ಪ್ರಧಾನಿ ನರೇಂದ್ರ ಮೋದಿಯವರ ದೇವಾಲಯ ನಿರ್ಮಿಸಿದ ಬಿಜೆಪಿ ಕಾರ್ಯಕರ್ತ | ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್
ಅತ್ತ ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಚಂದ್ರರ ಮಂದಿರ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ, ಇತ್ತ ಪುಣೆಯಲ್ಲಿ ಬಿಜೆಪಿ ಕಾರ್ಯಕರ್ತ ಹಾಗೂ ಮೋದಿಯ ದೊಡ್ಡ ಅಭಿಮಾನಿ ಪ್ರಧಾನಿ ನರೇಂದ್ರ ಮೋದಿಯವರ ದೇವಸ್ಥಾನ ಕಟ್ಟಿಸಿದ್ದಾರೆ.
ಹಾಗೆಯೇ ನೂತನವಾಗಿ ನಿರ್ಮಾಣವಾಗಿರುವ ಪ್ರಧಾನಿ ಮೋದಿ ದೇವಾಲಯವನ್ನು 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಂದು ಉದ್ಘಾಟನೆ ಕೂಡ ಮಾಡಿಸಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡುತ್ತಿರುವ ಪ್ರಧಾನಿ ಮೋದಿಯವರಿಗೆ ಗೌರವ ಸಲ್ಲಿಸಲು ದೇವಸ್ಥಾನ ನಿರ್ಮಿಸಿರುವುದಾಗಿ 37 ವರ್ಷದ ಬಿಜೆಪಿ ಕಾರ್ಯಕರ್ತ ಮಯೂರ್ ಮುಂಡೆ ಹೇಳಿದ್ದಾರೆ.
6×2.5 x7.5 ಅಡಿ ಅಳತೆಯ ಪ್ರಧಾನಿ ಮೋದಿ ದೇವಸ್ಥಾನವು ಪುಣೆಯ ಔಂದ್ ಪ್ರದೇಶದ ರಸ್ತೆಬದಿಯಲ್ಲಿ ನಿರ್ಮಿಸಲಾಗಿದೆ. ಈ ದೇವಸ್ಥಾನದ ಫೋಟೋಗಳನ್ನು ಪತ್ರಕರ್ತ ಅಲಿಶೇಖ್ ಎಂಬುವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಪುಣೆಯ ಬಿಜೆಪಿ ಕಾರ್ಯಕರ್ತ ಮಯೂರ್ ಮುಂಡೆ ಅವರು ಔಂದ್ ಪ್ರದೇಶದಲ್ಲಿ ಪ್ರಧಾನಿ ಮೋದಿ ದೇವಸ್ಥಾನ ನಿರ್ಮಿಸಿದ್ದಾರೆ. 6 ತಿಂಗಳಲ್ಲಿ 1.5 ಲಕ್ಷ ರೂ. ಹಣ ಖರ್ಚು ಮಾಡಿ ಈ ದೇವಾಲಯ ಕಟ್ಟಿಸಿದ್ದಾರೆ ಎಂದು ಕ್ಯಾಪ್ಶನ್ ಕೂಡ ಬರೆದಿದ್ದಾರೆ.
ಪ್ರಧಾನಿ ಮೋದಿಯವರ ಪುತ್ಥಳಿ ಮತ್ತು ದೇವಸ್ಥಾನ ನಿರ್ಮಿಸಲು ಜೈಪುರದಿಂದ ಕೆಂಪು ಅಮೃತಶಿಲೆಯನ್ನು ತರಿಸಲಾಗಿದೆ. ಅದರ ಭದ್ರತೆಗಾಗಿ ಗಟ್ಟಿಯಾದ ಗಾಜನ್ನು ಅಳವಡಿಸಲಾಗಿದೆ. ಮೋದಿಯವರ ಕುರಿತ ಕವಿತೆಯನ್ನು ಸಹ ದೇಗುಲದಲ್ಲಿ ಪ್ರದರ್ಶಿಸಲಾಗಿದೆ. ಒಟ್ಟು 1.6 ಲಕ್ಷ ರೂ. ಖರ್ಚು ಮಾಡಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.
ಪ್ರಧಾನಿಯಾದ ಬಳಿಕ ಮೋದಿಯವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿರುವುದು, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ದೇವಸ್ಥಾನ ನಿರ್ಮಾಣ ಮತ್ತು ತ್ರಿವಳಿ ತಲಾಕ್ ಅನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ನಿರ್ಮಿಸುತ್ತಿರುವ ವ್ಯಕ್ತಿಗೆ ದೇಗುಲ ಇರಬೇಕೆಂದು ನಾನು ಭಾವಿಸಿದ್ದೆ. ಹೀಗಾಗಿ ನನ್ನ ಸ್ವಂತ ಜಾಗದಲ್ಲಿ ಹಣ ಖರ್ಚು ಮಾಡಿ ದೇವಸ್ಥಾನ ನಿರ್ಮಿಸಲು ನಿರ್ಧರಿಸಿದೆ ಎಂದು ರಿಯಲ್ ಎಸ್ಟೇಟ್ ಏಜೆಂಟ್ ಆಗಿರುವ ಮುಂಡೆ ಹೇಳಿದ್ದಾರೆ.
ಮುಂಡೆಯವರು ಪ್ರಧಾನಿ ಮೋದಿಯವರ ದೇವಾಲಯ ನಿರ್ಮಿಸಿರುವುದಕ್ಕೆ ಪ್ರತಿಪಕ್ಷಗಳ ನಾಯಕರು ಮತಾಂಧತೆ ಎಂದು ಟೀಕಿಸಿದ್ದಾರೆ. ಇದು ಮತಾಂಧತೆಯ ಉತ್ತುಂಗ, ಒಂದೆಡೆ ಬಿಜೆಪಿ ಸರ್ಕಾರ ಮಾಜಿ ಪ್ರಧಾನಿಗಳ ಹೆಸರನ್ನು ಯೋಜನೆಗಳಿಂದ ತೆಗೆದುಹಾಕುತ್ತಿದೆ ಮತ್ತೊಂದೆಡೆ ಅವರ ಕಾರ್ಯಕರ್ತರು ತಮ್ಮ ನಾಯಕರ ದೇವಸ್ಥಾನಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಅನಂತ್ ಗಾಡ್ಗಿಲ್ ಕಿಡಿಕಾರಿದ್ದಾರೆ.