ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳ ಹಲವು ಮುಖವಾಡಗಳು ಬಯಲು | ಈ ಪಾಪಿಗಳು ಗ್ಯಾಂಗ್ ರೇಪ್ ಮಟ್ಟಕ್ಕೆ ಇಳಿಯಲು ದಾರಿ ಮಾಡಿಕೊಟ್ಟರೇ ಮೈಸೂರಿನ ಜನತೆ?
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್‌ರೇಪ್ ಪ್ರಕರಣದ ಐವರು ಆರೋಪಿಗಳನ್ನು ಮೈಸೂರು ಪೊಲೀಸರು ಈಗಾಗಲೇ ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಇನ್ನೋರ್ವ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಈಗಾಗಲೇ ಹಾಜರುಪಡಿಸಿ 10 ದಿನಗಳ ಕಾಲ ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಂಡು ವಿಚಾರಣೆಯನ್ನು ಚುರುಕುಗೊಳಿಸಿದ್ದಾರೆ.
ಬಂಧಿತರೆಲ್ಲರೂ ತಮಿಳುನಾಡಿನ ತಿರುಪೂರ್ ಹಾಗೂ ಸೂಸೈಪುರಂ ಗ್ರಾಮದವರಾಗಿದ್ದು, ಆರೋಪಿಗಳನ್ನು ಭೂಪತಿ, ಜೋಸೆಫ್, ಮುರುಗೇಶನ್ ಮತ್ತು ಪ್ರಕಾಶ್ ಎಂದು ಗುರುತಿಸಲಾಗಿದೆ. ಓರ್ವ ಆರೋಪಿ ಅಪ್ರಾಪ್ತ ಎಂದೂ ಹೇಳಲಾಗಿದೆ. ಆರೋಪಿಗಳ ಹಿನ್ನೆಲೆಯನ್ನು ನೋಡಿದಾಗ ಭಯ ಹುಟ್ಟಿಸುವಂತಿದೆ. ಇವರೆಲ್ಲರೂ ಸಮಾಜ ಘಾತುಕರಾಗಿದ್ದರು. ರೋಡ್ ರಾಬರಿ ಮಾಡುವುದೇ ಇವರ ಕಸುಬಾಗಿತ್ತು. ಈ ಹಿಂದೆಯೂ ಮೈಸೂರಿನಲ್ಲಿ ಆರೋಪಿಗಳು ಹಲವು ಕಳ್ಳತನ ನಡೆಸಿದ್ದು, ಒಂದಿಬ್ಬರು ಆರೋಪಿಗಳು ಸಿಕ್ಕಿಬಿದ್ದು ಜಾಮೀನು ಸಹ ಪಡೆದುಕೊಂಡಿದ್ದಾರೆ.
ಅದೇ ಭೂಪತಿ ಇದೀಗ ಗ್ಯಾಂಗ್‌ರೇಪ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಜೈಲಿಗೆ ಹೋಗಿ ಬಂದರೂ ಇವರು ಬುದ್ಧಿ ಕಲಿತಿರಲಿಲ್ಲ. ಪೊಲೀಸರ ವಿಚಾರಣೆ ವೇಳೆ ಒಂದೊಂದೇ ಸತ್ಯ ಹೊರ ಬರುತ್ತಿದೆ. ಮೈಸೂರಿನ ಬಗ್ಗೆ ಚೆನ್ನಾಗಿ ತಿಳಿದಿದ್ದ ಆರೋಪಿಗಳು ಯಾರು ಸುಳಿಯದ ನಿರ್ಜನ ಪ್ರದೇಶವನ್ನೇ ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡಿದ್ದರು. ಅಲ್ಲಿಗೆ ಯಾರಾದರೂ ಬಂದರೆ, ಅವರನ್ನು ಟಾರ್ಗೆಟ್ ಮಾಡಿ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು. ಹೀಗಾಗಿ ಸಾಕಷ್ಟು ದುಷ್ಕೃತ್ಯಗಳನ್ನು ಆರೋಪಿಗಳು ಎಸಗಿದ್ದಾರೆ.
ಈ ರೀತಿ ಸಾಕಷ್ಟು ದರೋಡೆ ಪ್ರಕರಣಗಳನ್ನು ನಡೆಸಿದರೂ ಕೂಡ ಮರ್ಯಾದೆಗೆ ಅಂಜಿ ಯಾರೋಬ್ಬರು ಆರೋಪಿಗಳ ವಿರುದ್ಧ ದೂರು ಕೊಡಲು ಮುಂದಾಗಿಲ್ಲ. ದೂರು ಕೊಟ್ಟರೆ ಎಲ್ಲಿ ತಮ್ಮ ಮರ್ಯಾದೆ ಹೋಗುತ್ತದೆ ಎಂದು ಹೆದರುತ್ತಿದ್ದರು. ಹೀಗಾಗಿ ತಾವು ಮಾಡುವ ಕ್ರೈಂ ಪೊಲೀಸರಿಗೆ ಗೊತ್ತಾಗುತ್ತಿಲ್ಲ ಎಂಬುದು ಆರೋಪಿಗಳಿಗೆ ಪದೇಪದೆ ಕೆಟ್ಟ ಕೃತ್ಯ ಮಾಡಲು ಪ್ರಚೋದನೆ ನೀಡಿದೆ.
ಈ ಹಿಂದೆ ನಡೆದ ಪ್ರಕರಣದಲ್ಲಿ ಯಾರಾದರೂ ಒಬ್ಬ ದೂರು ಕೊಟ್ಟಿದ್ದರೂ ಸಹ ಇಂದು ಸಾಂಸ್ಕೃತಿಕ ನಗರಿಯಲ್ಲಿ ತಲೆತಗ್ಗಿಸುವಂತಹ ಹೇಯ ಕೃತ್ಯ ನಡೆಯುತ್ತಿರಲಿಲ್ಲ. ಯಾರೂ ದೂರು ಕೊಡುವುದಿಲ್ಲ. ಇದೊಂದು ರೀತಿಯಲ್ಲಿ ಚೆನ್ನಾಗಿಯೇ ಇದೆ ಅಂದು ಕೊಂಡು ಆರೋಪಿಗಳು ಹೇಯ ಕೃತ್ಯಗಳನ್ನು ಮುಂದುವರಿಸುತ್ತಾ ಹೋದರು. ತಮ್ಮ ಕೃತ್ಯಕ್ಕೆ ಮೈಸೂರಿನ ಈ ಸ್ಥಳ ಸೇಫ್ ಅಂದುಕೊಂಡಿದ್ದರು. ಹೀಗಾಗಿಯೇ ತಮಿಳುನಾಡಿನವರಾದರು ಆಗಾಗ ಇಲ್ಲಿಗೆ ಭೇಟಿ ನೀಡುತ್ತಿದ್ದರು. ತಮಗೆ ಚಿರಪರಿಚಿತವಾಗಿದ್ದ ಚಾಮುಂಡಿ ಬೆಟ್ಟದ ಸುತ್ತಮುತ್ತ ಕೃತ್ಯ ನಡೆಸುತ್ತಿರುವುದಾಗಿ ಬಾಯ್ದಿಟ್ಟಿದ್ದಾರೆ.
ಪೊಲೀಸ್ ತನಿಖೆಯ ವೇಳೆ ಕಿರಾತಕರು ಪೊಲೀಸರೆದುರು ಈ ವಿಚಾರವನ್ನೆಲ್ಲಾ ಬಾಯ್ದಿಟ್ಟಿದ್ದಾರೆ. ಈ ಹಿಂದಿನ ಪ್ರಕರಣಗಳಲ್ಲಿ ಸಂತ್ರಸ್ತರು ಪೊಲೀಸರಿಗೆ ದೂರು ಕೊಡದಿರುವುದೇ ಆರೋಪಿಗಳಿಗೆ ಪ್ಲಸ್ ಪಾಯಿಂಟ್ ಆಗಿರುವ ವಿಚಾರ ಬಯಲಾಗಿದೆ. ಆದರೆ ಅವರ ಕರ್ಮಕ್ಕೆ ತಕ್ಕ ಫಲ ಕೊನೆಗೂ ಸಿಕ್ಕಿದೆ. ಯುವತಿಯ ಮೇಲೆರಗಿದ ಪಾಪಿಗಳಿಂದ ಇಡೀ ಪ್ರಕರಣಗಳು ಒಟ್ಟಿಗೆ ಬೆಳಕಿಗೆ ಬಂದು ಕಾನೂನಿನ ಕುಣಿಕೆಯಲ್ಲಿ ಸರಿಯಾಗಿ ಸಿಕ್ಕಿಕೊಂಡಿದ್ದಾರೆ.
ಇಂತಹ ಸಮಾಜಘಾತುಕ ಶಕ್ತಿಗಳಿಗೆ ಸರಿಯಾದ ರೀತಿಯ ಶಿಕ್ಷಿಸದೇ ಹೋದರೆ ಇಂಥವರು ಸಮಾಜದಲ್ಲಿ ಮತ್ತಷ್ಟು ಆತಂಕ ಸೃಷ್ಟಿಸುವುದರಲ್ಲಿ ಸಂಶಯವಿಲ್ಲ. ನೀಚ ಕೃತ್ಯ ಎಸಗುವ ಇಂಥ ನೀಚರಿಗೆ ನೀಡುವ ಶಿಕ್ಷೆ ಮುಂದೆ ಇಂತಹ ಕೃತ್ಯಗಳಿಗೆ ಕೈಹಾಕುವವರಿಗೆ ಎಚ್ಚರಿಕೆಯ ಪಾಠವಾಗಿರಬೇಕೆಂಬುದು ಜನಸಾಮಾನ್ಯರ ಅಭಿಪ್ರಾಯವಾಗಿದೆ.