ಆಟವಾಡುತ್ತಿದ್ದಾಗ ಕುಕ್ಕರ್ ಅನ್ನು ತಲೆ ಮೇಲೆ ಸಿಲುಕಿಸಿಕೊಂಡ ಒಂದೂವರೆ ವರ್ಷದ ಮಗು | ಸತತ ಎರಡು ಗಂಟೆ ವೈದ್ಯರ ಶ್ರಮದ ಮೂಲಕ ಮಗುವಿನ ರಕ್ಷಣೆ
ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಮನೆಗೊಂದು ಕಳೆ ಇದ್ದಂತೆ. ಹಾಗೆಯೇ ಮಕ್ಕಳನ್ನು ಜೋಪಾನ ಮಾಡುವುದು ದೊಡ್ಡ ಸವಾಲಿನ ಕೆಲಸವೇ. ಅವರು ಯಾವಾಗ ಏನು ಮಾಡುತ್ತಾರೆ ಎನ್ನುವುದನ್ನು ತಿಳಿಯುವುದೇ ಕಷ್ಟ. ತುಂಟಾಟದ ಮಕ್ಕಳ ಕಥೆ ಅಂತೂ ಕೇಳುವುದೇ ಬೇಡ. ಅಂಥದ್ದೇ ಒಂದು ಭಯಾನಕ ಘಟನೆ ಆಗ್ರಾದಲ್ಲಿ ನಡೆದಿದ್ದು, ಒಂದೂವರೆ ವರ್ಷದ ಮಗುವೊಂದು ಆಟವಾಡುತ್ತಿದ್ದಾಗ ತನ್ನ ತಲೆಯನ್ನು ಪ್ರೆಷರ್ ಕುಕ್ಕರ್ ಒಳಗೆ ಸಿಲುಕಿಸಿಕೊಂಡಿದೆ.
ಮನೆಯವರು ಕುಕ್ಕರ್ ಅನ್ನು ಅಡುಗೆ ಮನೆಯಲ್ಲಿ ಕೆಳಗಡೆಯೇ ಇಟ್ಟಿದ್ದರು. ಈ ಸಂದರ್ಭದಲ್ಲಿ ಮಗು ಆಟವಾಡುತ್ತಾ ಅದನ್ನು ಎತ್ತಿಕೊಂಡು ತಲೆ ಮೇಲೆ ಹಾಕಿಕೊಂಡಿದೆ. ಕುಕ್ಕರ್ ಚಿಕ್ಕದಾಗಿದ್ದರಿಂದ ಅದು ಅಲ್ಲಿಯೇ ಜಾಮ್ ಆಗಿತ್ತು. ಎಷ್ಟೇ ಪ್ರಯತ್ನಪಟ್ಟರೂ ಅದನ್ನು ತೆಗೆಯಲು ಸಾಧ್ಯವೇ ಆಗಲಿಲ್ಲ.
ಕೂಡಲೇ ಮನೆಯವರು ಎಚ್ಚೆತ್ತುಕೊಂಡು ವೈದ್ಯರಿಗೆ ಕರೆ ಮಾಡಿದ್ದಾರೆ. ಆಗ ಡ್ರೈಂಡರ್ ಯಂತ್ರದೊಂದಿಗೆ ಸ್ಥಳಕ್ಕೆ ದೌಡಾಯಿಸಿದ ವೈದ್ಯರ ತಂಡ ಮಗುವಿನ ತಲೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸತತ ಎರಡು ಗಂಟೆಗಳ ಕಾಲ ಶ್ರಮ ವಹಿಸಿ ಯಂತ್ರದಿಂದ ಕುಕ್ಕರ್ ಅನ್ನು ಕಟ್ ಮಾಡಿದೆ. ಅದೃಷ್ಟವಶಾತ್ ಮಗುವಿನ ಪ್ರಾಣಕ್ಕೆ ಯಾವುದೇ ಅಪಾಯವಾಗಲಿಲ್ಲ. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಮಗುವಿನ ಜೀವಕ್ಕೆ ಅಪಾಯವಿತ್ತು. ಉಸಿರುಕಟ್ಟುವ ಸಾಧ್ಯತೆ ಇತ್ತು.
ಮಕ್ಕಳು ಮನೆಯಲ್ಲಿ ಇದ್ದರೆ ಇಂಥ ಚಿಕ್ಕಚಿಕ್ಕ ವಿಷಯಗಳಿಗೂ ಗಮನಕೊಡಿ. ಇಲ್ಲದೇ ಹೋದರೆ ಮಗುವಿನ ಪ್ರಾಣಕ್ಕೇ ಕುತ್ತು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಈ ರೀತಿ ಘಟನೆಗಳು ನಡೆಯದಂತೆ ಪೋಷಕರು ಹೆಚ್ಚಿನ ಜಾಗರೂಕತೆ ವಹಿಸಬೇಕಾಗಿದೆ. ಆಟವಾಡುತ್ತಿದ್ದರೂ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಬೇಡಿ. ಇಲ್ಲದಿದ್ದರೆ ಇಂತಹ ಇನ್ನಾವುದಾದರೂ ಪರಿಸ್ಥಿತಿಯನ್ನು ನೀವೂ ಎದುರಿಸಬೇಕಾದೀತು.