ವಾಹನ ಸ್ಕ್ರ್ಯಾಪೇಜ್ ನೀತಿಯನ್ನು ಬಿಡುಗಡೆ ಮಾಡಿದ ಪ್ರಧಾನಿ ಮೋದಿ | ಈ ನೀತಿಯಿಂದ ದೇಶಾದ್ಯಂತ ಗುಜರಿ ಸೇರಲಿವೆ ಸುಮಾರು 2 ಕೋಟಿ ವಾಹನಗಳು !
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ದೇಶದಲ್ಲಿ ನೂತನ ವಾಹನ ಸ್ಕ್ರ್ಯಾಪೇಜ್ ನೀತಿಯನ್ನು ಪ್ರಾರಂಭಿಸಿದ್ದಾರೆ. ಮೋದಿ ಅವರು ಗುಜರಾತ್ ನಲ್ಲಿ ನಡೆದ ಹೂಡಿಕೆದಾರರ ಶೃಂಗಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ನೀತಿಯನ್ನು ಬಿಡುಗಡೆಗೊಳಿಸಿದ್ದಾರೆ.
ಈ ವಾಹನ ಸ್ಕ್ರ್ಯಾಪೇಜ್ ನೀತಿಯನ್ನು 2021ರ ತಮ್ಮ ಬಜೆಟ್ ಭಾಷಣದ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತುತಪಡಿಸಿದ್ದರು.
ವಾಹನ ಸ್ಕ್ರ್ಯಾಪೇಜ್ ನೀತಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಯಾವುದೇ ದೇಶದ ಆರ್ಥಿಕತೆಯಲ್ಲಿ ಚಲನಶೀಲತೆ ದೊಡ್ಡ ಪಾತ್ರವನ್ನು ವಹಿಸುತ್ತದೆ. ಅಂತೆಯೇ, ಹೊಸ ಸ್ಕ್ರ್ಯಾಪೆಜ್ ಪಾಲಸಿ ಆರ್ಥಿಕತೆಯಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. Re-use, Recycle ಹಾಗೂ Recovery ಈ ನೀತಿಯ ಪ್ರಮುಖ ಉದ್ದೇಶ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಹಾಗೆಯೇ, ಈ ನೀತಿಯು ದೇಶದಲ್ಲಿ 10,000 ಕೋಟಿ ರೂಪಾಯಿಗಳ ಹೂಡಿಕೆಯನ್ನು ಆಕರ್ಷಿಸಲಿದೆ ಹಾಗೂ ಹೆದ್ದಾರಿ ನಿರ್ಮಾಣದಲ್ಲಿ ಭಾರತ ತ್ಯಾಜ್ಯ ಉತ್ಪನ್ನವನ್ನು ಬಳಸುತ್ತಿದೆ ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ.
ಬಜೆಟ್ ಮಂಡನೆಯ ಬಳಿಕ ಈ ನೀತಿಯ ಕುರಿತು ಲೋಕಸಭೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದ ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿ, ಹೊಸ ಸ್ಕ್ರ್ಯಾಪ್ಪೇಜ್ ನೀತಿ ಸ್ವಯಂಪ್ರೇರಿತವಾಗಿದೆ ಎಂದಿದ್ದಾರೆ. ಇದರರ್ಥ ನಿಮ್ಮ ಕಾರ್ ಪಾಲಿಸಿಯ ಅಡಿಯಲ್ಲಿ ನೀವು ಅದನ್ನು ಸ್ಕ್ರ್ಯಾಪ್ಗೆ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ನೀವೇ ನಿರ್ಧರಿಸಬೇಕು. ಈ ನೀತಿಯ ಪ್ರಕಾರ, ವಾಹನಗಳ ಫಿಟ್ನೆಸ್ ಪರೀಕ್ಷೆಯನ್ನು ನಿಗದಿತ ಸಮಯದಲ್ಲಿ ಕಡ್ಡಾಯಗೊಳಿಸಲಾಗಿದೆ.
ಈ ನೀತಿಯನ್ನು ಪ್ರಚಲಿತಗೊಳಿಸಲು ಸರ್ಕಾರ ಇದರ ಅಡಿ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಉದಾಹರಣೆಗೆ ಹಳೆ ಕಾರನ್ನು ಸ್ಕ್ರ್ಯಾಪ್ ಗೆ ನೀಡುವ ಮಾಲೀಕರಿಗೆ ಒಂದು ಸರ್ಟಿಫಿಕೇಟ್ ನೀಡಲಾಗುತ್ತದೆ. ಹೊಸ ಕಾರು ಖರೀದಿಯ ವೇಳೆ ಅವರು ಈ ಸರ್ಟಿಫಿಕೇಟ್ ಅನ್ನು ತೋರಿಸುವ ಮೂಲಕ ನೋಂದಣಿ ಶುಲ್ಕದಿಂದ ಮುಕ್ತಿ ಪಡೆಯಬಹುದಾಗಿದೆ.
ಈ ಹೊಸ ನೀತಿಯ ಅಡಿಯಲ್ಲಿ ದೇಶಾದ್ಯಂತ ಸುಮಾರು ಎರಡು ಕೋಟಿಗೂ ಅಧಿಕ ವಾಹನಗಳು ಗುಜರಿ ಸೇರಲಿವೆ. ಹಳೆಯ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲು ಸ್ವಯಂ ಪ್ರೇರಿತ ಸ್ಕ್ರ್ಯಾಪೇಜ್ ನೀತಿಯನ್ನು ಕಡ್ಡಾಯ ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರವು, ಹಸಿರು ತೆರಿಗೆ ಸೇರಿದಂತೆ ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ಪ್ರತ್ಯೇಕವಾಗಿ ಜಾರಿಗೆ ತರುತ್ತಿರುವುದು ಮಾಲಿನ್ಯ ನಿಯಂತ್ರಣಕ್ಕೆ ಪರಿಣಾಮಕಾರಿಯಾದ ಅಸ್ತ್ರವಾಗಲಿದೆ.
ಮಾಹಿತಿಯ ಪ್ರಕಾರ ದೇಶಾದ್ಯಂತ 2.15 ಕೋಟಿ ಹಳೆಯ ವಾಹನಗಳಿದ್ದು, ಇದರಲ್ಲಿ ಅರ್ಧದಷ್ಟು ವಾಹನಗಳು ಕರ್ನಾಟಕ ಮತ್ತು ದೆಹಲಿಯಲ್ಲಿ ಓಡಾಡುತ್ತಿವೆ. ಹಳೆಯ ವಾಹನಗಳ ಸಂಗ್ರಹ ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದರೆ ದೆಹಲಿ ಎರಡನೇ ಸ್ಥಾನ ಮತ್ತು ಉತ್ತರ ಪ್ರದೇಶ ಮೂರನೇ ಸ್ಥಾನದಲ್ಲಿದೆ.