75 ನೇ ಸ್ವಾತಂತ್ರ್ಯೋತ್ಸವದ ಅಮೃತ ಘಳಿಗೆಯಲ್ಲಿ, ಕೆಂಪುಕೋಟೆಯಲ್ಲಿ 8 ನೇ ಬಾರಿಗೆ ಮೋದಿ ಭಾಷಣ | ಶತಮಾನೋತ್ಸವದ ಸಂಭ್ರಮಕ್ಕೆ ಯಾವ ದೇಶಕ್ಕೂ ಕಡಿಮೆ ಇಲ್ಲದಂತೆ ಬೆಳೆಯಬೇಕೆಂದು ಕರೆಕೊಟ್ಟ ಮೋದಿ
ನವದೆಹಲಿ: ಭಾರತದ ರಾಷ್ಟ್ರಭಕ್ತಿಗೆ ಇಂದು ಅಮೃತ ಘಳಿಗೆ. ರಾಷ್ಟ್ರಾದ್ಯಂತ ಇಂದು 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದು, ದೇಶವ್ಯಾಪಿ ರಾಷ್ಟ್ರಭಕ್ತಿ ಮೊಳಗುತ್ತಿದೆ. ಕೋವಿಡ್ ಮುನ್ನೆಚ್ಚರಿಕಾ ಕ್ರಮದೊಂದಿಗೆ ದೇಶಾದ್ಯಂತ ಸ್ವಾತಂತ್ರ್ಯ ಸಂಭ್ರಮದ ಸರಳ ಆಚರಣೆ ನಡೆಯುತ್ತಿದ್ದರೂ ದೇಶಾದ್ಯಂತ ಸಂಭ್ರಮಕ್ಕೇನೂ ಮಿತಿ ಇಲ್ಲ.
ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜಧಾನಿ ದೆಹಲಿಯ ಕೆಂಪುಕೋಟೆಯ ಬುರುಜಿನ ಮೇಲೆ ಧ್ವಜಾರೋಹಣ ನೆರವೇರಿಸಿದ ಬಳಿಕ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮುಂದಿನ 25 ವರ್ಷಗಳ ಬಳಿಕ ಸ್ವಾತಂತ್ರ್ಯದ ಶತಮಾನೋತ್ಸವ ಬರಲಿದೆ. ಅಲ್ಲಿಯವರೆಗೆ ಯಾವ ರಾಷ್ಟ್ರಕ್ಕೂ ನಾವು ಕಡಿಮೆ ಇಲ್ಲ ಅನ್ನುವಂತೆ ಬೆಳೆಯಬೇಕು ಎಂದು ಹೇಳಿದರು.
ಭಾರತ ಬಲಿದಾನಗಳಿಂದ ತಯಾರಾದ ದೇಶ. ದೇಶದ ಜನತೆಗೆ 75ನೇ ಸ್ವಾತಂತ್ರ್ಯ ದಿನದ ಶುಭಕೋರುವ ಮೂಲಕ ಮಾತು ಆರಂಭಿಸಿದ ಪ್ರಧಾನಿ ಮೋದಿ, ಮೊದಲು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು. ಗಾಂಧಿ, ಚಂದ್ರಶೇಖರ್ ಅಜಾದ್, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ದೇಶದ ಪ್ರಥಮ ಗೃಹ ಸಚಿವ ವಲ್ಲಬ್‌ಭಾಯಿ ಪಟೇಲ್ ಅವರನ್ನು ಸ್ಮರಿಸಿದರು. ಸ್ವಾತಂತ್ರ್ಯಕ್ಕಾಗಿ ಹಲವರು ಹೋರಾಡಿದ್ದಾರೆ, ಅವರೆಲ್ಲರಿಗೂ ನನ್ನ ನಮನಗಳು ಎಂದು ಹೇಳಿದರು.
ಮಹಾಮಾರಿ ಕೊರೋನಾ ಸಂಕಷ್ಟದ ಸಮಯದಲ್ಲಿ, ನಮ್ಮ ವೈದ್ಯರು, ದಾದಿಯರು, ಪ್ಯಾರಾಮೆಡಿಕಲ್ ಸಿಬ್ಬಂದಿ, ನೈರ್ಮಲ್ಯ ಕೆಲಸಗಾರರು, ವಿಜ್ಞಾನಿಗಳು ಮತ್ತು ಕೋಟ್ಯಂತರ ನಾಗರಿಕರು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ಇತರರ ಸೇವೆಗಾಗಿ ಈ ಪ್ರತಿ ಕ್ಷಣವನ್ನೂ ಮೀಸಲಿಟ್ಟವರು ನಮ್ಮ ಮೆಚ್ಚುಗೆಗೆ ಅರ್ಹರು ಎನ್ನುವ ಮೂಲಕ ಕೊರೋನಾ ವಾರಿಯರ್ಸ್‌ಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದರು.
ಜಪಾನ್‌ನ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಹೆಮ್ಮೆ ತಂದ ಕ್ರೀಡಾಪಟುಗಳು ಇಂದು ನಮ್ಮ ನಡುವೆ ಇದ್ದಾರೆ. ಅವರ ಸಾಧನೆಯನ್ನು ಶ್ಲಾಘಿಸುವಂತೆ ನಾನು ರಾಷ್ಟ್ರವನ್ನು ಒತ್ತಾಯಿಸುತ್ತೇನೆ. ಅವರು ನಮ್ಮ ಹೃದಯವನ್ನು ಗೆಲ್ಲುವುದಲ್ಲದೆ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡಿದ್ದಾರೆ ಎನ್ನುವ ಮೂಲದ ಚಪ್ಪಾಳೆ ತಟ್ಟಿ ಕ್ರೀಡಾಪಟುಗಳನ್ನು ಪ್ರಧಾನಿ ಮೋದಿ ಪ್ರೋತ್ಸಾಹಿಸಿದರು.
ಇದೇ ವೇಳೆ ದೇಶದ ವಿಭಜನೆಯನ್ನು ನೆನೆದ ಪ್ರಧಾನಿ ಮೋದಿ ವಿಭಜನೆ ಸಮಯದಲ್ಲಿ ಭಾರತದ ಜನರು ಅನುಭವಿಸಿದ ನೋವು ಮತ್ತು ಸಂಕಷ್ಟಗಳನ್ನು ಸ್ಮರಿಸಲು ನಾವು ಆಗಸ್ಟ್ 14 ಅನ್ನು ವಿಭಜನೆಯ ಭಯಾನಕತೆಯ ಸ್ಮರಣೆಯ ದಿನವನ್ನಾಗಿ ಆಚರಿಸಲು ನಾವು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಪ್ರಧಾನಿ ಹೇಳಿದರು.
ಭಾರತೀಯರು ಕೋವಿಡ್ ವಿರುದ್ಧ ಯುದ್ಧದಲ್ಲಿ ಬಹಳ ತಾಳ್ಮೆಯಿಂದ ಹೋರಾಡಿದ್ದಾರೆ. ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ನಾವು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದರೂ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಅಸಾಧಾರಣ ವೇಗದಲ್ಲಿ ನಾವು ಕೆಲಸ ಮಾಡಿದ್ದೇವೆ. ನಮ್ಮ ಕೈಗಾರಿಕೋದ್ಯಮಿಗಳು ಮತ್ತು ವಿಜ್ಞಾನಿಗಳ ಶಕ್ತಿಯ ಪರಿಣಾಮದಿಂದ ಇದು ಸಾಧ್ಯವಾಗಿದೆ. ಇಂದು ಭಾರತವು ಲಸಿಕೆಗಳಿಗಾಗಿ ಬೇರೆ ಯಾವುದೇ ರಾಷ್ಟ್ರವನ್ನು ಅವಲಂಬಿಸುವ ಅಗತ್ಯವಿಲ್ಲ. ಭಾರತದಲ್ಲಿ ಅತಿದೊಡ್ಡ ಕೊರೋನಾ ಲಸಿಕೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು. ಇದುವರೆಗೆ 54 ಕೋಟಿಗೂ ಹೆಚ್ಚು ಜನರು ಲಸಿಕೆ ಪಡೆದಿದ್ದಾರೆ ಎಂದ ಪ್ರಧಾನಿ ಮೋದಿ ತಿಳಿಸಿದರು.
ಭಾರತವು ಹೊಸ ಸಂಕಲ್ಪದೊಂದಿಗೆ ಸಾಗುವ ಸಮಯ
ಬಂದಿದೆ. ಹೊಸ ಸಂಕಲ್ಪದೊಂದಿಗೆ ಹೊಸ ಭಾರತ ಆರಂಭವಾಗಬೇಕಿದೆ. ಮುಂದಿನ 25 ವರ್ಷಗಳಲ್ಲಿ ಭಾರತ ಸ್ವಾತಂತ್ರ್ಯ ಶತಮಾನೋತ್ಸವ ಆಚರಿಸಲಾಗುತ್ತದೆ. ಅಲ್ಲಿಯವರೆಗೂ ನಮ್ಮ ಗುರಿ ಭಾರತದ ನಿರ್ಮಾಣ ಆಗಿರಬೇಕು. ಯಾವ ರಾಷ್ಟ್ರಕ್ಕೂ ನಾವು ಕಡಿಮೆ ಇಲ್ಲ ಅನ್ನುವಂತೆ ಬೆಳೆಯಬೇಕು. ನಮ್ಮ ಎಲ್ಲಾ ಗುರಿಗಳ ಸಾಧನೆಗೆ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್’ ಬಹಳ ಮುಖ್ಯವಾಗಿದೆ ಎಂದು ಪ್ರಧಾನಿ ಮೋದಿ ದೇಶದ ಅಭಿವೃದ್ಧಿ ಕಲ್ಪನೆಯನ್ನು ತೆರೆದಿಟ್ಟರು.
ಕಳೆದ 7 ವರ್ಷಗಳಲ್ಲಿ ಆರಂಭವಾದ ಅನೇಕ ಯೋಜನೆಗಳ ಪ್ರಯೋಜನಗಳು ಕೋಟ್ಯಂತರ ಬಡವರ ಮನೆಬಾಗಿಲನ್ನು ತಲುಪಿವೆ. ಉಜ್ವಲದಿಂದ ಆಯುಷ್ಮಾನ್ ಭಾರತ್‌ವರೆಗೆ ರಾಷ್ಟ್ರದ ಬಡವರಿಗೆ ಯೋಜನೆಗಳ ಸಾಮರ್ಥ್ಯದ ಬಗ್ಗೆ ತಿಳಿದಿದೆ. ಇಂದು, ಸರ್ಕಾರದ ಯೋಜನೆಗಳು ವೇಗವನ್ನು ಪಡೆದುಕೊಂಡಿವೆ ಮತ್ತು ಅವುಗಳ ಗುರಿಗಳನ್ನು ಶೀಘ್ರವಾಗಿ ತಲುಪುತ್ತಿವೆ. 21ನೇ ಶತಮಾನದಲ್ಲಿ ಭಾರತದ ಸಾಮರ್ಥ್ಯಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಯೋಜನೆಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದು ಅತ್ಯಗತ್ಯ. ಇದಕ್ಕಾಗಿ, ನಾವು ಹಿಂದುಳಿದಿರುವ ವಿಭಾಗ, ಹಿಂದುಳಿದಿರುವ ಪ್ರದೇಶವನ್ನು ಕೈ ಹಿಡಿಯಬೇಕು ಎಂದರು.
ಜನೌಷಧಿ ಯೋಜನೆಯಡಿ ಬಡವರು ಮತ್ತು ನಿರ್ಗತಿಕರಿಗೆ ಕೈಗೆಟುಕುವ ದರದಲ್ಲಿ ಔಷಧಗಳು ಸಿಗುತ್ತಿವೆ. ಇಲ್ಲಿಯವರೆಗೆ 75 ಸಾವಿರಕ್ಕೂ ಕ್ಕೂ ಹೆಚ್ಚು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಈಗ ನಾವು ಆಧುನಿಕ ಪ್ರಯೋಗಾಲಯಗಳು ಮತ್ತು ಬ್ಲಾಕ್ ಮಟ್ಟದಲ್ಲಿ ಉತ್ತಮ ಆಸ್ಪತ್ರೆಗಳನ್ನು ನಿರ್ಮಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಇಂದು ನಮ್ಮ ಹಳ್ಳಿಗಳು ವೇಗವಾಗಿ ಬದಲಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ, ರಸ್ತೆ ಮತ್ತು ವಿದ್ಯುತ್‌ನಂತಹ ಸೌಲಭ್ಯಗಳು ಹಳ್ಳಿಗಳನ್ನು ತಲುಪಿವೆ. ಇಂದು, ಆಪ್ಟಿಕಲ್ ಫೈಬರ್ ನೆಟ್ವರ್ಕ್ ಹಳ್ಳಿಗಳಿಗೆ ಡೇಟಾ ಶಕ್ತಿಯನ್ನು ಒದಗಿಸುತ್ತಿದ್ದು, ಇಂಟರ್ನೆಟ್ ಅಲ್ಲಿಗೆ ತಲುಪುತ್ತಿದೆ. ಹಳ್ಳಿಗಳಲ್ಲೂ ಡಿಜಿಟಲ್ ಉದ್ಯಮಿಗಳು ತಯಾರಾಗುತ್ತಿದ್ದಾರೆ ಎಂದು ಹೇಳಿದರು.
ಮುಂಬರುವ ವರ್ಷಗಳಲ್ಲಿ ನಾವು ದೇಶದ ಸಣ್ಣ ರೈತರ ಸಾಮೂಹಿಕ ಶಕ್ತಿಯನ್ನು ಹೆಚ್ಚಿಸಬೇಕು. ನಾವು ಅವರಿಗೆ ಹೊಸ ಸೌಲಭ್ಯಗಳನ್ನು ನೀಡಬೇಕು. ಅವರು ದೇಶದ ಹೆಮ್ಮೆಯಾಗಬೇಕು. ಮುಂದಿನ ತಲೆಮಾರಿನ ಮೂಲಸೌಕರ್ಯ, ವಿಶ್ವ ದರ್ಜೆಯ ತಯಾರಿಕೆ, ಹೊಸತ ಮತ್ತು ಹೊಸ ಯುಗದ ತಂತ್ರಜ್ಞಾನಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡಬೇಕು. ನಮ್ಮ ಮಂತ್ರವೆಂದರೆ ‘ಛೋಟಾ ಕಿಸಾನ್ ಬಾನೆ ದೇಶ್ ಕಿ ಶಾನ್’. ಇದು ನಮ್ಮ ಕನಸು. ಮುಂಬರುವ ವರ್ಷಗಳಲ್ಲಿ, ನಾವು ದೇಶದ ಸಣ್ಣ ರೈತರ ಸಾಮೂಹಿಕ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಬೇಕು, ನಾವು ಅವರಿಗೆ ಹೊಸ ಸೌಲಭ್ಯಗಳನ್ನು ಒದಗಿಸಬೇಕು. ‘ಕಿಸಾನ್ ರೈಲು’ ಇಂದು ದೇಶದ 70 ಕ್ಕೂ ಹೆಚ್ಚು ರೈಲು ಮಾರ್ಗಗಳಲ್ಲಿ ಚಲಿಸುತ್ತದೆ ಎಂದರು.
ಮುಂದಿನ ದಿನಗಳಲ್ಲಿ, ನಾವು ಪ್ರಧಾನಿ ಗತಿ ಶಕ್ತಿ ಯೋಜನೆಯನ್ನು ಪ್ರಾರಂಭಿಸುತ್ತೇವೆ. 100 ಲಕ್ಷ ಕೋಟಿ ರೂ. ರಾಷ್ಟ್ರೀಯ ಮೂಲಸೌಕರ್ಯ ಮಾಸ್ಟರ್ ಪ್ಲಾನ್ ಇದು. ಸಮಗ್ರ ಮೂಲಸೌಕರ್ಯಕ್ಕೆ ಅಡಿಪಾಯವನ್ನು ನೀಡುತ್ತದೆ ಮತ್ತು ನಮ್ಮ ಆರ್ಥಿಕತೆಗೆ ಸಮಗ್ರ ಮಾರ್ಗವನ್ನು ನೀಡುತ್ತದೆ. ದೊಡ್ಡ ಬದಲಾವಣೆಗಳನ್ನು, ದೊಡ್ಡ ಸುಧಾರಣೆಗಳನ್ನು ತರಲು ರಾಜಕೀಯ ಇಚ್ಛಾಶಕ್ತಿ ಅಗತ್ಯವಿದೆ. ಇಂದು, ಭಾರತದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಲ್ಲ ಎಂಬುದನ್ನು ಜಗತ್ತು ನೋಡಬಹುದು. ಸುಧಾರಣೆಗಳನ ತರಲು ಉತ್ತಮ ಮತ್ತು ಚುರುಕಾದ ಆಡಳಿತದ ಅಗತ್ಯ ಭಾರತವು ಆಡಳಿತದ ಹೊಸ ಅಧ್ಯಾಯವನ್ನು ಹೇಗೆ f ಬರೆಯುತ್ತಿದೆ ಎಂಬುದಕ್ಕೆ ಜಗತ್ತು ಸಾಕ್ಷಿಯಾಗಿದೆ ಎಂದು ಫೇಸ್ಟುತ್ ತಿಳಿಸಿದರು.
ಅಭಿವೃದ್ಧಿಯು ಅಂತರ್ಗತವಾಗಿರಬೇಕು. ಈಶಾನ್ಯ ಪ್ರದೇಶದ ಹಿಮಾಲಯ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್ ಕರಾವಳಿ ಪ್ರದೇಶ ಮತ್ತು ಬುಡಕಟ್ಟು ಪ್ರದೇಶಗಳು ಭವಿಷ್ಯದಲ್ಲಿ ಭಾರತದ ಅಭಿವೃದ್ಧಿಗೆ ಅಡಿಪಾಯವನ್ನು ಮಾಡುತ್ತವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಡಿಲಿಮಿಟೇಶನ್ ಕಮಿಷನ್ ಅನ್ನು ರಚಿಸಲಾಗಿದೆ ಮತ್ತು ಭವಿಷ್ಯದಲ್ಲಿ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿಸಿದರು.