ತಾಲೂಕಿನಲ್ಲಿ ಕನಿಷ್ಟ ಒಂದು ಕೃಷಿ ಉತ್ಪಾದಕ ಸಂಘ -ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ದೇಶದ ಎಲ್ಲಾ ಸಣ್ಣ ರೈತರನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಪ್ರತೀ ತಾಲೂಕಿನಲ್ಲಿ ಕನಿಷ್ಟ ಒಂದು ಕೃಷಿ ಉತ್ಪಾದಕ ಸಂಘ ಆರಂಭಿಸಲಾಗುವುದು ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಕೇಂದ್ರ ಸಚಿವರಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ತವರು ಜಿಲ್ಲೆಗೆ ಆಗಮಿಸಿದ ಶೋಭಾ ಕರಂದ್ಲಾಜೆಗೆ ಹುಟ್ಟೂರಿನ ಸನ್ಮಾನ ನೀಡಲಾಗಿತ್ತು.
ಇದೇ ಸಂದರ್ಭದಲ್ಲಿ ಸಚಿವರು ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಭಾರತ ಸಣ್ಣ ರೈತರನ್ನೇ ಹೊಂದಿರುವ ದೇಶವಾಗಿದ್ದು, ದೇಶದ ಎಲ್ಲಾ ರೈತರನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೃಷಿ ಉತ್ಪಾದಕ ಸಂಘವನ್ನು ಆರಂಭಿಸಲು ಸೂಚನೆ ನೀಡಿದ್ದಾರೆ.
ದೇಶದ ಪ್ರತೀ ತಾಲೂಕಿನಲ್ಲಿ ಕನಿಷ್ಟ ಒಂದು ಕೃಷಿ ಉತ್ಪಾದಕ ಸಂಘದಂತೆ ದೇಶದಲ್ಲಿ ಸುಮಾರು 10 ಸಾವಿರ ಇಂಥಹ ಸಂಘಗಳು ಅಸ್ತಿತ್ವಕ್ಕೆ ಬರಲಿದ್ದು, ಇದಕ್ಕೆ ಬೇಕಾದ ಹಣಕಾಸಿನ ನೆರವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಭರಿಸಲಿದೆ ಎಂದ ಅವರು ಕೃಷಿ ಬಜೆಟ್ ಹೊರತುಪಡಿಸಿ ಕೃಷಿಯ ಮೂಲಭೂತ ವ್ಯವಸ್ಥೆಗಾಗಿಯೇ ಕೇಂದ್ರ ಸರಕಾರ ಹೆಚ್ಚುವರಿ 1 ಲಕ್ಷ ಕೋಟಿ ರೂಪಾಯಿಗಳನ್ನು ತೆಗೆದಿರಿಸಿದ್ದು, ಕೃಷಿಯ ಮೂಲಭೂತ ವ್ಯವಸ್ಥೆಗಳಿಗಾಗಿ ಈ ಹಣ ವಿನಿಯೋಗಿಸಲಾಗುವುದು ಎಂದು ಹೇಳಿದರು.