ಕೋವಿಡ್ ಸೋಂಕಿನಿಂದ ಗುಣಮುಖರಾದವರು ಕ್ಷಯರೋಗ ತಪಾಸಣೆ ಮಾಡಿಕೊಳ್ಳಿ -ಡಾ.ಕೆ.ಸುಧಾಕರ್
ಕೋವಿಡ್ ಸೋಂಕಿನಿಂದ ಗುಣಮುಖರಾದವರು ಸ್ವಯಂ ಪ್ರೇರಿತರಾಗಿ ಕ್ಷಯ ರೋಗ ತಪಾಸಣೆ ಮಾಡಿಕೊಳ್ಳಬೇಕು. ಆರಭದಲ್ಲಿ ಕ್ಷಯ ರೋಗ ಪತ್ತೆಯಾದರೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕು ಗುಣಮುಖರಾದವರಿಗೆ ಕ್ಷಯ ಸೋಂಕು ಕಾಣಿಸಿಕೊಳ್ಳುತ್ತಿದೆ. ಕಪ್ಪು ಶಿಲೀಂದ್ರ ಪತ್ತೆ ಮಾಡುವ ರೀತಿ ಕ್ಷಯ ರೋಗದ ತಪಾಸಣೆ ಮಾಡಲಾಗುವುದು. ಇದೇ ತಿಂಗಳು 16 ರಿಂದ 30 ರ ವರೆಗೆ ಪರೀಕ್ಷೆ ನಡೆಸಲಾಗುತ್ತದೆ ಎಂದರು.
ಕ್ಷಯ ರೋಗವು ಶ್ವಾಸಕೋಶದ ಸಮಸ್ಯೆಯಿಂದ ಬರುತ್ತದೆ. ಕೋವಿಡ್ ಕೂಡ ಶ್ವಾಸಕೋಶದ ಸಮಸ್ಯೆಯಿಂದ ಬರುತ್ತದೆ. ಅದಕ್ಕಾಗಿ ಕ್ಷಯ ವ್ಯಾಪಕವಾಗಿ ಹರಡದಂತೆ ನೋಡಲು ತಪಾಸಣೆ ಮಾಡಲು ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇತರರಿಗೆ ಕ್ಷಯ ರೋಗ ಶೇ 33% ರಷ್ಟು ಹೆಚ್ಚಳವಾಗಿದೆ. ಯಾವ ವೃತ್ತಿಯವರಿಗೆ ಈ ರೋಗ ಬರುತ್ತದೆ ನೋಡಿ ತಪಾಸಣೆ ಮಾಡಲಾಗುತ್ತಿತ್ತು. ಈಗ ಕೊವಿಡ್ ನಿಂದ ಗುಣಮುಖರಾದವರ ತಪಾಸಣೆ ಮಾಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
2017ರಲ್ಲಿ ಕ್ಷಯ ರೋಗ ಸಮೀಕ್ಷೆ ನಡೆಸಲಾಗಿದೆ. 3.9% ರಷ್ಟು ಜನರಿಗೆ ಕ್ಷಯ ರೋಗ ಪತ್ತೆಯಾಗಿದೆ. 2019-20 ರಲ್ಲಿ ಕ್ಷಯ ರೋಗಿಗಳ ಪ್ರಮಾಣ ಕಡಿಮೆಯಾಗಿದೆ. ಆದರೆ, ಪರೀಕ್ಷೆ ಕಡಿಮೆಯಾಗಿದೆ. ಈ ವರ್ಷ 1.25 ಕೋಟಿ ಜನರ ಸಮೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದೆ. ರಾಜ್ಯದಲ್ಲಿ 1716 ಜನರಿಗೆ ಕ್ಷಯ ಪತ್ತೆಯಾಗಿದೆ. ಕೋವಿಡ್ ನಿಂದ ಗುಣಮುಖರಾದವರಲ್ಲಿ 24 ಜನರಿಗೆ ಕ್ಷಯ ರೋಗ ಪತ್ತೆಯಾಗಿದೆ ಎಂದರು.
ADVERTISEMENT
ಕ್ಷಯ ರೋಗ ಮುಂದುವರೆದ ದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದು ಸಾಂಕ್ರಾಮಿಕ ರೋಗವಲ್ಲ. ಆದರೆ, ಕುಟುಂಬದ ಜೊತೆ ಇರುವವರಿಗೆ ಹರಡುತ್ತದೆ. ಎರಡು ವಾರಕ್ಕಿಂತ ಹೆಚ್ಚು ಕೆಮ್ಮುವವರು ಕ್ಷಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ರಾತ್ರಿ ಹೊತ್ತು ಜ್ವರ ಬರುವುದು, ತೂಕ ಕಡಿಮೆಯಾಗುವುದು ಕ್ಷಯ ರೋಗದ ಲಕ್ಷಣ. 2025 ಗೆ ಭಾರತವನ್ನು ಕ್ಷಯ ರೋಗ ಮುಕ್ತ ದೇಶವನ್ನಾಗಿ ಮಾಡಲು ಪ್ರಧಾನಿಗಳು ಗುರಿ ಇಟ್ಟುಕೊಂಡಿದ್ದಾರೆ. 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ದುರಸ್ಥಿಗೆ 150 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ ಎಂದು ಸುಧಾಕರ್ ಹೇಳಿದರು.
ಲಸಿಕೆಗೆ ಕ್ರಮ: ರಾಜ್ಯದಲ್ಲಿ 3.5 ಕೋಟಿ ಜನರಿಗೆ ಲಸಿಕೆ ಹಾಕಿಸಲಾಗಿದೆ. ಡಿಸೆಂಬರ್ ಅಂತ್ಯಕ್ಕೆ ಎಲ್ಲಾ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸಲು ಕ್ರಮ ಕೈ ಗೊಳ್ಳಲಾಗುವುದು. ಈ ವಾರ ಸಿಎಂ ಜೊತೆ ದೆಹಲಿಗೆ ತೆರಳಿ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಇನ್ನಷ್ಟು ಲಸಿಕೆಗೆ ಬೇಡಿಕೆ ಇಡಲಾಗುವುದು. ಖಾಸಗಿ ಆಸ್ಪತ್ರೆಗಳಿಗೆ ಶೇ 25% ರಷ್ಟು ಲಸಿಕೆ ಹಾಕಿಸಲು ಅವಕಾಶ ನೀಡಲಾಗಿದ್ದು, ಉದ್ಯಮಿಗಳು ಐಟಿ ಕಂಪನಿಗಳು ತಮ್ಮ ಸಿಎಸ್ ಆರ್ ನಿಧಿಯಿಂದ ಲಸಿಕೆ ಖರೀದಿಸಿ ಸರ್ಕಾರಕ್ಕೆ ನೀಡುವಂತೆ ಮನವಿ ಮಾಡಲಾಗಿದೆ. ಇದರಿಂದ ಆದಷ್ಟು ವೇಗವಾಗಿ ಲಸಿಕೆ ಹಾಕಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಗಡಿ ಭಾಗದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಮಿತಿ ರಚನೆ ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ರಚನೆ ಮಾಡಲಾಗಿದೆ. ಕೋವಿಡ್ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದೆಂದು ತಜ್ಞರು ನೀಡಿರುವ ಸಲಹೆ ಮೇರೆಗೆ ಮಕ್ಕಳ ರಕ್ಷಣೆಗೆ ಆರೋಗ್ಯ ನಂದನ ಯೋಜನೆ ಜಾರಿಗೆ ತರಲಾಗುವುದು. 1.5 ಕೋಟಿ ಮಕ್ಕಳಿದ್ದು ಎಲ್ಲ ಮಕ್ಕಳ ತಪಾಸಣೆ ನಡೆಸಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ಕೆಲಸ ಮಾಡಲಾಗುವುದು. ಉಳಿದ 21 ತಿಂಗಳಲ್ಲಿ ಆರೋಗ್ಯ ಇಲಾಖೆ ಅಮೂಲಾಗ್ರ ಬದಲಾವಣೆ ಮಾಡಲಾಗುವುದು. ಎರಡು ವರ್ಷದಲ್ಲಿ 4000 ವೈದ್ಯರ ನೇಮಕ ಮಾಡಲಾಗಿದೆ. ಒಂದೆ ಸರ್ಕಾರದಲ್ಲಿ ಇಷ್ಟೊಂದು ನೇಮಕ ಆಗಿರಲಿಲ್ಲ ಎಂದರು.