ಡಂಪ್ ಮಾಡಿದ್ದ ಪ್ರೇಯಸಿಯ ಮತ್ತೆ ಸೇರಲು ಪ್ರಯತ್ನ, ಆಕೆಯ ಮನೆ ಕಿಟಕಿಯ ಮಧ್ಯೆ ಸಿಲುಕಿ ಪ್ರೀತಿಯ ಜೊತೆ ತೇಲಿ ಹೋಯ್ತು ಪ್ರಾಣ

ಕುಡಿದ ಮತ್ತಿನಲ್ಲಿ ಮಾಜಿ ಪ್ರೇಯಸಿಯ ಮನೆಗೆ ರಹಸ್ಯವಾಗಿ ನುಗ್ಗಲು ಯತ್ನಿಸಿದ ವ್ಯಕ್ತಿಯೊಬ್ಬ ಕಿಟಕಿಯಲ್ಲಿಯೇ ಸಿಲುಕಿ ಒದ್ದಾಡಿ, ನಂತರ ಪ್ರಾಣ ಬಿಟ್ಟಿರುವ ಘಟನೆ ಉಕ್ರೇನ್‌ನಲ್ಲಿ ನಡೆದಿದೆ.

 

ಉಕ್ರೇನ್‌ನ ಖೇರ್ಸನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಾವನ್ನಪ್ಪಿದ ವ್ಯಕ್ತಿ ತನ್ನ ಮಾಜಿ ಗೆಳತಿಗೆ ಮತ್ತೆ ಸಂಬಂಧ ಹೊಂದುವಂತೆ ಒತ್ತಡ ಹೇರುತ್ತಿದ್ದ. ಆದರೆ ಇದಕ್ಕೆ ಆಕೆ ನಿರಾಕರಿಸಿದ್ದಳು. ಹೀಗಾಗಿ ಕುಡಿದು ಫುಲ್ ಟೈಟ್ ಆದ ಆ ವ್ಯಕ್ತಿ ಆಕೆಯ ಮನೆಗೆ ಪ್ರವೇಶಿಸಲು ಪ್ರಯತ್ನಿಸಿದ್ದಾನೆ. ರಹಸ್ಯವಾಗಿ ಮನೆ ಮೇಲೆ ಹತ್ತಿದ ಆತ ಕಿಟಕಿ ಸರಿಸಿ ಒಳಹೋಗಲು ಪ್ರಯತ್ನಿಸಿದ್ದಾನೆ. ಆದರೆ ಕುಡಿದ ಅಮಲಿನಲ್ಲಿದ್ದ ಆತನಿಗೆ ಕಿಟಕಿಯನ್ನು ಸರಿಯಾಗಿ ಸರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಆತ ಗಂಟೆಗಳ ಕಾಲ ಅದರಲ್ಲಿಯೇ ಸಿಲುಕಿಕೊಂಡು ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಈ ಘಟನೆ ನಡೆದಾಗ ವ್ಯಕ್ತಿಯ ಮಾಜಿ ಪ್ರೇಯಸಿ ಮನೆಯಲ್ಲಿಯೇ ಇದ್ದಳು. ಆತ ಕಿಟಕಿಯ ಮೂಲಕ ಮನೆಯೊಳಗೆ ಪ್ರವೇಶಿಸಲು ಯತ್ನಿಸುತ್ತಿರುವುದನ್ನು ಕಂಡು ಹೌಹಾರಿದ ಆಕೆ ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾಳೆ. ಕಿಟಕಿಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಹೊರತರಲು ಪೋಲಿಸರು ಹರಸಾಹಸ ಪಡಬೇಕಾಯಿತು.

ನಾವು ತುಂಬಾ ಕಷ್ಟಪಟ್ಟು ಆತನನ್ನು ಹೊರತೆಗೆದೆವು. ಆದರೆ ಆ ವ್ಯಕ್ತಿ ತುಂಬಾ ಕುಡಿದು ಪ್ರಜ್ಞಾಹೀನನಾಗಿದ್ದ.ಅಷ್ಟೇ ಅಲ್ಲದೆ ಆತ ಉಸಿರಾಡುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದರು. ಅಷ್ಟರಲ್ಲಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಆಸ್ಪತ್ರೆಗೆ ದಾಖಲಿಸುವುದು ವಿಳಂಬವಾಗಿದ್ದರಿಂದ ಆತ ಸಾವನ್ನಪ್ಪಿದ್ದಾನೆಂದು ವೈದ್ಯರು ತಿಳಿಸಿದರು. ಕಿಟಕಿಯಲ್ಲಿ ಗಂಟೆಗಟ್ಟಲೆ ಸಿಕ್ಕಿಹಾಕಿಕೊಂಡಿದ್ದರಿಂದ ಆತನಿಗೆ ಉಸಿರಾಡಲು ಸಾಧ್ಯವಾಗಿಲ್ಲ. ಆತನ ಪ್ರೇಯಸಿ ಅವನೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದ್ದರೂ ಆತ ನಿರಂತರವಾಗಿ ಕಿರುಕುಳ ನೀಡುತ್ತಿದ್ದನಂತೆ. ಆಕೆಗೆ ಏನಾದರೂ ಮಾಡಲೇಬೇಕೆಂದು ಯೋಚಿಸಿ ರಹಸ್ಯವಾಗಿ ಮನೆ ಪ್ರವೇಶಿಸಿಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

Leave A Reply

Your email address will not be published.