ಸುಳ್ಯ | ಬಸ್ಸಿನಲ್ಲಿ ಹಿಂದೂ ಯುವತಿಯರ ಜೊತೆ ಮುಸ್ಲಿಂ ಯುವಕ ಪ್ರಯಾಣದ ಶಂಕೆ | ಬಸ್ಸನ್ನು ತಡೆದು, ಪೊಲೀಸರನ್ನೇ ತರಾಟೆಗೆ ತೆಗೆದುಕೊಂಡ ಬಜರಂಗದಳದ ಕಾರ್ಯಕರ್ತರು

ಸುಳ್ಯ: ಪುತ್ತೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ಸಿನಲ್ಲಿದ್ದ ಯುವತಿಯರಿಬ್ಬರ ಜೊತೆಗೆ ಮುಸ್ಲಿಂ ಯುವಕನೋರ್ವ ಮಾತನಾಡಿದನೆಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ಬಸ್ಸನ್ನು ತಡೆದು ಸುಳ್ಯ ಪೊಲೀಸ್ ಠಾಣೆ ಮೆಟ್ಟಿಲೇರಿಸಿದ ಪ್ರಕರಣ ಗುರುವಾರ ತಡರಾತ್ರಿ ನಡೆದಿದೆ.

ಬಸ್ಸಿನಲ್ಲಿದ್ದ ಯುವತಿಯರಿಗೂ ಯುವಕನಿಗೂ ಯಾವುದೇ ಪರಸ್ಪರ ಪರಿಚಯ ಕೂಡಾ ಇರಲಿಲ್ಲ ಎನ್ನಲಾಗಿದ್ದು, ಬಳಿಕ ಪ್ರಕರಣ ಠಾಣೆಯಲ್ಲೇ ಇತ್ಯರ್ಥಗೊಂಡಿದೆ. ಆದರೂ ಕೊನೆಯಲ್ಲಿ ಬಜರಂಗದಳದ ನಾಯಕರು ಎಎಸ್ಪಿ ಅವರಿಗೆ ಠಾಣೆಯಲ್ಲೇ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು ಮೂಲದ ಯುವತಿಯರಿಬ್ಬರು ಪುತ್ತೂರಿಗೆ ಕೆಲಸದ ನಿಮಿತ್ತ ಬಂದಿದ್ದರು. ರಾತ್ರಿ ಬೆಂಗಳೂರು ಕಡೆಗೆ ವಾಪಸ್ಸಾಗುವಾಗ, ಇಬ್ಬರು ಬಸ್ಸಿನ ಚಾಲಕನ ಬದಿಯ ಅಡ್ಡ ಸೀಟಿನಲ್ಲಿ ಕುಳಿತಿದ್ದರು. ಹಾಗೆಯೇ ಚಾಲಕನ ಹಿಂದಿನ ಸೀಟಿನಲ್ಲಿ ಬೆಳ್ಳಾರೆ ನಿವಾಸಿ ಮುಸ್ಲಿಮ್ ಯುವಕನೋರ್ವ ಕುಳಿತಿದ್ದ.

ಪ್ರಯಾಣದ ವೇಳೆ ಯುವತಿಯರಿಬ್ಬರ ಜೊತೆಗೆ ಯುವಕ ಮಾತುಕತೆ ನಡೆಸಿ ಮೊಬೈಲ್ ಪೋನ್ ಸಂಖ್ಯೆ ಪಡೆದುಕೊಂಡು ಚಾಟಿಂಗ್ ನಡೆಸುತ್ತಿದ್ದರು ಎಂದು ಸಂಶಯ ವ್ಯಕ್ತಪಡಿಸಿ ಯಾರೋ ಒಬ್ಬರು ಈ ವಿಷಯವನ್ನು ಬಜರಂಗದಳದ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಹಾಗೆಯೇ ಪುತ್ತೂರಿನಿಂದ ಕುಂಬ್ರದಲ್ಲಿ ಇಳಿಯಬೇಕಾದ ಯುವಕ ಬೆಂಗಳೂರಿಗೆ ಟಿಕೆಟ್ ಪಡೆದಿರುವ ವಿಚಾರದ ಕುರಿತೂ ಸಂಶಯ ವ್ಯಕ್ತಪಡಿಸಿದ್ದು, ಪುತ್ತೂರಿನ ಬಜರಂಗದಳ ಕಾರ್ಯಕರ್ತರು ಮಾಹಿತಿ ಪಡೆದು ಕಾರಿನಲ್ಲಿ ಬಸ್ಸನ್ನು ಹಿಂಬಾಲಿಸಲು ಆರಂಭಿಸಿದ್ದರು. ನಂತರ ಒಂದು ಕಡೆ ಬಸ್ಸನ್ನು ಅಡ್ಡಕಟ್ಟಿ, ಬಸ್ಸಿನಲ್ಲೇ ಯುವಕನನ್ನು ತರಾಟೆಗೈದು ಆತನ ಮೊಬೈಲ್ ಫೋನ್ ಕಿತ್ತುಕೊಂಡಿದ್ದಾರೆ.

ಆ ಸಂದರ್ಭದಲ್ಲಿ ಅದೇ ಬಸ್ಸಲ್ಲಿ ಪ್ರಯಾಣಿಸುತ್ತಿದ್ದ ಪೊಲೀಸರೊಬ್ಬರು, ” ನೀವು ಬಸ್ಸಲ್ಲಿ ಈ ರೀತಿ ಜಗಳ ಮಾಡಿ ಪ್ರಯಾಣಿಕರಿಗೆ ತೊಂದರೆ ಕೊಡುವುದು ಸರಿಯಲ್ಲ. ಏನಿದ್ದರೂ ಸುಳ್ಯ ಪೊಲೀಸ್ ಠಾಣೆಗೆ ಹೋಗಿ ಅಲ್ಲಿ ಇತ್ಯರ್ಥ ಮಾಡಿಕೊಳ್ಳಿ ” ಎಂದು ಸಲಹೆ ನೀಡಿದರು.

ಇದನ್ನು ಒಪ್ಪಿಕೊಂಡ ಬಜರಂಗದಳದ ಯುವಕರು ಬಸ್ಸನ್ನು ಪೋಲೀಸ್ ಠಾಣೆಗೆ ಕೊಂಡೊಯ್ಯಬೇಕೆಂದು ಬಸ್ ಚಾಲಕ ಮತ್ತು ಕಂಡಕ್ಟರ್ ಗೆ ತಾಕೀತು ಮಾಡಿ, ನೌಷಾದ್ ನ ಮೊಬೈಲ್ ಸಮೇತ ಬಸ್ಸಿನಿಂದ ಕೆಳಗಿಳಿದು ತಮ್ಮ ಕಾರಲ್ಲಿ ಬಸ್ಸನ್ನು ಹಿಂಬಾಲಿಸತೊಡಗಿದರು.

ಪೈಚಾರಲ್ಲಿ ಪ್ರಯಾಣಿಕರೊಬ್ಬರನ್ನು ಇಳಿಸುವುದಕ್ಕಾಗಿ ಬಸ್ಸು ನಿಂತಾಗ ನೌಷಾದ್ ಕೂಡ ಬಸ್ಸಿಂದ ಇಳಿದು ತನ್ನ ಸ್ವಜಾತಿ ಬಾಂಧವರಿಗೆ ವಿಷಯ ತಿಳಿಸಿ ತನ್ನ ಮೊಬೈಲನ್ನು ವಿನಾಕಾರಣ ಭಜರಂಗದಳದ ಯುವಕರು ಇಟ್ಟುಕೊಂಡಿರುವುದಾಗಿ ತಿಳಿಸಿದನೆನ್ನಲಾಗಿದೆ. ಆ ಸಂದರ್ಭದಲ್ಲಿ ಅಲ್ಲಿಯ ಹತ್ತಿಪ್ಪತ್ತು ಮಂದಿ ನೌಶಾದ್ ನ ಸ್ವಜಾತಿ ಬಾಂಧವರು ಬಸ್ ಮತ್ತು ಕಾರಿನೆದುರು ಸೇರಿದರು.

ಬಸ್ಸನ್ನು ಬಜರಂಗದಳದ ಕಾರ್ಯಕರ್ತರು ಯುವಕರು ಹಿಂಬಾಲಿಸುತ್ತಿರುವ ಮಾಹಿತಿ ಮೊದಲೇ ಬಂದ ಹಿನ್ನೆಲೆಯಲ್ಲಿ ಸುಳ್ಯ ಎಸ್ಐ ಹರೀಶ್ ಎಂ.ಆರ್.ರವರು ಪೈಚಾರ್ ಗೆ ಧಾವಿಸಿದರು. ಆ ವೇಳೆಗೆ ರಸ್ತೆಯಲ್ಲಿ ಬಸ್ಸು ನಿಂತು ಜನ ಸೇರಿದ್ದರು. ಎಸ್ಐಯವರು ಭಜರಂಗದಳದ ಐವರು ಯುವಕರನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಬಂದರು. ಬಸ್ಸನ್ನು ಕೂಡ ಠಾಣೆಗೆ ತರುವಂತೆ ಸೂಚಿಸಿದರು.

ಠಾಣೆಯಲ್ಲಿ ಬಸ್ಸಲ್ಲಿದ್ದ ಆ ಇಬ್ಬರು ಯುವತಿಯರನ್ನು ಮತ್ತು ನೌಷಾದ್ ನನ್ನು ವಿಚಾರಣೆಗೆ ಒಳಪಡಿಸಲಾಯಿತು. ಆ ವೇಳೆಗೆ ಪುತ್ತೂರಿನಿಂದ ಬಜರಂಗದಳದ ಮುಖಂಡರುಗಳಾದ ಅಜಿತ್ ರೈ ಹೊಸಮನೆ, ನ್ಯಾಯವಾದಿ ಚಿನ್ಮಯ್ ಮತ್ತಿತರ ಹಲವು ಯುವಕರು ಮತ್ತು ಸುಳ್ಯದ ಬಜರಂಗದಳದ ಹಲವು ಯುವಕರು ಪೊಲೀಸ್ ಠಾಣೆಗೆ ಬಂದರು.

ನೌಷಾದ್ ನ ಮೊಬೈಲನ್ನು ಪರಿಶೀಲಿಸಿದಾಗ ಮತ್ತು ಆ ಯುವತಿಯರ ಮೊಬೈಲ್ ಅನ್ನು ಪರಿಶೀಲಿಸಿದಾಗ ಅವರ ನಂಬರ್ ಗಳು ಎರಡೂ ಮೊಬೈಲ್ ಗಳಲ್ಲಿ ಇರಲಿಲ್ಲ. ಹಾಗೂ ಎರಡೂ ಕಡೆಯವರು ತಮಗೆ ಈ ಮೊದಲು ಪರಿಚಯವೇ ಇಲ್ಲದ ಬಗ್ಗೆ ಹೇಳಿಕೊಂಡರಲ್ಲದೆ, ಬಸ್ಸಲ್ಲಿ ಕೂಡ ಪರಸ್ಪರ ಮಾತುಕತೆ ನಡೆಸಿಲ್ಲ ಎಂದು ತಿಳಿಸಿದರೆನ್ನಲಾಗಿದೆ. ಇದನ್ನು ಬಸ್ ಕಂಡಕ್ಟರ್ ಕೂಡ ಖಚಿತಪಡಿಸಿದ್ದರಿಂದ ಭಜರಂಗದಳದವರು ತಪ್ಪು ಮಾಹಿತಿಯಿಂದ ಬಸ್ಸನ್ನು ಅಡ್ಡಗಟ್ಟಿದರೆನ್ನಲಾಯಿತು.

ಪೊಲೀಸರ ಮೇಲೆ ಆಕ್ರೋಶ:

ಆದರೆ ಆ ಬಳಿಕ ನಡೆದದ್ದೇ ಬೇರೆ. ಪುತ್ತೂರಿನಿಂದ ಬಂದಿದ್ದ ನ್ಯಾಯವಾದಿ ಚಿನ್ಮಯ್ ಎಂಬವರನ್ನು ಎಎಸೈ ಶಿವರಾಮಗೌಡರು ಅಗೌರವಪೂರ್ವಕವಾಗಿ ನಡೆಸಿಕೊಂಡರೆಂಬ ವಿಚಾರ ಮತ್ತು ಸರ್ಕಲ್ ಇನ್ ಸ್ಪೆಕ್ಟರ್ ಜೋಗಿಯವರು ಬಸ್ ಅಡ್ಡಗಟ್ಟಿದ್ದ ಪುತ್ತೂರಿನ ಬಜರಂಗದಳದ ಯುವಕರನ್ನು ಲಾಕಪ್ಪಲ್ಲಿ ಕೂರಿಸಲು ಪೋಲೀಸ್ ಸಿಬ್ಬಂದಿಯೊಂದಿಗೆ ಹೇಳಿದರೆಂಬ ವಿಚಾರ ಮುನ್ನೆಲೆಗೆ ಬಂದಿತು. ಹೀಗೆ ಹೇಳಿದ್ದು ಸರಿಯೇ ಎಂದು ಬಜರಂಗದಳದ ಮುಖಂಡರು ಎಸ್ಪಿ ಹಾಗೂ ಸರ್ಕಲ್ ರನ್ನು ಪ್ರಶ್ನಿಸತೊಡಗಿದರು. ಇದನ್ನು ಎಸ್ಐ ಹರೀಶ್ ರವರು ತೀವ್ರವಾಗಿ ವಿರೋಧಿಸಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡುವ ಬಗ್ಗೆ ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯವಿದೆ ಅದನ್ನು ನೀವು ಪ್ರಶ್ನಿಸುವಂತಿಲ್ಲ ಎಂದು ಅವರು ಹೇಳತೊಡಗಿದರು.

ಈ ವಿಚಾರವಾಗಿ ಬಜರಂಗದಳದ ನಾಯಕರು ಮತ್ತು ಪೊಲೀಸ್ ಅಧಿಕಾರಿಗಳ ಮಧ್ಯೆ ಸುಮಾರು 1 ಗಂಟೆ ಕಾಲ ಮಾತಿನ ಚಕಮಕಿ ನಡೆಯಿತು. ಎಎಸ್ಐ ಶಿವರಾಮರು ಕ್ಷಮೆ ಕೇಳಬೇಕು ಎಂಬ ಬೇಡಿಕೆಯನ್ನು ಕೂಡ ಬಜರಂಗದಳದ ನಾಯಕರು ಮುಂದಿಟ್ಟರು. ಅದನ್ನು ಸರ್ಕಲ್ ಮತ್ತು ಎಸೈಯವರು ನಿರಾಕರಿಸಿದರು.

ಅಷ್ಟೊತ್ತಿಗೆ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ರಿಗೆ ಫೋನ್ ಹೋಗಿ ಅವರಿಂದ ಸರ್ಕಲ್ ಇನ್ಸ್ ಪೆಕ್ಟರ್ ಗೆ ಫೋನು ಬಂತು ಎಂದು ತಿಳಿದುಬಂದಿದೆ. ಕೊನೆಯಲ್ಲಿ ಯಾವ ವಿಚಾರವೂ ಇಲ್ಲದೆ ಪ್ರಕರಣ ಇತ್ಯರ್ಥಗೊಂಡಿತು. ಪೊಲೀಸರು ಆ ಮಹಿಳೆಯರನ್ನು ಅದೇ ಬಸ್ಸಲ್ಲಿ ಬೆಂಗಳೂರಿಗೆ ಕಳಿಸಿದರು. ನೌಷಾದ್ ರನ್ನು ಮಾತ್ರ ಠಾಣೆಯಲ್ಲಿ ಕೂರಿಸಿ ನಂತರದ ಬಸ್ಸಲ್ಲಿ ಕಳುಹಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದರು.

ಎಎಸ್ಐಗೆ ಅಜಿತ್ ಎಚ್ಚರಿಕೆ:

ಎಲ್ಲರೂ ಠಾಣೆಯಿಂದ ಹೊರ ಹೋಗುವ ವೇಳೆಗೆ ಅಜಿತ್ ರೈ ಹೊಸಮನೆ ಅವರು ಎಎಸ್ ಐ ಶಿವರಾಮ ಗೌಡರಿಗೆ ಠಾಣೆಯ ಒಳಗಡೆಯೇ ಎಚ್ಚರಿಕೆ ನೀಡಿದರು.” ಶಿವರಾಮ, ನಿನ್ನ ವಿಷಯ ಗೊತ್ತಿದೆ. ನೀನು ನಮ್ಮನ್ನು ಲಾಟ್ ಪೋಟ್ ಅಂದಿಯಲ್ಲ. ಅದನ್ನು 1 ವಾರದೊಳಗೆ ತೋರಿಸುತ್ತೇನೆ” ಎಂದು ಅಜಿತ್ ರೈ ಹೊಸಮನೆ ಅವರು ಎಚ್ಚರಿಕೆ ನೀಡಿದಾಗ ಎಎಸ್ಐ ಶಿವರಾಮರು ಎಸ್ಪಿ ಕೊಠಡಿಯಲ್ಲಿದ್ದ ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಎಸ್ಐಯವರಿಗೆ, ಹೊರಗಡೆ ಅವರು ಬೆದರಿಕೆ ಒಡ್ಡುತ್ತಿದ್ದಾರೆ ಎಂದು ದೂರಿಕೊಂಡರು. ಎಸೈಯವರು ಹೊರಗೆ ಬಂದು, ಒಮ್ಮೆ ಮಾತುಕತೆಯಲ್ಲಿ ಸಂಪೂರ್ಣ ಇತ್ಯರ್ಥಗೊಂಡ ಬಳಿಕ ಮತ್ತೆ ಈ ರೀತಿ ಮಾತನಾಡುತ್ತಿರುವುದು ಸರಿಯಲ್ಲ, ನೀವು ಹೋಗಿ ಎಂದು ಹೇಳಿ ಅವರೆಲ್ಲರನ್ನು ಹೊರಗೆ ಕಳುಹಿಸತೊಡಗಿದರು.

ಆಗ ಅಜಿತ್ ರೈ ಹೊಸಮನೆ ಅವರು ” ಈ ವಿಚಾರವನ್ನು ನಾವು ಇಲ್ಲಿಗೆ ಬಿಡುವುದಿಲ್ಲ. ಲಾಟ್ ಪೋಟ್ ಯಾರೆಂದು 1 ವಾರದಲ್ಲಿ ತೋರಿಸುತ್ತೇವೆ” ಎನ್ನುತ್ತ ಹೊರಗೆ ಬಂದರು. ಹೊರಗೆ ಸೇರಿದ್ದ ಸುಮಾರು 50 ಜನ ಯುವಕರು ಬೋಲೋ ಭಾರತ್ ಮಾತಾಕಿ ಜೈ ಘೋಷಣೆ ಕೂಗುತ್ತಾ ತೆರಳತೊಡಗಿದರು.

ಆ ವೇಳೆಗೆ ಸಚಿವ ಅಂಗಾರರಿಂದ ನಿರ್ದೇಶಿತರಾದ ಕಿಸಾನ್ ಮೋರ್ಚಾ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಠಾಣೆ ತಲುಪಿದರು. ಆ ವೇಳೆಗೆ ಎಲ್ಲವೂ ಮುಗಿದಿದ್ದುದರಿಂದ ಬೊಳ್ಳೂರುರವರು ಅಧಿಕಾರಿಗಳೊಂದಿಗೆ ಮಾತನಾಡಿ ವಾಪಸ್ಸಾದರು.

ನಾನು ಕುಂಬ್ರ ತಲುಪುವ ವೇಳೆಗೆ ಬೆಂಗಳೂರಿನಿಂದ ನನಗೆ ಕರೆ ಬಂದು ಬೆಂಗಳೂರಿನಲ್ಲಿ ಕೆಲಸವಿದೆ ಬಾ ಎಂದು ಹೇಳಿದ್ದರಿಂದ ನಾನು ಬೆಂಗಳೂರಿಗೆ ಟಿಕೆಟ್ ಮಾಡಿದ್ದೆ. ನನಗೂ ಆ ಮಹಿಳೆಯರಿಗೂ ಯಾವ ಪರಿಚಯವೂ ಇಲ್ಲ ಎಂದು ನೌಷಾದ್ ಹೇಳಿದ್ದಾರೆ.

ಮಹಿಳೆಯರಾಗಲೀ ಯುವಕರಾಗಲೀ ಯಾರೂ ದೂರು ಕೊಡಲು ನಿರಾಕರಿಸಿದ್ದರಿಂದ, ಕೇಸು ದಾಖಲಿಸದೆ ಮಾತುಕತೆಯಲ್ಲಿ ಘಟನೆಯನ್ನು ಇತ್ಯರ್ಥಗೊಳಿಸಿ ಕಳುಹಿಸಲಾಗಿದೆ ಎಂದು ಸರ್ಕಲ್ ಇನ್ ಸ್ಪೆಕ್ಟರ್ ನವೀನ್ ಚಂದ್ರ ಜೋಗಿಯವರು ತಿಳಿಸಿದ್ದಾರೆ.

ಬಸ್ಸಲ್ಲಿ ಬೆಂಗಳೂರಿಗೆ ಹೋಗುತ್ತಿದ್ದ ಇಬ್ಬರು ಮಹಿಳೆಯರು ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡವರನ್ನು ನಮಗೆ ತಿಳಿದು ಬಂದಿದೆ.
ಹಿಂದೂ ಯುವತಿಯರನ್ನು ದುರುಪಯೋಗಿಸಿಕೊಳ್ಳುವುದನ್ನು ನಾವು ಸಹಿಸುವುದಿಲ್ಲ. ಪೊಲೀಸ್ ಠಾಣೆಯಲ್ಲಿ ಎಎಸೈ ಶಿವರಾಮ ಎಂಬವರು ನಮ್ಮೊಡನೆ ಅನುಚಿತವಾಗಿ ವರ್ತಿಸಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಬಜರಂಗದಳದ ನಾಯಕ ಅಜಿತ್ ರೈ ಹೊಸಮನೆ ತಿಳಿಸಿದ್ದಾರೆ. ಘಟನೆಯ ಬಗ್ಗೆ ಗೃಹ ಸಚಿವರ ಗಮನಕ್ಕೆ ತರಲು ಅವರು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

ಆದರೆ ಯುವತಿಯರ ಹಾಗೂ ಯುವಕನ ಮೊಬೈಲ್ ಫೋನ್‌ಗಳನ್ನು ಪೊಲೀಸರು ಪರಿಶೀಲಿಸಿದಾಗ ಬಜರಂಗದಳ ಕಾರ್ಯಕರ್ತರು ಆರೋಪಿಸಿದ ರೀತಿಯಲ್ಲಿ ಯಾವುದೇ ಸಾಕ್ಷ್ಯಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಪ್ರಕರಣವನ್ನು ಅಲ್ಲಿಗೇ ಇತ್ಯರ್ಥಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.