ಪುತ್ತೂರು | ಆಕಸ್ಮಿಕವಾಗಿ 60 ಅಡಿ ಆಳದ ಬಾವಿಗೆ ಬಿದ್ದ ಮಹಿಳೆ | ರಕ್ಷಣೆಗೆ ತಾನೂ ಬಾವಿಗಿಳಿದ ಪತಿ | ಮೇಲೆ ಬರಲಾಗದೆ ಒದ್ದಾಡುತ್ತಿದ್ದ ಇಬ್ಬರನ್ನೂ ರಕ್ಷಿಸಿದ ಅಗ್ನಿಶಾಮಕದಳ
ಇಂದು ಬೆಳಗ್ಗೆ 60 ಅಡಿ ಆಳದ ಬಾವಿಗೆ ಬಿದ್ದ ಮಹಿಳೆಯೊಬ್ಬರನ್ನು ಮತ್ತು ಮಹಿಳೆಯ ರಕ್ಷಣೆಗೆ ಬಾವಿಗೆ ಇಳಿದ ಆಕೆಯ ಪತಿಯನ್ನೂ ಅಗ್ನಿಶಾಮಕ ದಳದವರು ರಕ್ಷಿಸಿದ ಘಟನೆ ಪುತ್ತೂರಿನ ಕೆಯ್ಯೂರಿನಲ್ಲಿ ನಡೆದಿದೆ.
ಕೆಯ್ಯೂರಿನಲ್ಲಿ ನಸುಕಿನ ಜಾವ ಮಹಿಳೆಯೊಬ್ಬರು ನೀರು ತರಲು ಬಾವಿ ಕಡೆ ಹೋದಾಗ ಆಕಸ್ಮಿಕವಾಗಿ ಬಿದ್ದಿದ್ದರು. ಇದನ್ನು ನೋಡಿದ ಆಕೆಯ ಪತಿ ಪತ್ನಿಯ ರಕ್ಷಣೆಗಾಗಿ ಬಾವಿಗೆ ಇಳಿದು, ಪತ್ನಿಯನ್ನು ನೀರಿನಲ್ಲಿ ಮುಳುಗುವುದರಿಂದ ಪಾರು ಮಾಡಿದರು. ಆದರೆ ಅವರಿಗೆ ಮೇಲೆ ಹತ್ತಲು ಸಾಧ್ಯವಾಗದೆ ಬಾವಿಯಲ್ಲಿದ್ದ ಕಲ್ಲು ಹಿಡಿದು ನಿಂತಿದ್ದರು.
ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣಾಧಿಕಾರಿ ವಿ ಸುಂದರ್ ಅವರ ನೇತೃತ್ವದಲ್ಲಿ ಪ್ರಮುಖ ಅಗ್ನಿಶಾಮಕ ರುಕ್ಕಯ್ಯ ಗೌಡ ಅವರು 60 ಅಡಿ ಆಳದ ಬಾವಿಗೆ ಇಳಿದು ಬಾವಿಗೆ ಬಿದ್ದ ಮಹಿಳೆ ಮತ್ತು ಅವರ ರಕ್ಷಣೆಗೆ ಬಾವಿಗೆ ಇಳಿದು ಸುಸ್ತಾಗಿ ಬಾಕಿಯಾದ ಆಕೆಯ ಪತಿಯನ್ನೂ ಬಾವಿಯಿಂದ ಮೇಲಕ್ಕೆ ಎತ್ತಿ ರಕ್ಷಣೆ ಮಾಡಿದ್ದಾರೆ.
ಅಗ್ನಿಶಾಮಕದಳದ ಮಂಜುನಾಥ್, ಚಾಲಕ ಮೋಹನ್ ಜಾದವ್, ಗೃಹರಕ್ಷಕದಳದ ಚಂದ್ರ ಕುಮಾರ್ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.