ಭಾರತದ ನೆತ್ತಿಯ ಮೇಲೆ ಹಾರಾಟ ನಡೆಸುತ್ತಿದ್ದ, 126 ಪ್ರಯಾಣಿಕರನ್ನು ತುಂಬಿಕೊಂಡು ಹೊರಟಿದ್ದ ವಿಮಾನದ ಪೈಲೆಟ್ ಗೆ ಹೃದಯಾಘಾತ
ನಾಗ್ಪುರ: ಢಾಕಾದಿಂದ ಮಸ್ಕಟ್ ಗೆ ತೆರಳುತ್ತಿದ್ದ ಬಾಂಗ್ಲಾದೇಶದ ಬಿಮಾನ್ ಸಂಸ್ಥೆಯ ವಿಮಾನ ಆಕಾಶದಲ್ಲಿ ಹಾರುತ್ತಿದ್ದಾಗಲೇ ವಿಮಾನ ಚಾಲಕ ಹೃದಯಾಘಾತಕ್ಕೀಡಾದ ಘಟನೆ ನಡೆದಿದೆ.
ಬೋಯಿಂಗ್ ವಿಮಾನದಲ್ಲಿ ಈ ಸಂದರ್ಭ 126 ಮಂದಿ ಪ್ರಯಾಣಿಕರಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಾಲಕ ಹೃದಯಾಘಾತಕ್ಕೀಡಾದಾಗ ವಿಮಾನ ಭಾರತದ ಮೇಲೆ ಹಾರುತ್ತಿತ್ತು. ಈ ಸಂದರ್ಭ ಪೈಲೆಟ್ ಗೆ ಹೃದಯಾಘಾತವಾಗಿದೆ. ಆಗ ಅದೇ ವಿಮಾನದ ಮತ್ತೊಬ್ಬ ವಿಮಾನ ಸಹ ಚಾಲಕ ಕೋಲ್ಕತಾದ ವಿಮಾನ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿ ಸಹಾಯ ಯಾಚಿಸಿದ್ದ.
ಒಡನೆಯೇ ಸಹ ಪೈಲೆಟ್ ಮನವಿಗೆ ಸ್ಪಂದಿಸಿದ ಕೋಲ್ಕತಾದ ವಿಮಾನ ನಿಯಂತ್ರಣ ಕೊಠಡಿಯ ಸಿಬ್ಬಂದಿ ವಿಮಾನವನ್ನು ಹತ್ತಿರದ ನಾಗ್ಪುರದಲ್ಲಿ ಇಳಿಸುವಂತೆ ಸೂಚನೆ ನೀಡಿದ್ದರು. ಅದರಂತೆ ವಿಮಾನ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಆ 126 ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದರು.
ಕೊರೊನಾ ಕಾರಣದಿಂದ ಮುಚ್ಚಿದ್ದ ಬಿಮಾನ್ ವಿಮಾನಯಾನ ಸಂಸ್ಥೆ ಇತ್ತೀಚಿಗಷ್ಟೆ ಭಾರತ ಸೇರಿದಂತೆ ಕೆಲ ರಾಷ್ಟ್ರಗಳಿಗೆ ವಿಮಾನ ಹಾರಾಟ ಪುನರಾರಂಭಿಸಿತ್ತು. ಈಗ ವಿಮಾನ ಚಾಲಕನನ್ನು ನಾಗ್ಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.