ಸುಂದರ ಯುವತಿಯರ ಮೊಬೈಲ್ ನಂಬರ್ ಕೊಟ್ರೆ ಅವರು ಕೊಡ್ತಾರಂತೆ 500 ರೂಪಾಯಿ | ಅಂಗಡಿಗಳಲ್ಲಿ ರೀಚಾರ್ಜ್ ಮಾಡುವಾಗ ಹುಷಾರ್ ಹುಡುಗಿಯರೇ !
ಮೊಬೈಲ್ ರೀಚಾರ್ಜ್ ಮಾಡಿಸಿಕೊಳ್ಳಲು ಕರೆನ್ಸಿ ಅಂಗಡಿಗೆ ತೆರಳುವ ಹೆಣ್ಮಕ್ಕಳೇ ಹುಷಾರ್ ! ಸ್ವಲ್ಪ ಮೈಮರೆತರೂ ನಿಮ್ಮ ಮೊಬೈಲ್ ನಂಬರ್ ಪುಂಡರ ಕೈಸೇರಬಹುದು. ರಾತ್ರೋರಾತ್ರಿ ಅಸಭ್ಯ, ಅಶ್ಲೀಲ ಕರೆಗಳು,ಎಸ್ಸೆಮ್ಮೆಸ್ ಗಳು ಬರಲು ಪ್ರಾರಂಭವಾಗಬಹುದು.
ಹೌದು, ಉತ್ತರಪ್ರದೇಶ ರಾಜ್ಯಾದ್ಯಂತ ಕಳೆದ ಐದು ವರ್ಷದ ಅವಧಿಯಲ್ಲಿ ಇಂಥ 5,82,854 ದೂರುಗಳು ದಾಖಲಾಗಿವೆ. ಮಹಿಳೆಯರಿಗೆ ದೂರವಾಣಿ ಮೂಲಕ ಕಿರುಕುಳ ನೀಡಿದ ಈ ಪ್ರಕರಣಗಳ ಬೆನ್ನತ್ತಿ ತನಿಖೆ ನಡೆಸಿದ ಪೊಲೀಸರು ಹೆಣ್ಮಕ್ಕಳ ಮೊಬೈಲ್ ನಂಬರ್ ಮಾರಾಟ ಮಾಡುವ ಮೊಬೈಲ್ ರೀಚಾರ್ಜ್ ಅಂಗಡಿಗಳ ಬೃಹತ್ ಜಾಲವೊಂದನ್ನು ಭೇದಿಸಿದ್ದಾರೆ.
ಯುವತಿಯರ ಮೊಬೈಲ್ ಸಂಖ್ಯೆಯ ಮಾಹಿತಿಯನ್ನು ಮಾರಾಟಮಾಡುವ ಬೃಹತ್ ಜಾಲ ಉತ್ತರಪ್ರದೇಶದಾದ್ಯಂತ ವ್ಯಾಪಿಸಿದೆ. ರೀಚಾರ್ಜ್, ಡೇಟಾ ಪ್ಯಾಕ್, ಹೊಸ ಸಿಮ್ ಖರೀದಿಗಾಗಿ ಬರುವ ಮಹಿಳೆಯರ ಮೊಬೈಲ್ ಸಂಖ್ಯೆಯನ್ನು ಬರೆದಿಟ್ಟುಕೊಳ್ಳುವ ರೀಚಾರ್ಜ್ ಅಂಗಡಿಗಳ ಮಾಲೀಕರು ನಂತರ ಈ ಮಾಹಿತಿಗಳನ್ನು ಕಿಡಿಗೇಡಿಗಳಿಗೆ ಮಾರಾಟ ಮಾಡುತ್ತಾರೆ.
ಅದಲ್ಲದೆ, ಸುಂದರ ಯುವತಿಯರ ಮೊಬೈಲ್ ಸಂಖ್ಯೆ 500 ರೂ.ವರೆಗೆ ಮಾರಾಟವಾದರೆ, ಇತರೆ ಯುವತಿಯರ ಮೊಬೈಲ್ ಸಂಖ್ಯೆಯನ್ನು 50 ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂಬ ಸ್ಫೋಟಕ ಮಾಹಿತಿಯನ್ನು ಆಂಗ್ಲ ದೈನಿಕವೊಂದು ವರದಿ ಮಾಡಿದೆ.
ಈ ರೀತಿಯ ಜಾಲಕ್ಕೆ ಬೀಳದಿರಲು ಯುವತಿಯರು ಈ ನಿಯಮಗಳನ್ನು ಪಾಲಿಸಿದರೆ ಸಾಕು.
*ಆನ್ಲೈನ್ ಮೂಲಕವೇ ರೀಚಾರ್ಜ್ ಮಾಡಿಕೊಳ್ಳಿ
*ಒಳ್ಳೆಯ ಆಫರ್ ಇದ್ದರೆ ಪೋಸ್ಟ್ ಪೇಯ್ದೆ ಬದಲಿಸಿಕೊಳ್ಳಿ
*ಮೊಬೈಲ್ ಅಂಗಡಿಗಳಲ್ಲೇ ರೀಚಾರ್ಜ್ ಮಾಡಿಸಿಕೊಳ್ಳುವ ಅಗತ್ಯಬಿದ್ದಲ್ಲಿ ತಂದೆ ಅಥವಾ ಸೋದರರ ಸಹಾಯ ಪಡೆಯಿರಿ
ಇಂತಹ ಪ್ರಕರಣಗಳು ಈವರೆಗೆ ಕರ್ನಾಟಕದಲ್ಲಿ ವರದಿ ಆಗಿಲ್ಲ. ಗೌಪ್ಯತಾ ಕಾಯ್ದೆಯ ಪ್ರಕಾರ, ರೀಚಾರ್ಜ್ ಮಾಡುವವರು ಹೀಗೆ ನಂಬರ್ಗಳನ್ನು ಬೇರೆಯವರಿಗೆ ಕೊಡುವಂತಿಲ್ಲ. ಒಂದು ವೇಳೆ ಈ ಕುರಿತು ದೂರು ಬಂದರೆ ಸೈಬರ್ ಕ್ರೈಂ ಹಾಗೂ ಮಾನಸಿಕ ಕಿರುಕುಳ ಪ್ರಕರಣಗಳ ಐಪಿಸಿ ಸೆಕ್ಷನ್ಗಳ ಅಡಿಯಲ್ಲೂ ಪ್ರಕರಣ ದಾಖಲಿಸಬಹುದು. ಇಂತಹ ಕೃತ್ಯಗಳನ್ನು ಮಾಡುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.