ಚೂರಿ ಇರಿತಕ್ಕೊಳಗಾದ ಯುವತಿ ಸಾವು | ಪ್ರೇಯಸಿಗೆ ಬೇರೊಬ್ಬನೊಂದಿಗೆ ನಿಶ್ಚಿತಾರ್ಥದಿಂದ ಕುಪಿತನಾಗಿದ್ದ ಯುವಕ
ಯುವತಿಯನ್ನು ಚೂರಿಯಿಂದ ಇರಿದು ಕೊಲೆಗೈದ ಯುವಕನೋರ್ವ ಬಳಿಕ ಅದೇ ಚೂರಿಯಿಂದ ತಾನೂ ಕತ್ತು ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಸಂಜೆ ಉಡುಪಿ ಸಂತೆಕಟ್ಟೆ ಸಮೀಪದ ರೋಬೊ ಸಾಫ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಅಂಬಾಗಿಲು ಸಮೀಪದ ಕಕ್ಕುಂಜೆ ನಿವಾಸಿ ವಿಠಲ ಭಂಡಾರಿ ಹಾಗೂ ಸುಶೀಲಾ ದಂಪತಿಯ ಪುತ್ರಿ ಸೌಮ್ಯಶ್ರೀ(26) ಕೊಲೆಯಾಗಿದ್ದು, ಕೃತ್ಯ ಎಸಗಿರುವ ಆರೋಪಿ ಅಲೆವೂರು ರಾಂಪುರ ನಿವಾಸಿ ಸಂದೇಶ್ ಕುಲಾಲ್(26) ಗಂಭೀರ ಸ್ಥಿತಿಯಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸೌಮ್ಯಶ್ರೀ ಸಂತೆಕಟ್ಟೆಯ ರಾಷ್ಟ್ರೀಕೃತ ಬ್ಯಾಂಕಿನ ಆಧಾರ್ ಕಾರ್ಡ್ ಲಿಂಕ್ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ,ಸಂದೇಶ್ ಕುಲಾಲ್ ಉಡುಪಿಯ ಐಡಿಯಲ್ ಮೆಡಿಕಲ್ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾನೆ.
ಇವರಿಬ್ಬರು ಕಳೆದ ಏಳೆಂಟು ವರ್ಷಗಳಿಂದ ಪ್ರೀತಿಸುತ್ತಿದ್ದರು
ಎಂದು ಹೇಳಲಾಗುತ್ತಿದೆ. ಸೌಮಶ್ರೀಯ ಸಹೋದರರಿಬ್ಬರು
ವಿದೇಶದಲ್ಲಿದ್ದು, ತಂದೆ ಅನಾರೋಗ್ಯ ಪೀಡಿತರಾಗಿದ್ದಾರೆ. ಕೆಲ
ದಿನಗಳ ಹಿಂದೆ ಸೌಮ್ಯಶ್ರೀಗೆ ಬೇರೆಯವರೊಂದಿಗೆ ನಿಶ್ಚಿತಾರ್ಥ ಆಗಿತ್ತೆಂದು ತಿಳಿದುಬಂದಿದೆ. ಇದರಿಂದ ಸಂದೇಶ ಕುಲಾಲ್ ಕುಪಿತಗೊಂಡಿದ್ದು, ಇದೇ ವಿಚಾರದಲ್ಲಿ ಇಬ್ಬರಿಗೂ ಜಗಳ ಆಗುತ್ತಿತ್ತು ಎಂದು ಪೊಲೀಸ್ ಮೂಲ ಗಳು ತಿಳಿಸಿವೆ.
ಸೋಮವಾರ ಸಂಜೆ ಬ್ಯಾಂಕಿನಿಂದ ತನ್ನ ಸ್ಕೂಟಿಯಲ್ಲಿ ಮನೆಗೆ ವಾಪಾಸ್ಸು ಹೋಗುತ್ತಿದ್ದ ಸೌಮ್ಯಶ್ರೀಯನ್ನು ಬೈಕಿನಲ್ಲಿ ಬಂದ ಸಂದೇಶ್, ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದು ನಿಲ್ಲಿಸಿದ್ದನು. ಆಗ ಅವರಿಬ್ಬರ ಮಧ್ಯೆ ವಾಗ್ವಾದ ನಡೆಯಿತು. ಈ ವೇಳೆ ಸಂದೇಶ್ ಕುಲಾಲ್, ತಾನು ತಂದಿದ್ದ ಚೂರಿಯಿಂದ ಸೌಮ್ಯಶ್ರೀಗೆ ಇರಿದ,ನಂತರ ಅದೇ ಚಾಕುವಿನಿಂದ ಆತ ತನ್ನ ಕುತ್ತಿಗೆ ಕೊಯ್ದುಕೊಂಡನು.
ತಕ್ಷಣ ಸ್ಥಳೀಯರು ಧಾವಿಸಿ ಇವರಿಬ್ಬರು ಆಸ್ಪತ್ರೆಗೆ ದಾಖಲಿಸಿದರು. ಗಂಭೀರ ಸ್ಥಿತಿಯಲ್ಲಿದ್ದ ಸೌಮ್ಯಶ್ರೀ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸಂದೇಶ್ ಕುಲಾಲ್ ಪರಿಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಇಬ್ಬರ ದ್ವಿಚಕ್ರ ವಾಹನ, ಬ್ಯಾಗ್, ಚೂರಿ ಪತ್ತೆ ಯಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ, ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.