ಕ್ವಿಂಟಾಲ್ ಗೆ 50000 ರೂ. ಗಡಿಯತ್ತ ಅಡಿಕೆ ಧಾರಣೆ ಬೆಲೆ !! | ಅಡಿಕೆ ಬೆಳೆಗಾರರು ಫುಲ್ ಖುಷ್
ಏನೇ ಆಗಲಿ ಮಲೆನಾಡು ಹಾಗೂ ಕರಾವಳಿಯಲ್ಲಿ ಈ ಬಾರಿ ಅಡಿಕೆ ಬೆಳೆಗಾರರು ಮಾತ್ರ ನೆಮ್ಮದಿಯ ನಿದ್ದೆ ಮಾಡಬಹುದು. ಯಾವ ಚಿಂತೆಯೂ ಇಲ್ಲದೆ, ಸಾಲಸೂಲದ ಬಗ್ಗೆ ಯೋಚನೆ ಮಾಡದೆ, ನಿಶ್ಚಿಂತೆಯಿಂದ ಇರಬಹುದು. ಏಕೆಂದರೆ ಆ ರೀತಿ ಹೆಚ್ಚುತ್ತಿದೆ ಅಡಿಕೆ ಧಾರಣೆ ಬೆಲೆ.
ಹೌದು, ಆಗಸ್ಟ್ ಮೊದಲ ವಾರದಿಂದ ಅಡಿಕೆ ಬೆಲೆಯಲ್ಲಿ ಹೆಚ್ಚಳ ಕಾಣುತ್ತಿದ್ದು ಈಗಾಗಲೇ 50ಸಾವಿರ ಗಡಿಯಲ್ಲಿ ಬಂದು ನಿಂತಿದೆ. ಮುಂದಿನ ದಿನದಲ್ಲಿ ಅಡಿಕೆ ಬೆಲೆಯಲ್ಲಿ ಹೆಚ್ಚಳವಾದರೂ ಆಗಬಹುದು. ಅಡಿಕೆ ಶೇಖರಣೆ ಮಾಡಿಕೊಂಡವರು ತಕ್ಷಣ ಮಾರ್ಕೆಟಿಗೆ ಹಾಕಲು ಸೂಕ್ತ ಸಮಯವಿದು ಎಂದರೆ ತಪ್ಪಾಗಲಾರದು.
ಅಡಿಕೆ ಧಾರಣೆಯಲ್ಲಿ ವರ್ಷದಿಂದ ಸ್ಥಿರತೆ ಕಾಯ್ದುಕೊಂಡಿದ್ದ ಬೆಲೆ ಈಗ ನಾಗಲೋಟದತ್ತ ಸಾಗಿದೆ. ಕ್ವಿಂಟಾಲ್‌ಗೆ 38 ಸಾವಿರ ರೂ. ಇದ್ದ ಬೆಲೆ 43ಸಾವಿರವಾಗಿ ಈಗಾಗಲೇ 50ಸಾವಿರ ರೂ. ಆಸುಪಾಸಿನಲ್ಲಿದೆ. ಈ ಬಂಪರ್ ಬೆಲೆಯಿಂದ ಬೆಳೆಗಾರರು ಫುಲ್ ಖುಷ್ ಆಗಿದ್ದಾರೆ. ಆದರೆ ಈಗಾಗಲೇ ಅಡಿಕೆ ಮಾರಾಟ ಮಾಡಿರುವವರು ಮಾತ್ರ ಕೈಕೈ ಹಿಸುಕಿಕೊಳ್ಳುವಂತಾಗಿದೆ.
ಮಂಗಳವಾರ ಮಲೆನಾಡಿನಲ್ಲಿ ಅಡಿಕೆಯ ಬೆಲೆ ಕ್ವಿಂಟಾಲ್ಗೆ 48 ಸಾವಿರಕ್ಕೆ ತಲುಪಿದೆ. ರಾಶಿ ಅಡಿಕೆ ಬೆಲೆ 47 ಸಾವಿರದ ಹತ್ತಿರ ಮುನ್ನುಗುತ್ತಿದೆ. ಮಂಡಿಯವರು 49ಸಾವಿರಕ್ಕೆ ಖರೀದಿ ಮಾಡುತ್ತಿದ್ದಾರೆ. ಮಲೆನಾಡಿನಲ್ಲಿ ಪ್ರಮುಖ ಬೆಳೆಯಾಗಿರುವ ಅಡಿಕೆ ಈಗ ಅರೆ ಮಲೆನಾಡು, ಬಯಲುಸೀಮೆಯಲ್ಲೂ ಪ್ರಸಿದ್ಧಿ ಪಡೆದಿದೆ. ಕರಾವಳಿಯ ಅಡಿಕೆಗಳು ಕೂಡ ಬಹು ಪ್ರಸಿದ್ಧವಾಗಿವೆ.
ಕಡಿಮೆ ಖರ್ಚು ಹೆಚ್ಚು ಲಾಭದ ದೃಷ್ಟಿಯ ಕಾರಣದಿಂದ ಈಗ ಎಲ್ಲಿ ನೋಡಿದರೂ ಅಡಿಕೆ ತೋಟಗಳೇ ಕಾಣಸಿಗುತ್ತದೆ. ಪ್ರತಿ ವರ್ಷ ಸಾವಿರರೂ ಹೆಕ್ಟೇರ್ ಭತ್ತದ ಗದ್ದೆಗಳು ಅಡಿಕೆ ತೋಟಗಳಾಗಿ ಪರಿವರ್ತನೆಯಾಗುತ್ತಿದೆ. ಹೀಗಾಗಿ ಅಡಿಕೆ ಬೆಳೆ ಹೆಚ್ಚಾದರೂ ಬೆಲೆ ಮಾತ್ರ ಕುಗ್ಗಿಲ್ಲ ಇದಕ್ಕೆ ಅನೇಕ ಅಂಶಗಳು ಕೂಡ ಕಾರಣವಾಗಿದೆ.
ಈಶಾನ್ಯ ಗಡಿ ರಾಜ್ಯಗಳಲ್ಲಿ ಸಂಘರ್ಷ ಏರ್ಪಟಿರುವುದರಿಂದ ಕೇಂದ್ರ ಸರ್ಕಾರ ಗಡಿಗಳನ್ನು ಬ್ಲಾಕ್ ಮಾಡಿದೆ ಹಾಗಾಗಿ ಇಂಡೋನೇಷಿಯಾ, ಮಲೇಷಿಯಾ ರಾಷ್ಟ್ರಗಳಿಂದ ದೇಶದ ಮಾರುಕಟ್ಟೆಗೆ ಬರುತ್ತಿರುವ ಕಳಪೆ ಅಡಿಕೆ ಆಮದು ನಿಂತಿದೆ. ಇಂಥಹ ಅಡಿಕೆ ಅವಲಂಬಿಸಿದ ಕೆಲ ಗುಟ್ಕಾ ಕಂಪನಿಗಳು ಈಗ ರೈತರಿಂದಲೇ ನೇರ ಖರೀದಿ ಮಾಡುತ್ತಿದೆ. ಆದ್ದರಿಂದ ಅಡಿಕೆ ಧಾರಣೆಯಲ್ಲಿ ಬೆಲೆ ಹೆಚ್ಚಳವಾಗಿದೆ ಎಂದು ಉದಾಹರಿಸಬಹುದು.
ವ್ಯಾಪಾರದ ಆಟ:
ಇನ್ನೂ ಮೊದಲಿನಿಂದಲೂ ಅಡಿಕೆ ದರ ಏರಿಕೆ ಇಳಿಕೆ ಒಂದು ರೀತಿಯಲ್ಲಿ ಕೊರೊನಾ ವೈರಸ್ ರೀತಿಯಲ್ಲಿ ಏರಿಳಿತ ಕಾಣುತ್ತಿದೆ. ಇತ್ತೀಚೆಗೆ ರೈತರು ಅಡಿಕೆ ದಾಸ್ತಾನು ಮಾಡುವ ಸೌಲಭ್ಯ ಹೊಂದಿದ್ದು, ತಮಗೆ ಅನುಕೂಲಕರ ಸಮಯಕ್ಕೆ ತಂದು ಮಾರುಕಟ್ಟೆಯಲ್ಲಿ ಮಾರುತ್ತಿದ್ದಾರೆ. ದಿಢೀರ್ ಬೆಲೆ ಏರಿಕೆಯಿಂದ ಲಾಭ ಪಡೆಯುವ ಉದ್ದೇಶದಿಂದ ಅಕ್ರಮ-ಸಕ್ರಮ ವ್ಯಾಪಾರಸ್ಥರಲ್ಲಿ ಪೈಪೋಟಿ ಏರ್ಪಟಿರುವುದರಿಂದ ಬೆಲೆ ಏರಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಕಗೆಯಲ್ಲದಿದ್ದರೂ ಅಡಿಕೆ ಬೆಳೆಗಾರರಿಗೆ ಲಾಭವಂತು ಖಚಿತ.
ಬೆಲೆ ಏರಿಕೆಯ ಹಾದಿ:
2020ರ ಫೆಬ್ರವರಿಯಲ್ಲಿ 30 ಸಾವಿರದ ಆಸುಪಾಸಿನಲ್ಲಿದ್ದ ಕೆಂಪಡಿಕೆ ಕೆಲವೇ ತಿಂಗಳಲ್ಲಿ 42-43 ಸಾವಿರದಲ್ಲಿ ಸ್ಥಿರವಾಯಿತ್ತು. 2021ರ ಆಗಸ್ಟ್‌ನಲ್ಲಿ 38ರಿಂದ 43ರವರೆಗೆ ಬೆಲೆಯಲ್ಲಿ ಏರಿಳಿತ ಕಂಡು ನಂತರ 43ರಲ್ಲಿ ಸ್ಥಿರವಾಯಿತು. ಆಗಸ್ಟ್10ರ ನಂತರ ರಾಶಿ ಅಡಿಕೆಗೆ ಗರಿಷ್ಟ ಬೆಲೆ 44,099, 19ರಂದು 44,299ರೂಪಾಯಿ, 19ರಂದು 44099, 23ರಂದು 46599 24ರಂದು 47500ರೂಪಾಯಿಯಾಗಿದೆ. ರೈತರಿಂದ ನೇರ ಖರೀದಿಸುವ ವ್ಯವಹಾರಸ್ಥರು 49ಸಾವಿರಕ್ಕೆ ಖರೀದಿ ಮಾಡಿ ದಾಖಲೆ ಬರೆದಿದ್ದಾರೆ.
ಕಳೆದೊಂದು ವಾರದಿಂದ ಅಡಿಕೆ ಬೆಳೆ ಏರಿಕೆಯಲ್ಲಿ ರಾಜ್ಯದಲ್ಲಿ ಕೊರೊನಾ ಯಾವ ರೀತಿ ಏರಿಳಿಕೆ ಕಾಣುತ್ತಿದೆಯೋ ಅದೇ ರೀತಿ ಏರಿಳಿತ ಕಾಣುತ್ತಿದೆ ಇದು ಅಡಿಕೆ ಬೆಳೆಗಾರರಿಗೆ ಹಾಗೂ ವ್ಯಾಪಾರಸ್ಥರಿಗೆ ಖುಷಿಯ ವಿಚಾರವೂ ಹೌದು.