ನರಹರಿ ಪರ್ವತ ಮತ್ತು ಶ್ರೀ ಕಾರಿಂಜೇಶ್ವರ ಕ್ಷೇತ್ರದಲ್ಲಿ ಆಟಿ ಅಮಾವಾಸ್ಯೆ ನಿಮಿತ್ತ ಪ್ರತಿವರ್ಷ ಆಚರಿಸುವ ತೀರ್ಥಸ್ನಾನಕ್ಕೆ ಈ ಬಾರಿಯೂ ಅವಕಾಶವಿಲ್ಲ
ಕೊರೋನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ನರಹರಿ ಪರ್ವತ ಕ್ಷೇತ್ರ ಹಾಗೂ ಶ್ರೀ ಕಾರಿಂಜೇಶ್ವರ ಕ್ಷೇತ್ರದಲ್ಲಿ ಆಗಸ್ಟ್ 8 ರಂದು ಆಟಿ ಅಮಾವಾಸ್ಯೆಯ ತೀರ್ಥಸ್ನಾನಕ್ಕೆ ಅವಕಾಶವಿಲ್ಲ ಎಂದು ಆಯಾ ದೇವಸ್ಥಾನಗಳ ಆಡಳಿತ ಮಂಡಳಿಗಳು ತಿಳಿಸಿವೆ.
ನರಹರಿ ಪರ್ವತ ಕ್ಷೇತ್ರವು ಆಟಿ ಅಮಾವಾಸ್ಯೆಯ ತೀರ್ಥಸ್ನಾನಕ್ಕೆ ಪ್ರಸಿದ್ಧಿ ಪಡೆದಿದೆ. ಪ್ರತಿವರ್ಷ ಈ ದಿನ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ತೀರ್ಥಸ್ನಾನಗೈದು ದೇವರಿಗೆ ಪ್ರಾರ್ಥನೆ ಸಲ್ಲಿಸುವುದು ಸಂಪ್ರದಾಯವಾಗಿದೆ. ಜಿಲ್ಲಾಡಳಿತದ ಸೂಚನೆಯಂತೆ ಕ್ಷೇತ್ರದ ಆಡಳಿತ ಮಂಡಳಿಯು ತೀರ್ಥಸ್ನಾನಕ್ಕೆ
ಅವಕಾಶವಿಲ್ಲ ಎಂದು ತೀರ್ಮಾನಿಸಿದ್ದು, ಭಕ್ತರು ಸಹಕರಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.
ಹಾಗೆಯೇ ಶ್ರೀ ಕಾರಿಂಜೇಶ್ವರ ಕ್ಷೇತ್ರದಲ್ಲಿ ಆಟಿ ಅಮಾವಾಸ್ಯೆ ತೀರ್ಥಸ್ನಾನ ನಿಷೇಧಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಆ.8 ರಂದು ಆಟಿ ಅಮಾವಾಸ್ಯೆಯಂದು ಭಕ್ತಾಧಿಗಳು ಇಲ್ಲಿನ ಗದಾ ತೀರ್ಥದಲ್ಲಿ ತೀರ್ಥಸ್ನಾನ ನಡೆಸಿ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಆದರೆ ಕೊರೊನಾ ನಿಯಂತ್ರಣಕ್ಕಾಗಿ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿರುವುದರಿಂದ ತೀರ್ಥಸ್ನಾನಕ್ಕೆ ಅವಕಾಶ ನೀಡಲಾಗುವುದಿಲ್ಲ. ನಿಯಮ ಪಾಲನೆ ಅನುಷ್ಠಾನಕ್ಕಾಗಿ ಆ ದಿನದಂದು ಗದಾ ತೀರ್ಥದ ಸುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುವುದು, ಭಕ್ತಾಧಿಗಳು ಸಹಕರಿಸಬೇಕು ಎಂದು ಆಡಳಿತಾಧಿಕಾರಿ ನೋಣಯ್ಯ ನಾಯ್ಕ ತಿಳಿಸಿದ್ದಾರೆ.