ತನ್ನ ಪತಿಗೆ ಶಾಪಿಂಗ್ ಸುಲಭವಾಗಲೆಂದು ದಿನಸಿ ಪಟ್ಟಿಯನ್ನು ತಯಾರಿಸಿದ ಪತ್ನಿ | ಅಷ್ಟಕ್ಕೂ ಆ ಪಟ್ಟಿ ಯಾವ ರೀತಿ ಇದೇ ಎಂಬುದು ನೀವೇ ನೋಡಿ
ಯಾವುದೇ ರೀತಿಯ ಶಾಪಿಂಗ್ ಇರಲಿ, ಶಾಪಿಂಗ್‍ನಲ್ಲಿ ಮಹಿಳೆಯರಿಗೆ ಸಮ ಯಾರೂ ಇಲ್ಲ. ಮನೆಯಲ್ಲಿ ಏನಿಲ್ಲ, ಏನುಂಟು, ಏನು ಬೇಕು ಎಲ್ಲವೂ ಗೃಹಿಣಿಯರ ತಲೆಯಲ್ಲಿ ಅಚ್ಚೊತ್ತಿರುತ್ತಿದೆ. ಬಹಳಷ್ಟು ಬಾರಿ ತಮಗೆ ಸಮಯವಿಲ್ಲದಾಗ ಪತಿ ಮಹಾಶಯರನ್ನು ದಿನಸಿ ಶಾಪಿಂಗ್‍ಗೆ ಕಳುಹಿಸಿದರೆ, ಯಾವುದಾದರೂ ಸಾಮಾಗ್ರಿ ಮರೆತು ಮನೆಗೆ ಬಂದಿರುವ ಪ್ರಸಂಗಗಳು ಖಂಡಿತಾ ನಡೆದಿರುತ್ತದೆ.
ಹಾಗೆಯೇ ಇಲ್ಲೊಬ್ಬ ಮಹಿಳೆ ತನ್ನ ಪತಿಗೆ ಶಾಪಿಂಗ್‍ನಲ್ಲಿ ಅನುಕೂಲವಾಗಲೆಂದು, ಅಗತ್ಯ ದಿನಸಿ ಸಾಮಾಗ್ರಿಗಳ ವಿವರವಾದ ಪಟ್ಟಿ ತಯಾರಿಸುವ ವಿಡಿಯೋವೊಂದು ಇನ್‍ಸ್ಟಾಗ್ರಾಂನಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಎಲ್ಲಾ ಗಂಡಸರು ಹೀಗಲ್ಲವಾದರೂ, ದಿನಸಿ ಶಾಪಿಂಗ್‍ನಲ್ಲಿ ಎಡವಟ್ಟು ಮಾಡಿಕೊಂಡು ಪತ್ನಿಯರ ಕೈಯಲ್ಲಿ ಬೈಸಿಕೊಳ್ಳುವವರು ಹೆಚ್ಚಿನ ಸಂಖ್ಯೆಯಲ್ಲಿರಬಹುದು. ಕೈಯಲ್ಲಿ ಸ್ಪಷ್ಟವಾಗಿ ಬರೆದ ಪಟ್ಟಿ ಕೊಟ್ಟರೂ, ಸಾಮಾಗ್ರಿಗಳನ್ನು ಮರೆಯುವ ಅಥವಾ ತಪ್ಪು ಸಾಮಾಗ್ರಿಗಳನ್ನು ಎತ್ತಿಕೊಂಡು ಬರುವವರ ಸಂಖ್ಯೆಯೂ ಕಡಿಮೆ ಇರಲಿಕ್ಕಿಲ್ಲ.
ಆಗ ಕಿರಿಕಿರಿ ಆಗುವುದು ಖಂಡಿತಾ. ಅದಕ್ಕೆ ಪರಿಹಾರವೇನು? ಉತ್ತರ ಇನ್‍ಸ್ಟಾಗ್ರಾಂ ವಿಡಿಯೋ ಒಂದರಲ್ಲಿದೆ! ಹೌದು, ತನ್ನ ಪತಿಗೆ ಶಾಪಿಂಗ್ ಸುಲಭವಾಗಲಿ ಎಂದು ಪತ್ನಿಯೊಬ್ಬಳು ವಿವರವಾದ ದಿನಸಿ ಪಟ್ಟಿಯನ್ನು ತಯಾರಿಸುವ ವಿಡಿಯೋವೊಂದು ಇನ್‍ಸ್ಟಾಗ್ರಾಂನಲ್ಲಿದೆ.
ವಿವರವಾದ ಪಟ್ಟಿ ಎಂದರೆ ? ದಿನಸಿ ಸಾಮಾಗ್ರಿಗಳ ಹೆಸರನ್ನು ಅಥವಾ ವಿವರವನ್ನು ಬರೆದಿರುವ ಪಟ್ಟಿ ಅಲ್ಲ. ಪ್ರತೀ ಸಾಮಾಗ್ರಿಯ ಚಿಕ್ಕ ಚಿತ್ರಗಳನ್ನು ಬಿಳಿ ಹಾಳೆಯೊಂದಕ್ಕೆ ಅಂಟಿಸಿ ರಚಿಸಿರುವ ಪಟ್ಟಿ. ಇನ್‍ಫ್ಲುಯೆನ್ಸರ್ ದಂಪತಿ, ಆ್ಯಡಮ್ ಮತ್ತು ಮೆಲಿಂಡಾ ಪೋಸ್ಟ್ ಮಾಡಿರುವ ಸಣ್ಣ ವಿಡಿಯೋದಲ್ಲಿ, ಆಕೆ ಮನೆಗೆ ಅಗತ್ಯ ಇರುವ ಸಾಮಾಗ್ರಿಗಳ ಚಿತ್ರವನ್ನು ಅಂಟಿಸಿ ಹೇಗೆ ಪಟ್ಟಿ ತಯಾರಿಸಿದ್ದಾರೆ ಎಂಬುದನ್ನು ತೋರಿಸಿದ್ದಾರೆ.
“ನನ್ನ ಪತಿಗಾಗಿ ದಿನಸಿ ಪಟ್ಟಿ” ಎಂಬ ಶೀರ್ಷಿಕೆಯನ್ನು ಅದಕ್ಕೆ ನೀಡಲಾಗಿದೆ. ಆ ಪಟ್ಟಿಯಲ್ಲಿ, ದ್ರಾಕ್ಷಿ, ಬೆರ್ರಿಗಳು. ಸೇಬುಗಳು, ಧಾನ್ಯಗಳು,ಚಿಕನ್, ಐಸ್ ಕ್ರೀಂ, ಬೆಣ್ಣೆ ಇತ್ಯಾದಿ ಸೇರಿದಂತೆ ದಿನ ಬಳಕೆ ಅಗತ್ಯವಿರುವ ಎಲ್ಲಾ ವಸ್ತುಗಳ ಚಿತ್ರಗಳನ್ನು ಅಂಟಿಸಲಾಗಿದೆ.
ಈ ವಿಡಿಯೋವನ್ನು ಕಂಡು ಕೆಲವು ನೆಟ್ಟಿಗರು ಆಕೆಯ ಉಪಾಯವನ್ನು ಪ್ರಶಂಸಿಸಿದ್ದರೆ, ಇನ್ನು ಕೆಲವರು ನಕ್ಕು ನಕ್ಕು ಸುಸ್ತಾಗಿದ್ದಾರೆ. ಮತ್ತೆ ಕೆಲವು ನೆಟ್ಟಿಗರಂತೂ , ತಮ್ಮ ಪೋಷಕರು ದಿನಸಿ ಪಟ್ಟಿಯನ್ನು ತಯಾರಿಸುವಾಗ ಹೇಗೆ ವರ್ತಿಸುತ್ತಾರೆ ಎಂಬುದನ್ನು ಕೂಡ ಹಂಚಿಕೊಂಡಿದ್ದಾರೆ.
“ಓಹ್ ದೇವರೆ, ಅತ್ಯದ್ಭುತ” ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಮತ್ತೊಬ್ಬರು “ನನ್ನವರು ಸ್ಕ್ರೀನ್‍ಶಾಟ್ ಕೇಳುತ್ತಾರೆ ಮತ್ತು ನಾನು ಕಳುಹಿಸಿದ ಕೊನೆಯದನ್ನು ಮಾತ್ರ ನೋಡುತ್ತಾರೆ, ಆದರೂ ಅದನ್ನೂ ತಪ್ಪಾಗಿ ತರುತ್ತಾರೆ” ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಇನ್‍ಸ್ಟಾಗ್ರಾಂ ಬಳಕೆದಾರರು ,”ನಿಜಕ್ಕೂ ಅತ್ಯುತ್ತಮವಿದು. ನಾನು ಫೋಟೋ ತೆಗೆದು , ಬರೆದು ಕಳುಹಿಸಿದ್ದೇನೆ, ಆದರೆ ಇದು ಅದಕ್ಕಿಂದ ಒಂದು ಹೆಜ್ಜೆ ಮುಂದಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.
“ಅತ್ಯುತ್ತಮ, ಆದರೆ ನೀವು ಅವುಗಳ ದರವನ್ನು ಬರೆಯಲು ಮರೆತಿದ್ದೀರಿ. ಏಕೆಂದರೆ ಅವರು ಸೇಲ್‍ನಲ್ಲಿರುವ ಉತ್ಪನ್ನಗಳನ್ನು ಬಿಟ್ಟು ಅವರು ಅತ್ಯಂತ ದುಬಾರಿ ಉತ್ಪನ್ನಗಳನ್ನು ಕೊಂಡುಕೊಳ್ಳಬಹುದು” ಎಂದು ಇನ್ನೊಬ್ಬ ನೆಟ್ಟಿಗ ಆ ಪೋಟೋ ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.