ಆಗುಂಬೆ ತಿರುವಿನಲ್ಲಿ ತಡೆಗೋಡೆಗೆ ಗುದ್ದಿ ಪ್ರಪಾತಕ್ಕೆ ಇನ್ನೇನು ಬೀಳಲಿದ್ದ ಲಾರಿ | ಸ್ವಲ್ಪದರಲ್ಲಿ ತಪ್ಪಿದ ಭಾರೀ ಅವಘಡ !!

ಉಡುಪಿ- ಶಿವಮೊಗ್ಗ ಜಿಲ್ಲೆ ಸಂಪರ್ಕಿಸುವ ಆಗುಂಬೆ ಘಾಟಿ 7ನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ತಡೆಗೋಡೆಗೆ ಗುದ್ದಿ ಅಪಾಯಕಾರಿ ಸ್ಥಿತಿಯಲ್ಲಿ ನಿಂತ ಘಟನೆ ಇಂದು ಬೆಳಗಿನ ಜಾವ ಐದು ಗಂಟೆಗೆ ನಡೆದಿದೆ.

 

ಭತ್ತ ತುಂಬಿದ ಲಾರಿ ಶಿವಮೊಗ್ಗದಿಂದ ಹೆಬ್ರಿ ಕಡೆಗೆ ಸಂಚರಿಸುವಾಗ ಅಪಘಾತ ನಡೆದಿದೆ. ಇದರಿಂದಾಗಿ ಆಗುಂಬೆಘಾಟಿಯಲ್ಲಿ ಸಂಚಾರ ಕೆಲಕಾಲ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು.

ರಸ್ತೆ ಬದಿ ನಿರ್ಮಿಸಿದ್ದ ಉಕ್ಕಿನ ತಡೆಗೋಡೆ ಇದ್ದ ಕಾರಣ ಟ್ರಕ್ ಅದರ ಮೇಲೇ ನಿಂತಿತ್ತು. ಟ್ರಕ್‌ನ ಅರ್ಧಭಾಗ ಹೆದ್ದಾರಿ, ಇನ್ನರ್ಧ ಭಾಗ ಪ್ರಪಾತದತ್ತ ನೇತಾಡುತ್ತಿತ್ತು. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಭಾರಿ ದುರಂತ ತಪ್ಪಿದೆ. ಒಂದು ವೇಳೆ ಟ್ರಕ್ ಪ್ರಪಾತಕ್ಕೆ ಬಿದ್ದಿದ್ದರೆ ಕೆಳಗಿನ ತಿರುವಿನಲ್ಲಿ ಬರುತ್ತಿದ್ದ ವಾಹನಗಳ ಮೇಲೆ ಬೀಳುತ್ತಿತ್ತು!

ಘಟನೆಯಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಆಗುಂಬೆ ಪೊಲೀಸ್ ಠಾಣೆ ಸಿಬ್ಬಂದಿ ಲಾರಿಯನ್ನು ಮೇಲೆತ್ತಿ ಸಂಚಾರವನ್ನು ಸುಗಮಗೊಳಿಸಿದರು.

ಈ ಬಗ್ಗೆ ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.