ದೇವರ ದರ್ಶನಕ್ಕೆ ತೆರಳಿದ್ದ ಒಂದೇ ಕುಟುಂಬದ ಮೂವರು ನೀರುಪಾಲು

ದೇವರ ದರ್ಶನಕ್ಕೆಂದು ತೆರಳಿದ ಭಕ್ತರು ದೇವರ ಗುಡಿಯ ನದಿಯಲ್ಲಿ ಪ್ರಾಣಬಿಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಶಿವಯೋಗಮಂದಿರ ಕ್ಷೇತ್ರದಲ್ಲಿ ನಡೆದಿದೆ.

 

ಒಂದೇ ಕುಟುಂಬದ ಮೂವರು ಬಾದಾಮಿ ತಾಲೂಕಿನ ಶಿವಯೋಗಮಂದಿರ ಕ್ಷೇತ್ರದ ಯಾತ್ರೆಗೆ ತೆರಳಿದ್ದರು. ಈ ನಡುವೆ ಅಲ್ಲಿಯ ನದಿ ತಟದಲ್ಲಿ ಊಟ ಮುಗಿಸಿ, ನದಿಯಲ್ಲಿ ಕೈ ತೊಳೆಯುತ್ತಿದ್ದಂತಹ ಸಂದರ್ಭದಲ್ಲಿ ನದಿಗೆ ಬಿದ್ದಂತಹ ಕುಟುಂಬದ ಒಬ್ಬರನ್ನು ರಕ್ಷಿಸಲು ಹೋಗಿ, ಮೂವರು ನೀರು ಪಾಲಾಗಿರುವ ಘಟನೆ ನಡೆದಿದೆ.

ಒಂದೇ ಕುಟುಂಬದ ವಿಶ್ವನಾಥ ಮಾವಿನಪರದ, ಶ್ರೀದೇವಿ ಹಾಗೂ ನಂದಿನಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ನದಿಯ ಸಮೀಪ ಶ್ರೀದೇವಿ ನದಿಗೆ ಕೈ ತೊಳೆಯಲು ತೆರಳಿದ್ದರು. ಹೀಗೆ ತೆರಳಿದಾಗ ಶ್ರೀ ದೇವಿ ಕಾಲುಜಾರಿ ನದಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸುವುದಕ್ಕೆ ತೆರಳಿದಂತಹ ವಿಶ್ವನಾಥ್ ಹಾಗೂ ನಂದಿನಿ ಕೂಡ ನೀರು ಪಾಲಾಗಿದ್ದಾರೆ.

ಈ ಮೂವರ ಪೈಕಿ ಶ್ರೀದೇವಿ ಅವರ ಮೃತದೇಹ ಸಿಕ್ಕಿದ್ದು, ಇನ್ನಿಬ್ಬರ ಮೃತದೇಹ ಪತ್ತೆಗಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ಮುಂದುವರೆಸಿದ್ದಾರೆ.

Leave A Reply

Your email address will not be published.