ಮಂಗಳೂರು : ಕೋವಿಡ್ ಸೋಂಕಿಗೊಳಗಾದ ದಂಪತಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ
ಕೋವಿಡ್ ಸೋಂಕಿಗೊಳಗಾದ ದಂಪತಿಗಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಬೈಕಂಪಾಡಿ ಚಿತ್ರಾಪುರದಲ್ಲಿ ನಡೆದಿದೆ.
ಚಿತ್ರಾಪುರ ಬೈಕಂಪಾಡಿ ಅಪಾರ್ಟ್‌ಮೆಂಟ್‌ವೊಂದರ ನಿವಾಸಿಗಳಾದ ಆರ್ಯ ಸುವರ್ಣ(45) ಮತ್ತು ಗುಣ ಸುವರ್ಣ(35) ಆತ್ಮಹತ್ಯೆ ಮಾಡಿಕೊಂಡವರು. ಇವರು ಮೂಲತಃ ಪಡುಬಿದ್ರಿ ನಿವಾಸಿಗಳು.
ಆರ್ಯ ಸುವರ್ಣ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಗುಣ ಆರ್. ಸುವರ್ಣ ಡೆತ್ ನೋಟ್ ಬರೆದಿದ್ದು ಅದರಲ್ಲಿ ತಾವು ಆತ್ಮಹತ್ಯೆ ಮಾಡಲು ಕಾರಣವನ್ನು ಬರೆದಿದ್ದಾರೆ.
‘ನಾನು 14ನೇ ವಯಸ್ಸಿನಿಂದಲೇ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇನೆ. 2000ನೇ ಇಸವಿಯಲ್ಲಿ ನಮ್ಮ ಮದುವೆಯಾಗಿದೆ. 2001ರಲ್ಲಿ ಗರ್ಭಿಣಿಯಾಗಿದ್ದಾಗ ನನಗೆ ಸಕ್ಕರೆ ಕಾಯಿಲೆ ಬಾಧಿಸಿತು. ಸಿಝೇರಿಯನ್ ಮಾಡಿಸಿ ಗಂಡು ಮಗುವಾದರೂ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. 2005ರಲ್ಲಿ ಮತ್ತೆ ಗರ್ಭಿಣಿಯಾಗಿದ್ದೆ. ಆದರೂ ಮಾತ್ರೆಯಿಂದ ವ್ಯತಿರಿಕ್ತ ಪರಿಣಾಮವಾಗುತ್ತಿದ್ದರಂತೆ ಮತ್ತೆ ಸಮಸ್ಯೆ ಎದುರಾಯಿತು. ಯಾವುದೇ ಮಾತ್ರೆ ತೆಗೆದುಕೊಳ್ಳಲು ಆಗುತ್ತಿರಲಿಲ್ಲ. ಅಂದಿನಿಂದ ಪ್ರತಿನಿತ್ಯ ಎರಡು ಇನ್ಸೂಲಿನ್ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಮಧುಮೇಹ (ಷುಗರ್) ಕಂಟ್ರೋಲ್‌ಗೆ ಬರುತ್ತಿಲ್ಲ. ಈ ಕಾರಣದಿಂದ 2020ರ ಬಳಿಕ ಕೋವಿಡ್ ಬಂದ ಬಳಿಕ ನಾವೆಲ್ಲ ತುಂಬಾ ಜಾಗರೂಕತೆ ತೆಗೆದುಕೊಂಡಿದ್ದೆವು. ಆದರೆ ಸುಮಾರು 10ದಿನಗಳಿಂದ ಕೋವಿಡ್ ನನ್ನನ್ನು ಬಾಧಿಸಿದ್ದು, ಅದು ವಿಕೋಪಕ್ಕೆ ಹೋಗಿ ಬ್ಲಾಕ್ ಫಂಗಸ್ ಭಯ ಕಾಡಿದೆ. ಗಂಡನಿಗೂ 3 ದಿನದಿಂದ ಕೋವಿಡ್ ಲಕ್ಷಣಗಳು ಕಂಡು ಬರುತ್ತಿದೆ. ಈ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಬರೆದಿದ್ದಾರೆ.
‘ನನ್ನ ತಂದೆ, ತಾಯಿ ಹಾಗೂ ತಮ್ಮನಿಗೂ ಕೋವಿಡ್ ಸೋಂಕು ತಗುಲಿದ್ದು, ಚೇತರಿಸಿಕೊಂಡಿದ್ದಾರೆ. ಆದ್ದರಿಂದ ಅವರಿಗೆ ನಮ್ಮ ಅಂತ್ಯಕ್ರಿಯೆ ತೊಂದರೆ ತೊಂದರೆಯನ್ನು ಕೊಡಬಾರದು. ನನಗೆ 2 ಬಾರಿ ಸಿಝೇರಿಯನ್ ಆಗಿ ಮಕ್ಕಳ ಸಮಸ್ಯೆಯಾದರೂ ಎಲ್ಲಿ ಹೋದರೂ ಮಕ್ಕಳ ಬಗ್ಗೆಯೇ ಕೇಳುತ್ತಿದ್ದಾರೆ. ಅದಕ್ಕಾಗಿ ನಾನು ಹೆಚ್ಚು ಯಾರ ಜತೆನೂ ಬೆರೆಯುತ್ತಿರಲಿಲ್ಲ. ಹಿಂದೂ ಸಂಘಟನೆಯ ಶರಣ್ ಪಂಪ್‌ವೆಲ್ ಮತ್ತು ಸತ್ಯಜಿತ್ ಸುರತ್ಕಲ್ ಅವರಲ್ಲಿ ವಿನಂತಿ ಮಾಡುವುದೇನೆಂದರೆ ನಮ್ಮನ್ನು ನಮ್ಮ ಹಿಂದೂ ಸಂಪ್ರದಾಯ ಪ್ರಕಾರ ಅಂತ್ಯಸಂಸ್ಕಾರ ನಡೆಸಿ. ಅಂತ್ಯಕ್ರಿಯೆಯ 1ಲಕ್ಷ ರೂ. ಇಟ್ಟಿದ್ದೇವೆ. ನಮ್ಮ ಮನೆಯಲ್ಲಿರುವ ವಸ್ತುಗಳನ್ನು ಬಡವರಿಗೆ ನೀಡಿ. ಈ ಮನೆಯ ಮಾಲೀಕರಲ್ಲೂ ಕ್ಷಮೆ ಕೇಳುತ್ತೇವೆ’ ಎಂದು ಬರೆದಿದ್ದಾರೆ.
ಬೆಂಗಳೂರು: ಪೆಟ್ರೋಲ್ ಬಂಕ್‌ಗೆ ಪರವಾನಗಿ ಕೊಡಿಸುವ ನೆಪದಲ್ಲಿ ಮಹಿಳೆಗೆ ₹55 ಲಕ್ಷ ವಂಚನೆ!
ಕಮಿಷನರ್‌ಗೆ ಕರೆ: ಆತ್ಮಹತ್ಯೆಗೆ ಮುನ್ನ ಆರ್ಯ ಸುವರ್ಣ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್‌ಗೆ ವಾಯ್ಸ್ ಮೆಸೇಜ್ ಕಳಿಸಿದ್ದು, ‘ದಂಪತಿಗಳಾದ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಹೇಳಿದ್ದರು. ಇದಕ್ಕೆ ಕಮಿಷನರ್ ಕೂಡಲೇ ಪ್ರತಿಕ್ರಿಯೆ ನೀಡಿ ‘ಆತ್ಮಹತ್ಯೆಯಂತ ದುಸ್ಸಾಹಸ ಮಾಡಬೇಡಿ. ನಿಮ್ಮ ಏನೇ ಕಷ್ಟವಿದ್ದರೂ ನಾನು ಸ್ಪಂದಿಸುತ್ತೇನೆ. ದಯವಿಟ್ಟು ಆತ್ಮಹತ್ಯೆ ಮಾಡಬೇಡಿ’ ಎಂದು ವಿನಂತಿ ಮಾಡಿದ್ದಾರೆ. ಕೂಡಲೇ ಎಲ್ಲ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿ ದಂಪತಿ ರಕ್ಷಣೆಗೆ ಆಗ್ರಹಿಸಿದ್ದಾರೆ. ದಂಪತಿ ಮಾಹಿತಿ ಪಡೆದ ಸುರತ್ಕಲ್ ಪೊಲೀಸರು ಅಪಾರ್ಟ್‌ಮೆಂಟ್‌ಗೆ ಹೋದಾಗ ದಂಪತಿ ಆತ್ಮಹತ್ಯೆಗೈದಿರುವುದು ಕಂಡು ಬಂದಿದೆ.
ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್, ಸುರತ್ಕಲ್, ಪಣಂಬೂರು ಇನ್‌ಸ್ಪೆಕ್ಟರ್ ಸ್ಥಳಕ್ಕೆ ತೆರಳಿದ್ದಾರೆ.