ಕಡಬ : ಬಂಟ್ರದಲ್ಲಿ ಮತ್ತೆ ಅಕ್ರಮ ಕಪ್ಪು ಕಲ್ಲಿನ ಕ್ವಾರೆ ಆರಂಭಕ್ಕೆ ಸಿದ್ದತೆ | ಸ್ಥಳೀಯ ನಾಗರೀಕರಿಂದ ಜಿಲ್ಲಾಧಿಕಾರಿಗೆ ದೂರು
ಕಡಬ ತಾಲೂಕಿನ ಬಂಟ್ರ ಗ್ರಾಮದ ಕುಂಡಡ್ಕ ಎಂಬಲ್ಲಿ ಪುನರಾರಂಭಿಸಲು ಉದ್ದೇಶಿಸಿರುವ ಕಪ್ಪು ಕಲ್ಲಿನ ಕ್ವಾರೆಗೆ (ಜಲ್ಲಿ ಕ್ವಾರೆಗೆ ) ಸ್ಥಳೀಯ ನಾಗರೀಕರು ಆಕ್ಷೇಪಣೆ ಸಲ್ಲಿಸಿ ದ.ಕ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದಾರೆ.
ಸ .ನಂ 13 ರ ದಾಖಲಾತಿಯನ್ನು ನೀಡಿ ಸ.ನಂ ೧೫ ರಲ್ಲಿ ಈ ಹಿಂದೆ 1998 ರಿಂದ 2009ರ ವರೆಗೆ ದಿ.ಬಾಬು ಗೌಡ ಅವರ ಮಕ್ಕಳ ಉಸ್ತುವಾರಿಯಲ್ಲಿ ಅಕ್ರಮವಾಗಿ ಕ್ವಾರೆಯಿಂದ ಸುಮಾರು 70,000 ಲೋಡ್ ಜಲ್ಲಿಯನ್ನು ತೆಗೆಯಲಾಗಿತ್ತು. ಇದರ ವಿರುದ್ಧ ಸಾರ್ವಜನಿಕರು ದೂರು ನೀಡಿದ ಬೆನ್ನಲ್ಲೇ ಕ್ವಾರೆ ಸ್ತಗಿತಗೊಂಡಿತ್ತು.
ಇದೀಗ ಮತ್ತೆ ಪ್ರಾರಂಭಿಸಲು ತೆರೆಮೆರೆಯಲ್ಲಿ ಪ್ರಯತ್ನಿಸಲಾಗುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿಯವರಿಗೆ ನೀಡಿದ ಮನವಿಯಲ್ಲಿ ವಿನಂತಿಸಲಾಗಿಧ.
ಕ್ವಾರೆಯ ಆರಂಭದಿಂದಲೂ ಕ್ವಾರೆಯ ಸುತ್ತಲಿನ ರೈತರು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಕಲ್ಲು ಒಡೆಯಲು ಬಳಸುವ ಡೈನಾಮಿಕ್ ಸ್ಪೋಟಿಸುವಾಗ ಭಯದಿಂದ ಇರಬೇಕಾಗಿತ್ತು. ಸ್ಪೋಟದ ರಭಸಕ್ಕೆ ಕೃಷಿ ಭೂಮಿ, ಹಾಗೂ ಮನೆಗಳಿಗೆ ಕಲ್ಲಿನ ಚೂರುಗಳು ಬಿದ್ದು ಹಾನಿಯಾಗುತ್ತಿದ್ದವು, ಮಾತ್ರವಲ್ಲ ಕ್ವಾರೆಯ ಪಕ್ಕದ ದೇವಸ್ಥಾನಕ್ಕೆ ಬಿದ್ದ ಉದಾಹರಣೆ ಕೂಡಾ ಇದೆ.
ಜಲ್ಲಿ ಹುಡಿ ಮಾಡುವ ಆರ್ಭಟಕ್ಕೆ ಶಬ್ದ ಮಾಲಿನ್ಯವಾಗುತ್ತಿದುದಲ್ಲದೆ, ಧೂಳಿನಿಂದ ಆರೋಗ್ಯ ಸಮಸ್ಯೆ ಕೂಡಾ ಆಗುತ್ತಿತ್ತು. ಈ ಎಲ್ಲಾ ಕಾರಣಕ್ಕಾಗಿ ಅದನ್ನು ಸ್ಥಗಿತಗೊಳಿಸಬೇಕು ಎಂದು ದೂರು ನೀಡಿರುವುದರಿಂದ ಕ್ವಾರೆ ನಿಂತು ಹೋಗಿತ್ತು.
ಇದೀಗ ಕ್ವಾರೆಯನ್ನು ಪುನರಾರಂಭಿಸುವುದು ಸರಿಯಲ್ಲ ಎಂದು ನಾಗರೀಕರು ಜಿಲ್ಲಾಧಿಕಾರಿಯವರಿಗೆ ನೀಡಿದ ದೂರಿನಲ್ಲಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಕ್ವಾರೆಯ ಜಾಗ ಕಳೆದ ಹತ್ತು ವರ್ಷಗಳಿದ ಸಣ್ಣಪುಟ್ಟ ಪ್ರಾಣಿ ಪಕ್ಷಿ ಹಗೂ ಅನೇಕ ವೈವಿದ್ಯ ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ, ರಾಷ್ಟç ಪಕ್ಷಿ ನವಿಲುಗಳು ಬೀಡುಬಿಟ್ಟು ತಮ್ಮ ವಂಶಾಭಿವೃದ್ಧಿ ಮಾಡುತ್ತಿವೆ, ಐತ್ತೂರು ಗ್ರಾಮ ಮೂಜೂರು ಮೀಸಲು ಅರಣ್ಯ ಪ್ರದೆಶವು ಕ್ವಾರೆಯ ಅಂಚಿನಿಂದಲೇ ಪ್ರಾರಂಭವಾಗುತ್ತಿದೆ. ಕ್ವಾರೆ ಮರು ಪ್ರಾರಂಭಿಸಿದರೆ ಇದಕ್ಕೆಲ್ಲ ಸಂಚಕಾರ ಉಂಟಾಗಲಿದೆ.