ಪುತ್ತೂರು : ಮುಸ್ಲಿಂ ಯುವತಿಯೊಂದಿಗೆ ಇಬ್ಬರು ಹಿಂದೂ ಯುವಕರು ಲಾಡ್ಜ್‌ಗೆ ತೆರಳುವಾಗ ತಡೆ
ಪುತ್ತೂರು : ಲಾಡ್ಜ್ ವೊಂದಕ್ಕೆ ತೆರಳುತ್ತಿದ್ದ ಇಬ್ಬರು ಯುವಕರು ಹಾಗೂ ಓರ್ವ ಯುವತಿಯನ್ನು ಒಂದು ಕೋಮಿಗೆ ಸೇರಿದ ಯುವಕರು ತಡೆದ ಘಟನೆ ಪುತ್ತೂರಿನ ಬಸ್ಸು ನಿಲ್ದಾಣದ ಬಳಿ ಸೆ. 1 ರಂದು ಮದ್ಯಾಹ್ನ ನಡೆದಿದೆ. ಇಲ್ಲಿನ ಬಸ್ಸು ನಿಲ್ದಾಣದ ಬಳಿ ಇರುವ ಲಾಡ್ಜ್ ಗೆ ಇಬ್ಬರು ಹಿಂದೂ ಸಮುದಾಯಕ್ಕೆ ಸೇರಿದ ಯುವಕರು ಹಾಗೂ ಮುಸ್ಲಿಂ ಯುವತಿ ತೆರಳುತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಲಾಡ್ಜ್ ಗೆ ತೆರಳದಂತೆ ತಡೆದವರು ಮುಸ್ಲಿಂ ಸಮುದಾಯಕ್ಕೆ ಸೇರಿದ ಕೆಲ ಯುವಕರು ಎಂದು ಮೂಲಗಳು ತಿಳಿಸಿವೆ. ಬಳಿಕ ಪ್ರಕರಣವೂ ಪೊಲೀಸ್ ಠಾಣೆ ಮೆಟ್ಟಿಲು ಏರಿದೆ.
ರಾಯಚೂರು ಮೂಲದ ಹಿಂದೂ ಯುವಕನಿಗೆ ಪುತ್ತೂರಿನ ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳ ಪರಿಚಯ ಇಾ ಗ್ರಾಂ ಮೂಲಕ ಆಗಿದೆ ಎನ್ನಲಾಗಿದೆ. ಈ ಪರಿಚಯ ಪ್ರೀತಿಗೆ ತಿರುಗಿದೆ ಎಂದು ಹೇಳಲಾಗುತ್ತಿದ್ದೂ, ಈ ಹಿನ್ನಲೆಯಲ್ಲಿ ಯುವತಿಯನ್ನು ಭೇಟಿಯಾಗಲು ಯುವಕ ತನ್ನ ಸ್ನೇಹಿತನೊಂದಿಗೆ ಪುತ್ತೂರಿಗೆ ಬಂದಿದ್ದಾನೆ.
ಈ ಯುವಕರನ್ನು ಭೇಟಿಯಾಗಲು ಯುವತಿಯೂ ಪುತ್ತೂರು ಬಸ್ಸು ನಿಲ್ದಾಣದ ಬಳಿ ಬಂದಿದ್ದಾರೆ. ಅಲ್ಲಿಂದ ಅವರು ಲಾಡ್ಜ್ ಬಳಿ ತೆರಳಿದರು ಎಂದು ಮೂಲಗಳು ತಿಳಿಸಿವೆ.
ಬಿನ್ನ ಕೋಮಿನ ಇಬ್ಬರು ಯುವಕರು ಹಾಗೂ ಓರ್ವ ಯುವತಿ ಓಡಾಡುತ್ತಿರುವುದನ್ನು ಗಮನಿಸಿದ ಅಲ್ಲಿದ್ದ ಒಂದು ಕೋಮಿನ ಯುವಕರ ತಂಡ ಇವರನ್ನು ಪ್ರಶ್ನಿಸಿದೆ ಎನ್ನಲಾಗಿದೆ. ಅಲ್ಲದೇ, ಯುವಕರ ತಂಡವೂ ರಾಯಚೂರಿನ ಈ ಇಬ್ಬರು ಯುವಕರ ಮೇಲೆ ಹಲ್ಲೆ ಕೂಡ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.
ಈ ಹಂತದಲ್ಲಿ ಅಲ್ಲಿದ್ದ ಸಾರ್ವಜನಿಕರು ಯುವಕರನ್ನು ಪುತ್ತೂರು ಠಾಣೆಗೆ ತೆರಳುವಂತೆ ತಿಳಿಸಿದ್ದೂ ಹಾಗೂ ಆಟೋ ರಿಕ್ಷಾವೊಂದರಲ್ಲಿ ಕೂರಿಸಿ ಪೊಲೀಸ್ ಸ್ಟೇಶನ್ ಗೆ ಕಳುಹಿಸಿದ್ದಾರೆ. ಸದ್ಯ ಆ ಇಬ್ಬರು ಯುವಕರು ಹಾಗೂ ಯುವತಿ ಪುತ್ತೂರು ನಗರ ಠಾಣೆಯಲ್ಲಿದ್ದಾರೆ. ಠಾಣೆಗೆ ಯುವತಿಯ ತಂದೆ ಕೂಡ ಆಗಮಿಸಿದ್ದು ಪೊಲೀಸರ ಜತೆ ಮಾತುಕತೆ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಆ ಇಬ್ಬರು ಯುವಕರು ಹಲ್ಲೆ ನಡೆದ ಬಗ್ಗೆ ಠಾಣೆಗೆ ದೂರು ನೀಡಿಲ್ಲ ಹಾಗೂ ಇತ್ತಂಡಗಳಿಂದಲೂ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.