ದ.ಕ ಜಿಲ್ಲಾಧಿಕಾರಿ ವರ್ಗಾವಣೆಗೆ ತೆರೆಮರೆಯಲ್ಲಿ ನಡೆಯುತ್ತಿದೆ ಹುನ್ನಾರ ?!
ಮಂಗಳೂರು: ರಿಕ್ರಿಯೇಷನ್ ಕ್ಲಬ್, ಸಿಆರ್ಝೆಡ್ ಮರಳು ಮಾಫಿಯಾಕ್ಕೆ ಮಣಿಯದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರನ್ನು ವರ್ಗಾವಣೆ ಮಾಡಲು ಮಾಫಿಯಾಗಳು ತೆರೆಮರೆಯಲ್ಲಿ ಹುನ್ನಾರ ನಡೆಸುತ್ತಿರುವುದು ತಿಳಿದುಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಿಕ್ರಿಯೇಷನ್ ಕ್ಲಬ್ಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಘಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಿಕ್ರಿಯೇಷನ್ ಕ್ಲಬ್ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು.ಇದು ರಿಕ್ರಿಯೇಷನ್ ಕ್ಲಬ್ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೊಂದೆಡೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಆರ್ಝೆಡ್ ಮತ್ತು ನಾನ್ ಸಿಆರ್ಝೆಡ್ ವಲಯದಲ್ಲಿ ಮರಳುಗಾರಿಕೆ ನಿಷೇಧ ಜು.31ಕ್ಕೆ ಕೊನೆಗೊಂಡಿದೆ. ಆಗಸ್ಟ್ ಪ್ರಥಮ ವಾರದಲ್ಲಿ ಮರಳುಗಾರಿಕೆ ಮರು ಆರಂಭವಾಗಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ಮರಳುಗಾರಿಕೆ ಆರಂಭಕ್ಕೆ ಜಿಲ್ಲಾಧಿಕಾರಿಗಳು ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ. ಇದರಿಂದ ಮರಳು ಮಾಫಿಯಾ ಕೂಡ ಜಿಲ್ಲಾಧಿಕಾರಿಗಳ ವರ್ಗಾವಣೆಗೆ ನಾನಾ ರೀತಿಯ ಕಸರತ್ತು ನಡೆಸುತ್ತಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಡಳಿತದ ಕೆಲವೊಂದು ಕಠಿಣ ನಿಯಮಗಳಿಂದ ಕೋವಿಡ್ ಪಾಸಿಟಿವ್ ಪ್ರಕರಣಗಳು ಒಂದು ರೀತಿ ನಿಯಂತ್ರಣದಲ್ಲಿದೆ. ಪ್ರಸ್ತುತ ಕಾಸರಗೋಡು ಜಿಲ್ಲೆಯಲ್ಲಿ ಶೇ.10ರಷ್ಟು ಪಾಸಿಟಿವ್ ಪ್ರಕರಣಗಳಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.3ರ ಆಸುಪಾಸಿನಲ್ಲಿದೆ.
ಇದೀಗ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಲು ಹೊಂಚು ಹಾಕಿ ಕುಳಿತಿರುವುದನ್ನು ನೋಡಿದರೆ ಕೊರೋನಾ ಟೆನ್ಶನ್ಗಿಂತಲೂ ಅಕ್ರಮ ಚಟುವಟಿಕೆಗಳೇ ಮೇಲುಗೈ ಸಾಧಿಸಲು ಹೊರಟಂತಿದೆ. ಈ ಹುನ್ನಾರ ನಡೆಯುವುದೇ? ನಡೆಯಲು ಸರ್ಕಾರ ಬೆಂಬಲ ನೀಡುವುದೇ? ಎಂಬುದನ್ನು ಕಾದುನೋಡಬೇಕಾಗಿದೆ.