯಕ್ತಿತ್ವದ ಸಾಮಾಜಿಕ ನ್ಯಾಯಕ್ಕೆ ಮತ್ತು ಶಿಕ್ಷಕ ವೃತ್ತಿಗೆ ತನ್ನನ್ನು ತಾನು ಅರ್ಪಿಸಿಕೊಂಡವರು ಎಂದರು.
ಸುಳ್ಯ ವಿಧಾನ ಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಮಾತನಾಡಿ, ನನ್ನ ರಾಜಕೀಯ ಜೀವನ ಮತ್ತು ವ್ಯಕ್ತಿತ್ವ ರೂಪಿಸಿಕೊಳ್ಳಲು ಗಿರಿಶಂಕರ್ ಸುಲಾಯ ಗುರುವಾಗಿದ್ದರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿ , ಆಸೆಗಳೇ ಇಲ್ಲದೆ ಕೇವಲ ಇನ್ನೊಬ್ಬರ ವ್ಯಕ್ತಿತ್ವವನ್ನು ಬೆಳೆಸುವ ನನಗೂ ಸೇರಿ ಸಮಾಜಕ್ಕೆ ಅವರೊಬ್ಬರು ಶ್ರೇಷ್ಠ ಗುರುವಾಗಿದ್ದರೆ. ಸಮಾಜಕ್ಕೆ ಅವರ ಕೊಡುಗೆ ಅನನ್ಯ ಎಂದರು.
ಗುರು ವಂದನ ಕಾರ್ಯಕ್ರಮದಲ್ಲಿ ಸನ್ಮಾನ ಮತ್ತು ಗುರುಕಾಣಿಕೆಯನ್ನು ಸ್ವೀಕರಿಸಿ ಮಾತನಾಡಿದ ಗಿರಿಶಂಕರ ಸುಲಾಯ, ಈ ಚಿನ್ನದ ಗುರು ಕಾಣಿಕೆ ನಗಣ್ಯ ಆದರೆ ನಿಮ್ಮ ಗುರುವಂದನೆ ಮತ್ತು ಪ್ರೀತಿಯ ಈ ವಿದ್ಯಾರ್ಥಿಗಳೆಂಬ ಬಂಗಾರದಂಹ ಮನಸ್ಸುಗಳನ್ನು ಪಡೆದ ನನ್ನ ಈ ವೃತ್ತಿ ಆತ್ಮ ತೃಪ್ತಿಯನ್ನು ಇವತ್ತು ನೀಡಿದೆ ಎಂದರು.
ಇಂದಿನ ಸೋಲು ನಾಳೆಯು ಸೋಲಾಗಿ ಕಾಣಲು ನನಗೆ ಇಷ್ಟವಿಲ್ಲ ಆದ್ದರಿಂದ ಸೋಲಬಾರದು ಅನ್ನುವ ಕಲ್ಪನೆಗಳ ಆಲೋಚನೆಗಳನ್ನು ನಾನು ವಿದ್ಯಾರ್ಥಿಗಳಿಂದ ಹಿಡಿದು ಸಾಮಾಜಿಕವಾಗಿ ಭೋದಿಸುತ್ತಲೆ ಬಂದೆ, ಹೊರತು ಯಾವುದೆ ಆಸೆ ಆಕಾಂಕ್ಷೆಗಳಿಗೆ ಬಲಿಯಾಗದೆ ಇನ್ನು ಮುಂದೆಯು ನನ್ನ ಕೃಷಿ ಮತ್ತು ವಿವಿದ ವಿಚಾರಗಳ ಮೂಲಕ ಸಮಾಜಕ್ಕೆ ಹತ್ತಿರವಾಗಿ ನನ್ನ ಕಲ್ಪನೆಯ ವಿಷಯಗಳನ್ನು ನೀಡುತ್ತ ಸಾಗುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಪಿ.ಡಿ ಗಂಗಾಧರ ರೈ ಉದ್ಘಾಟಿಸಿದರು.
ವೇದಿಕೆಯಲ್ಲಿ ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸಂಪತ್ ರೈ ಪಾತಾಜೆ, ನಿವೃತ್ತ ಬ್ಯಾಂಕ್ ಮೇನೇಜರ್ ಕೃಷ್ಣಕುಮಾರ್ ರೈ, ರಾಜ್ ದೀಪಕ್ ಜೈನ್ ಕುದ್ಮಾರುಗುತ್ತು, ರೋಟರಿ ಕ್ಲಬ್ ಪುತ್ತೂರು ಈಸ್ಟ್ ನಿಯೋಜಿತ ಅಧ್ಯಕ್ಷ ಶರತ್ ಕುಮಾರ್ ರೈ ಉಪಸ್ಥಿತರಿದ್ದು, ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಲಾಯಿತು.
ಮಾನ್ವಿ, ಸಾನಿಧ್ಯ ಪ್ರಾರ್ಥಿಸಿ, ದಯಾನಂದ ಮೆದು ಸ್ವಾಗತಿಸಿದರು. ಗಿರೀಶ್ ಕುಂಬ್ಲಾಡಿ ಸನ್ಮಾನ ಪತ್ರ ವಾಚಿಸಿದರು. ದೀಕ್ಷಿತ್ ಕೆ.ಜೆ ಧನ್ಯವಾದ ಸಮರ್ಪಿಸಿದರು. ಶಿಕ್ಷಕ ಜಯಂತ್ ವೈ ಕಾರ್ಯಕ್ರಮ ನಿರೂಪಿಸಿದರು.
ಹಿರಿಯ ವಿದ್ಯಾರ್ಥಿಗಳಾದ ಅರ್ಜುನ್ ರೈ, ದೀಕ್ಷಿತ್ ಅಂಬುಲ, ರಕ್ಷಿತ್, ಲಿಖಿತ್ ರೈ, ಶ್ರೀಮತಿ ಮಲ್ಲಿಕಾ ಉಮೇಶ್, ವಸಂತ ಅಲೆಕ್ಕಾಡಿ ಗಿರಿಶಂಕರ್ ಸುಲಾಯರ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.