ಟೋಕಿಯೋ ಪ್ಯಾರಾಲಂಪಿಕ್ಸ್ ನಲ್ಲಿ ಮುಂದುವರೆದಿದೆ ಭಾರತದ ಕ್ರೀಡಾಪಟುಗಳ ಪದಕ ಬೇಟೆ | ಶೂಟಿಂಗ್ನಲ್ಲಿ ಮನೀಶ್ ಗೆ ಚಿನ್ನ, ಸಿಂಗರಾಜ್ ಗೆ ಬೆಳ್ಳಿ
ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಪದಕ ಬೇಟೆಯನ್ನು ಮುಂದುವರಿಸಿದ್ದು, ಮಿಶ್ರ 50 ಮೀಟರ್ ಪಿಸ್ತೂಲ್ (ಎಸ್ಎಚ್1) ವಿಭಾಗದಲ್ಲಿ ಪ್ಯಾರಾ ಶೂಟರ್ ಮನೀಶ್ ನರ್ವಾಲ್ ಚಿನ್ನದ ಪದಕ ಗೆದ್ದರೆ, ಸಿಂಗರಾಜ್ ಅಧನಾ ಬೆಳ್ಳಿ ಪದಕ ಗೆಲ್ಲುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಶನಿವಾರ ನಡೆದ ಮಿಶ್ರ 50 ಮೀಟರ್ ಪಿಸ್ತೂಲ್ ಎಸ್ಎ 1 ಈವೆಂಟ್‌ನಲ್ಲಿ ಮನೀಶ್ ಮತ್ತು ಸಿಂಗರಾಜ್ ಚಿನ್ನ ಮತ್ತು ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಒಟ್ಟು ಪದಕಗಳ ಸಂಖ್ಯೆ 15ಕ್ಕೇರಿದೆ.
ಇದೇ ಸಂದರ್ಭದಲ್ಲಿ ಮನೀಶ್ ನರ್ವಾಲ್ ಅವರು ಮಿಶ್ರ 50 ಮೀಟರ್ ಪಿಸ್ತೂಲ್ ಎಸ್ಎಚ್ 1 ಫೈನಲ್ ಈವೆಂಟ್ ನಲ್ಲಿ 218.2 ಅಂಕಗಳೊಂದಿಗೆ ಪ್ಯಾರಾಲಿಂಪಿಕ್ಸ್ ಹೊಸ ದಾಖಲೆಯನ್ನು ಬರೆದಿದ್ದಾರೆ. ಸಿಂಗರಾಜ್ 216.7 ಅಂಕಗಳನ್ನು ಗಳಿಸಿದರು.
14 ಶೂಟ್ಸ್ ನಂತರ ಭಾರತೀಯರು ನಾಲ್ಕನೇ ಮತ್ತು ಐದನೇ ಸ್ಥಾನಕ್ಕೆ ಕುಸಿದರು ಮತ್ತು ಎಲಿಮಿನೇಶನ್ ಅಂಚಿಗೆ ತಲುಪಿದ್ದರು. ಆದರೆ, ನಂತರದಲ್ಲಿ ಮನೀಶ್ ಮತ್ತು ಸಿಂಗರಾಜ್ ಅದ್ಭುತ ಪ್ರದರ್ಶನ ನೀಡಿದರು. ಪದಕ ಬೇಟೆಯ ಗುರಿ ಬೆನ್ನತ್ತಿದ ಇಬ್ಬರು ಮತ್ತೆ ಹಿಂತಿರುಗಿ ನೋಡಲೇ ಇಲ್ಲ.
ಆಗಸ್ಟ್ 31ರ ಮಂಗಳವಾರವಷ್ಟೇ ಸಿಂಗರಾಜ್ ಅಧನಾ ಟೋಕಿಯೊ ಪ್ಯಾರಾಲಿಂಪಿಕ್ಸ್ ಪುರುಷರ 10 ಮೀ ಏರ್ ಪಿಸ್ತೂಲ್ ಎಸ್ಎಚ್ 1 ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದರು. ಇದೀಗ ಬೆಳ್ಳಿ ಗೆದ್ದಿದ್ದು, ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಈ ಆವೃತ್ತಿಯಲ್ಲಿ ಸಿಂಗರಾಜ್ ಅವರ ಎರಡನೇ ಪದಕವಾಗಿದೆ.