ಭೂಲೋಕ ಸ್ವರ್ಗ ಲಡಾಖ್ ಪ್ರವಾಸಕ್ಕೆ ಒಬ್ಬಂಟಿಯಾಗಿ ಹೊರಟ ಮೂಡಬಿದ್ರೆಯ 18 ರ ತರುಣ
ಮೂಡುಬಿದಿರೆ: ಎಲ್ಲರ ಕಣ್ಮನ ಸೆಳೆಯುವ ಪ್ರವಾಸಿ ತಾಣವಾಗಿರುವ ಲಡಾಖ್ ಯಾರಿಗೆ ಇಷ್ಟ ಆಗೋದಿಲ್ಲ ಹೇಳಿ!?ಅಂತಹದರಲ್ಲಿ ಹಲವು ವರ್ಷಗಳ ಕನಸು ಈಡೇರಿಸಲು ಇಲ್ಲೊಬ್ಬ ತನ್ನ 18 ನೇ ವಯಸ್ಸಿನಲ್ಲಿ ಸೈಕಲ್ ಏರಿ ಲಡಾಖ್ ಯಾತ್ರೆ ಆರಂಭಿಸಿದ್ದಾನೆ.
ಲಡಾಖ್ ಯಾತ್ರೆ ತನ್ನ ಕನಸಾಗಿಕೊಂಡಿದ್ದ ಮೂಡುಬಿದಿರೆಯ ಯುವಕನೊಬ್ಬ ಸೋಮವಾರ ಸೈಕಲ್ ಯಾತ್ರೆ ಆರಂಭಿಸಿದ್ದಾರೆ. ಪ್ರಾಂತ್ಯ ಗ್ರಾಮದ ಲಾಡಿ ಲತೀಫ್ ಮಂಜಿಲ್ ನಿವಾಸಿ ಅಬೂಬಕ್ಕರ್ ಅವರ ಪುತ್ರ ಮಹ್ಮದ್ ಆರಿಫ್ ಎಂಬುವವರು ಲಡಾಖ್ ಗೆ ಸೈಕಲ್‌ನಲ್ಲಿ ಪ್ರಯಾಣ ಬೆಳೆಸುವ ಮೂಲಕ ತನ್ನ ಕೆಲವು ವರ್ಷಗಳ ಕನಸನ್ನು ಕೊನೆಗೂ ಈಡೇರಿಸಿಕೊಳ್ಳುತ್ತಿದ್ದಾನೆ.
ತನ್ನ ಲಡಾಖ್ ಯಾತ್ರೆಗೆ ಎಲ್ಲಾ ಸಿದ್ಧತೆಗಳನ್ನು ಮೊದಲೇ ಮಾಡಿಕೊಂಡ ಇವನು, ಮೂಡುಬಿದಿರೆಯಿಂದ ಸುಮಾರು 3500 ಕಿ.ಮೀ ದೂರವಿರುವ ಲಡಾಖ್ ಗೆ ದಿನಕ್ಕೆ ನೂರು ಕಿ.ಮೀ ಪ್ರಯಾಣ ಮಾಡುವ ಮೂಲಕ ಸೈಕಲ್‌ನಲ್ಲಿ ತಲುಪಲು ಎರಡು ತಿಂಗಳು ಬೇಕಾಗಬಹುದು ಎಂದು ಅಂದಾಜಿಸಿಕೊಂಡಿದ್ದಾನೆ.
ಮೂಡುಬಿದಿರೆ ಪಟ್ಟಣದ ಮುಖ್ಯ ರಸ್ತೆಯಿಂದ ಹೊರಟು ಮೂಲ್ಕಿ – ಉಡುಪಿ – ಭಟ್ಕಳ – ಅಂಕೋಲ – ಗೋವಾ ಮಾರ್ಗವಾಗಿ ಮುಂಬಯಿಗೆ ತೆರಳಲಿದ್ದಾನೆ. ಅಲ್ಲಿಂದ ಹೊಸದಿಲ್ಲಿ – ಚಂಡೀಗಢ – ಶಿಮ್ಲಾ ಮಾರ್ಗವಾಗಿ ಲಡಾಖ್ ತಲುಪಿದ್ದಾನೆ.
ಸಂಜೆ 7 ಗಂಟೆಗೆ ದಿನದ ಪ್ರಯಾಣ ನಿಲ್ಲಿಸಿ, ಹತ್ತಿರದ ಪೆಟ್ರೋಲ್ ಬಂಕ್, ಲಾಡ್ಜ್, ಹೋಟೆಲ್ ಆವರಣ ಇನ್ನಿತರ ಸುರಕ್ಷಿತ ಜಾಗ ನೋಡಿ ರಾತ್ರಿ ಉಳಿದುಕೊಳ್ಳಲಿದ್ದು, ಮರುದಿನ ಬೆಳಗ್ಗೆ 6 ಗಂಟೆಗೆ ಮತ್ತೆ ಪ್ರಯಾಣ ಮುಂದುವರಿಸಲಿದ್ದಾನೆ.
ಮಹ್ಮದ್ ಆರಿಫ್‌ನ ಯಾತ್ರೆಗೆ, ಆತ ಕೆಲಸ ಮಾಡುತ್ತಿದ್ದ ಟೋಟಲ್ ಅಲ್ಯೂಮಿನಿಯಂ ಸೆಂಟರ್‌ನ ಮಾಲೀಕರು ಸೇರಿದಂತೆ ಕೆಲವು ಸ್ನೇಹಿತರು ಖರ್ಚಿಗೆ ಹಣ ನೀಡಿದ್ದಾರೆ.
ದಿನಕ್ಕೆ ನೂರು ಕಿಲೋ ಮೀಟರ್ ಸೈಕಲ್ ಸವಾರಿ ಗುರಿಯಾಗಿಸಿಕೊಂಡ ಇವನಿಗೆ ದಾರಿ ಮಧ್ಯೆ ಕೇರಳದ ಕೆಲವು ಯುವಕರು ಜೊತೆಯಾಗಲಿದ್ದಾರೆ ಎನ್ನಲಾಗಿದೆ.