ತಾಂತ್ರಿಕ ಸಮಿತಿ, ಟಾಸ್ಕ್ ಫೋರ್ಸ್ ಹಾಗೂ ಮಕ್ಕಳ ತಜ್ಞರ ವರದಿಯ ಆಧಾರದಲ್ಲಿ 9 ರಿಂದ 12 ನೇ ತರಗತಿ ಸರಕಾರ ನಿರ್ಧಾರ- ಸಚಿವ ಬಿ.ಸಿ.ನಾಗೇಶ್
ತಾಂತ್ರಿಕ ಸಮಿತಿ, ಟಾಸ್ಕ್ ಫೋರ್ಸ್ ಹಾಗೂ ಮಕ್ಕಳ ತಜ್ಞರ ವರದಿಯ ಆಧಾರದ ಮೇಲೆ 9 ರಿಂದ 12 ನೇ ತರಗತಿಗಳನ್ನು ನಡೆಸಲು ಸರ್ಕಾರ ಮುಂದಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಚಿತ್ರದುರ್ಗ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಒಂದೂವರೆ ವರ್ಷದಿಂದ ಕೊರೊನಾ ನಡುವೆಯೂ ಮಕ್ಕಳಿಗೆ ಕಲಿಕಾ ವಾತಾವರಣ ನಿರ್ಮಿಸಲು ಆನ್ಲೈನ್ ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಆದರೂ, ಶೇ.30 ರಿಂದ 40 ರಷ್ಟು ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಶೇ.99 ರಷ್ಟು ಮಕ್ಕಳು ಹಾಜರಾಗಿದ್ದರು. ಪೋಷಕರು ಹಾಗು ಮಕ್ಕಳ ಧೈರ್ಯದ ಮೇಲೆ ಈಗ ಶಾಲೆ ಆರಂಭಿಸುತ್ತಿದ್ದೇವೆ. ಎಲ್ಲಾ ಕಡೆ ಡಿಡಿಪಿಐ, ಬಿಇಒಗಳ ಮೀಟಿಂಗ್ ನಡೆಸುತ್ತಿದ್ದೇನೆ. ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿಕೊಂಡು 9,10,11 ಹಾಗು 12ನೇ ತರಗತಿಗಳನ್ನು ಆರಂಭಿಸಲು ಸಿದ್ಧತೆ ನಡೆದಿದೆ ಎಂದರು.
ಇದರ ಯಶಸ್ಸಿನ ಆಧಾರದಲ್ಲಿ 1 ರಿಂದ 8 ನೇ ತರಗತಿಗಳನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗುವುದು.
ಒಂದು ವೇಳೆ ಮಕ್ಕಳು ಭಯದಿಂದ ಶಾಲೆಗೆ ಬರದಿದ್ದರೆ ಅವರ ಮನವೊಲಿಸಲು ಶಿಕ್ಷಕರಿಗೆ ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಬಲವಂತ ಮಾಡುವುದಿಲ್ಲ. ಪೋಷಕರು ಒಪ್ಪದಿದ್ದರೆ ಅವರಿಗೆ ಆನ್ ಲೈನ್ ಮುಂದುವರೆಯುತ್ತದೆ. ಈ ಬಗ್ಗೆ ಆತಂಕ ಬೇಡ ಎಂದರು.
ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಬದರಿನಾಥ್, ಬಿಜೆಪಿ ವಿಭಾಗೀಯ ಪ್ರಭಾರಿ ಜಿ.ಎಂ. ಸುರೇಶ್, ಮಾಜಿ ಜಿಲ್ಲಾಧ್ಯಕ್ಷ ಟಿ.ಜಿ.ನರೇಂದ್ರನಾಥ್ ಮತ್ತಿತರರಿದ್ದರು.
ಪದವಿ ಪೂರ್ವ ಶಿಕ್ಷಣಕ್ಕೆ ಹೆಚ್ಚು ವಿದ್ಯಾರ್ಥಿಗಳು ಸೇರುವ ನಿರೀಕ್ಷೆ ಇದೆ. 8.75 ಲಕ್ಷ ಮಕ್ಕಳು ತೇರ್ಗಡೆಯಾಗಿದ್ದು, ಎಲ್ಲರು ಕಾಲೇಜಿಗೆ ಬರುವುದಿಲ್ಲ. ಪಿಯುಸಿಗೆ 12 ಲಕ್ಷ ಮಕ್ಕಳು ಸೇರುವಷ್ಟು ವ್ಯವಸ್ಥೆ ಇದೆ. ರಾಜ್ಯದ ಕೆಲವೆಡೆ ಸಮಸ್ಯೆ ಆಗಬಹುದು. ಸೀಟುಗಳನ್ನು ಹೆಚ್ಚಿಸಿಕೊಳ್ಳಲು ಡಿಡಿಪಿಐ ಗಳಿಗೆ ಸೂಚಿಸಿದ್ದೇವೆ ಎಂದು ಬಿ.ಸಿ.ನಾಗೇಶ್ ಹೇಳಿದರು.