ಯುವತಿ ಟೈಟ್ ಆದ ಡ್ರೆಸ್ ಹಾಕಿದ್ದಕ್ಕೆ ಗುಂಡು ಹೊಡೆದು ಕೊಂದ ಜಿಹಾದಿಗಳು
ಯುವತಿ ಬಿಗಿಯಾದ ಬಟ್ಟೆಯನ್ನು ಧರಿಸಿದ್ದಾಳೆ ಎಂಬ ಕಾರಣಕ್ಕೆ ಆಕೆಯನ್ನು ಹತ್ಯೆ ಮಾಡಿದ ಘಟನೆ ಅಫ್ಘಾನಿಸ್ತಾನದ ಉತ್ತರ ಪ್ರಾಂತ್ಯ ಬಲ್ಕನ್ನಲ್ಲಿ ನಡೆದಿದೆ.
ನಜಾನಿನ್ (21) ಮೃತ ಯುವತಿ ಎಂದು ಗುರುತಿಸಲಾಗಿದೆ. ಸಮರ್ ಕ್ವಾಂಡ್ ಎಂಬ ಹಳ್ಳಿಯಲ್ಲಿ ಯುವತಿಯನ್ನು ಕೊಲೆ ಮಾಡಲಾಗಿದ್ದು, ಈ ಹಳ್ಳಿ ಸಂಪೂರ್ಣವಾಗಿ ತಾಲಿಬಾನ್ ಹೋರಾಟಗಾರರ ನಿಯಂತ್ರಣದಲ್ಲಿದೆ ಎನ್ನಲಾಗಿದೆ.
ನಜಾನಿನ್ ಮಸೀದಿಗೆ ತೆರಳಲು ವಾಹನಕ್ಕೆ ಕಾಯುತ್ತಿರುವಾಗ ಈ ದಾಳಿ ನಡೆದಿದೆ. ಬಿಗಿಯಾಗಿ ಉಡುಪು ಧರಿಸಿದ್ದಳು ಮತ್ತು ಆಕೆಯೊಂದಿಗೆ ಪುರುಷರು ಯಾರೂ ಇರಲಿಲ್ಲ ಎಂಬ ಕಾರಣಕ್ಕೆ ಕೊಲ್ಲಲಾಗಿದೆ ಎಂದು ವರದಿಯಾಗಿದೆ. ಆದರೆ ಆಕೆಯ ಮೇಲೆ ದಾಳಿಯಾಗುವಾಗ ಅವಳು ಮುಖ ಹಾಗೂ ಮೈಮೇಲೆ ಬುರ್ಖಾವನ್ನು ಹೊದ್ದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಳ್ಳಿ ತಾಲಿಬಾನ್ ಹೋರಾಟಗಾರರ ನಿಯಂತ್ರಣದಲ್ಲಿದ್ದರೂ, ಆಕೆಯನ್ನು ಹತ್ಯೆ ಮಾಡಿದ್ದು ತಾವಲ್ಲ ಎಂದು ತಾಲಿಬಾನ್ ಉಗ್ರರು ಹೇಳಿಕೊಂಡಿದ್ದಾರೆ.
ಅಫ್ಘಾನಿಸ್ತಾನದ ಸರ್ಕಾರಕ್ಕೆ ಬೆಂಬಲ ಸೂಚಿಸುವ ಎಲ್ಲ ಗಣ್ಯವ್ಯಕ್ತಿಗಳನ್ನು ಉಗ್ರರು ಹತ್ಯೆ ಮಾಡುತ್ತಿದ್ದಾರೆ. ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ಹೆಚ್ಚೆಚ್ಚು ಪ್ರದೇಶಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ.