ದ.ಕ.ಜಿಲ್ಲೆಯ ಪುತ್ತೂರು ಹೊರತು ಪಡಿಸಿ 6 ತಾಲೂಕು ಕೇಂದ್ರಗಳಿಗೆ ಪಶುವೈದ್ಯ ಆಡಳಿತಾಧಿಕಾರಿಗಳೇ ಇಲ್ಲ !!
ಸುಧಾರಿತ ಪಶುಸಂಗೋಪನಾ ಚಟುವಟಿಕೆ ಮೂಲಕ ಗ್ರಾಮೀಣ ಭಾಗದ ಜನರ ಆರ್ಥಿಕ ಬೆಳವಣಿಗೆಯಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಮುಖ್ಯ ಪಾತ್ರವಹಿಸುತ್ತದೆ. ಹೀಗಿರುವಾಗ ದ.ಕ ಜಿಲ್ಲೆಯ 6 ತಾಲೂಕು ಪಶುವೈದ್ಯಕೀಯ ಕೇಂದ್ರಗಳಲ್ಲಿ ಮುಖ್ಯ ಆಡಳಿತಾಧಿಕಾರಿಗಳ ನೇಮಕವಾಗದೆ ಕಾರ್ಯಚಟುವಟಿಕೆಗಳಲ್ಲಿ ಹಿಂದುಳಿದಿರುವುದು ತಿಳಿದುಬಂದಿದೆ.
ಕೊರೊನಾ ಕಾಲದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಈ ಪಶುಸಂಗೋಪನಾ ಕ್ಷೇತ್ರದ ಮೊರೆ ಹೋಗಿದ್ದಾರೆ. ಆದರೆ ಈ ಸರ್ಕಾರಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಅಗತ್ಯವಿರುವ ಮಾನವ ಸಂಪನ್ಮೂಲವೇ ಇಲಾಖೆಯಲ್ಲಿಲ್ಲ ಎನ್ನುವುದು ವಿಪರ್ಯಾಸವೇ ಸರಿ!
ಹೀಗಿರುವಾಗ ಯೋಜನೆಯು ಫಲಾನುಭವಿಗಳನ್ನು ಪರಿಣಾಮಕಾರಿ ರೀತಿಯಲ್ಲಿ ತಲುಪುವುದಾದರೂ ಹೇಗೆ? ವೈದ್ಯರು, ಇತರ ಸಿಬ್ಬಂದಿ ಹೆಚ್ಚು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಲು ಅವಕಾಶ ದೊರೆಯುವುದು ಹೇಗೆ? ಹಾಗಾಗಿ ಇಲಾಖೆಯಲ್ಲಿ ಅಧಿಕ ಪ್ರಮಾಣದ ಸಿಬ್ಬಂದಿ ಕೊರತೆ ಇರುವ ದಕ್ಷಿಣ ಕನ್ನಡದಲ್ಲಿ ಈ ಎಲ್ಲಾ ಸಮಸ್ಯೆಗಳು ತಲೆದೂರಿದೆ.
ಇಲಾಖೆಯಲ್ಲಿ ಶೇ.73 ಹುದ್ದೆಗಳು ಖಾಲಿ ಇದ್ದು, ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಸರಾಸರಿ ಶೇ.50ಕ್ಕಿಂತ ಅಧಿಕ ಹುದ್ದೆಗಳು ಖಾಲಿ ಬಿದ್ದಿವೆ. ಆದರೆ ದಕ ಜಿಲ್ಲೆಯಲ್ಲಿ ಮಂಜೂರಾದ 449 ಹುದ್ದೆಗಳ ಪೈಕಿ ಭರ್ತಿಯಾಗಿರುವುದು 105 ಮಾತ್ರ. ಉಡುಪಿಯಲ್ಲಿ 357 ಹುದ್ದೆಗಳಲ್ಲಿ 267 ಭರ್ತಿಯಾಗಿವೆ. ದಕ್ಷಿಣ ಕನ್ನಡಕ್ಕೆ ಹೋಲಿಸಿದರೆ ಉಡುಪಿಯ ಪರಿಸ್ಥಿತಿ ಪರವಾಗಿಲ್ಲ.
ದ.ಕ.ಜಿಲ್ಲೆಯ ಏಳು ತಾಲೂಕು ಕೇಂದ್ರಗಳಲ್ಲಿ ಪುತ್ತೂರು ಹೊರತುಪಡಿಸಿ ಉಳಿದ ಕೇಂದ್ರಗಳಲ್ಲಿ ಮುಖ್ಯ ಆಡಳಿತಾಧಿಕಾರಿ ಹುದ್ದೆ ಖಾಲಿ ಇವೆ. ಹತ್ತಿರದ ಆಸ್ಪತ್ರೆಗಳ ವೈದ್ಯರೇ ಇಲ್ಲಿನ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಚಿಕಿತ್ಸೆಯಲ್ಲಿ ಪ್ರಧಾನ ಪಾತ್ರವಹಿಸುವ ಪಶು ವೈದ್ಯಕೀಯ ಸಹಾಯಕ ಹುದ್ದೆಗಳು ಖಾಲಿ ಇದ್ದು, ಕೆಲವೆಡೆ ವೈದ್ಯರು ಕ್ಷೇತ್ರ ಭೇಟಿ ಸಂದರ್ಭ ಆಸ್ಪತ್ರೆಗೆ ಬಾಗಿಲು ಹಾಕಿ ಹೋಗುವ ಪರಿಸ್ಥಿತಿಯೂ ನಿರ್ಮಾಣಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2,50,500 ದನ, 1832 ಎಮ್ಮೆ, 32,200 ಆಡುಗಳನ್ನು ಸಾಕಲಾಗುತ್ತಿದೆ. ಕೋಳಿ, ಹಂದಿ ಸಹಿತ ಇತರ ಸಾಕುಪ್ರಾಣಿ, ಪಕ್ಷಿಗಳ ಅಂಕಿ ಅಂಶ ಪ್ರತ್ಯೇಕ ಇದೆ. ಉಡುಪಿಯಲ್ಲಿ ದನ, ಎಮ್ಮೆ ಸಹಿತ ಎಲ್ಲ ಜಾನುವಾರು ಒಟ್ಟು 3,82,351, ನಾಯಿ 1,18,618, ಕೋಳಿ 12,64,030 ಇದೆ. ಹೀಗಿರುವಾಗ ಈ ಕ್ಷೇತ್ರದ ಬೆಳವಣಿಗೆಗೆ ಇನ್ನಷ್ಟು ಪ್ರೋತ್ಸಾಹ ಖಂಡಿತವಾಗಿಯೂ ಬೇಕಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಸ್ಪತ್ರೆ ಕಟ್ಟಡ ಸಹಿತ ಮೂಲಸೌಕರ್ಯದ ಯಾವುದೇ ಕೊರತೆ ಇಲ್ಲ. ಜಾನುವಾರುಗಳಿಗೆ ಲಸಿಕೆ, ಔಷಧಗಳು, ಕೃತಕ ಗರ್ಭಧಾರಣೆ ವ್ಯವಸ್ಥೆ ಕೂಡ ಇದೆ.
ಬಹುತೇಕ ಎಲ್ಲ ವೈದ್ಯಾಧಿಕಾರಿಗಳು ಎರಡು ಮೂರು ಆಸ್ಪತ್ರೆಗಳ ಜವಾಬ್ದಾರಿ ಹೊಂದಿದ್ದಾರೆ. ರೈತರ ಅಗತ್ಯಗಳಿಗೆ ಸಕಾಲದಲ್ಲಿ ಸ್ಪಂದಿಸಲು ಸಿಬ್ಬಂದಿ ಕಷ್ಟಪಡುತ್ತಿದ್ದಾರೆ. ಜನರು ಆಸ್ಪತ್ರೆ ಕಡೆ ಬಂದಾಗ ಒಂದೆರಡು ದಿನ ವೈದ್ಯರು ಸಿಗದಿದದ್ದರೂ, ‘ಯಾವಾಗ ನೋಡಿದರೂ ಆಸ್ಪತ್ರೆಯಲ್ಲಿ ವೈದ್ಯರು ಇರುವುದಿಲ್ಲ’ ಎನ್ನುವ ಆರೋಪ ಹೊರಿಸಲಾಗುತ್ತದೆ.
ಇಲಾಖೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಇರುವುದರಿಂದ ಉಂಟಾಗಿರುವ ಸಮಸ್ಯೆ ಬಗ್ಗೆ ಕಳೆದ ಬಾರಿಯ ದ.ಕ.ಜಿ ಪಂ ಸಭೆಯಲ್ಲೂ ಚರ್ಚೆಯಾಗಿತ್ತು.
ಯಾವುದೇ ಮೂಲ ಸೌಕರ್ಯದ ಕೊರತೆ ಇಲ್ಲದ ದ.ಕ ಜಿಲ್ಲೆಯ ಈ 6 ತಾಲೂಕು ಕೇಂದ್ರಗಳಿಗೆ ಆದಷ್ಟು ಬೇಗ ಆಡಳಿತಾಧಿಕಾರಿಗಳ ನೇಮಕವಾಗಬೇಕು. ಹಾಗಿದ್ದಲ್ಲಿ ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ರೀತಿಯಲ್ಲಿ ಉಪಯೋಗವಾಗಲಿದೆ.