2016ರ ಮರಳು ನೀತಿಯನ್ನೇ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ರಾಜ್ಯ ಉಚ್ಛ ನ್ಯಾಯಾಲಯ ತೀರ್ಪು
ಸರಕಾರ ಜಾರಿಗೆ ತಂದಿರುವ ನೂತನ ಮರಳು ನೀತಿಯಲ್ಲಿ ಬದಲಾವಣೆ ತರದೆ 2016ರ ಮರಳು ನೀತಿಯನ್ನೇ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ರಾಜ್ಯ ಉಚ್ಛ ನ್ಯಾಯಾಲಯ ತೀರ್ಪು ನೀಡಿದೆ ಎಂದು ಮರಳು ವ್ಯಾಪಾರಸ್ಥರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಮೆದು ಅವರು ತಿಳಿಸಿದ್ದಾರೆ.
ಪುತ್ತೂರು ಎಪಿಎಂಸಿ ಸಭಾಂಗಣದಲ್ಲಿ ಮರಳುಗುತ್ತಿಗೆದಾರರ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು. ದ.ಕ. ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು, ಪುತ್ತೂರು ಹಾಗೂ ಕಡಬ ತಾಲೂಕುಗಳಲ್ಲಿ ಗುರುತಿಸಲಾದ ೩೦ ಹೊಸ ೧೭ ಹಳೆಯ ಒಟ್ಟು ೪೭ ಮರಳು ಬ್ಲಾಕ್‌ಗಳಲ್ಲಿ ಸಾಂಪ್ರದಾಯಿಕ ಮರಳುಗಾರಿಕೆಯನ್ನು ನಡೆಸಲು ೨೦೧೬ರ ಮರಳು ನೀತಿಯಂತೆ ಅವಕಾಶ ನೀಡಬೇಕು. ೨೦೨೦ರ ಮರಳು ನೀತಿಯಂತೆ ರಾಜ್ಯ ಸರಕಾರವು ಮರಳುಗಾರಿಕೆ ನಡೆಸಲು ವಹಿಸಿಕೊಟ್ಟಿರುವುದನ್ನು ಕಾನೂನುಬಾಹಿರ ಎಂದು ರಾಜ್ಯ ಉಚ್ಛ ನ್ಯಾಯಾಲಯ ತೀರ್ಪು ತಿಳಿಸಿದೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ನೂತನ ಮರಳು ನೀತಿಯಲ್ಲಿ ಸರಕಾರ ಸರಕಾರಿ ಸೌಮ್ಯದ ಸಂಸ್ಥೆಗೆ ಮರಳು ತೆಗೆಯಲು ಹಾಗೂ ಮಾರಾಟ ಮಾಡಲು ಅವಕಾಶ ನೀಡಿರುವುದು ಸ್ಥಳೀಯ ಮರಳು ಸಂಗ್ರಹಗಾರರ ವಿರೋಧಕ್ಕೆ ಕಾರಣವಾಗಿತ್ತು. ಸ್ಥಳೀಯರಿಗೆ ಅವಕಾಶ ನೀಡುವಂತೆ ಹೊಸ ಮರಳು ನೀತಿಯಲ್ಲಿ ಬದಲಾವಣೆ ತರದೇ ಇದ್ದಲ್ಲಿ ನ್ಯಾಯಾಲಯದ ಮೆಟ್ಟಿಲೇರಲು ಮರಳು ಗುತ್ತಿಗೆದಾರರು ಸಂಘ ಸಭೆಯಲ್ಲಿ ನಿರ್ಣಯಿಸಿದ್ದಂತೆ ಸಂಘದ ಸದಸ್ಯ ಮುಸ್ತಾಫ ಅವರು ನ್ಯಾಯಾಲಯಕ್ಕೆ ವಕೀಲರಾದ ಅಭಿಷೇಕ್ ಮಾರ್ಲ ಅವರ ಮೂಲಕ ದಾವೆ ಹೂಡಿದ್ದರು.
ಈಗಾಗಲೇ ದ.ಕ. ಜಿಲ್ಲೆಯ ೩೦ ಮತ್ತು ೧೭ ನಾನ್ ಸಿಆರ್‌ಝಡ್ ಬ್ಲಾಕ್‌ಗಳಲ್ಲಿ ಮರಳು ತೆಗೆಯಲು ಟೆಂಡರ್ ಹಾಕಿರುವ ಗುತ್ತಿಗೆದಾರರಿಗೆ ಆರ್ಥಿಕ ತೊಂದರೆ ಉಂಟಾಗುತ್ತದೆ ಮತ್ತು ದ.ಕ. ಜಿಲ್ಲೆಯಲ್ಲಿ ಸಿ.ಆರ್.ಝಡ್ ವಲಯದಿಂದ ನಿರಂತರ ಮರಳುಗಾರಿಕೆ ನಡೆಸಲು ಸಾಧ್ಯವಿಲ್ಲ. ಇದಕ್ಕೆ ಪರಿಸರ ಕಾಯ್ದೆ ಅಡ್ಡಿಯಾಗುತ್ತದೆ. ಆದ ಕಾರಣ ನಾನ್ ಸಿಆರ್‌ಝಡ್ ವಲಯದಿಂದ ಸಾಂಪ್ರದಾಯಿಕ ಮರಳುಗಾರಿಕೆಯನ್ನು ೨೦೧೬ರ ಮರಳು ನೀತಿಯಂತೆ ಮುಂದುವರಿಸಬೇಕೆಂದು ಉಚ್ಛ ನ್ಯಾಯಾಲಯದಲ್ಲಿ ನಿವೇದನೆ ಅರ್ಜಿದಾರರ ಮಾಡಲಾಗಿತ್ತು. ವಾದವನ್ನು ಉಚ್ಛ ನ್ಯಾಯಾಲಯವು ಪುರಸ್ಕರಿಸಿದೆ ಎಂದು ದಿನೇಶ್ ಮೆದು ಅವರು ತಿಳಿಸಿದರು.
ಬೇಡಿಕೆ ಪ್ರಮಾಣದಲ್ಲಿ ಮರಳು ಸರಬರಾಜು:
ಮರಳುಗಾರಿಕೆಯನ್ನು ನಡೆಸಲು ಮುಂದಿನ ಕ್ರಮವಾಗಿ ರಾಜ್ಯ ಸರಕಾರದಿಂದ ೫ ವರ್ಷಗಳ ಪರಿಸರ ವಿಮೋಚನ ಪತ್ರವನ್ನು ಪ್ರತೀ ಮರಳು ಬ್ಲಾಕ್‌ಗಳಿಗೆ ಪಡೆಯಲಾಗುವುದು. ಟೆಂಡರ್ ದಾರರಲ್ಲಿ ಗರಿಷ್ಠ ರಾಜಧನ ಪಾವತಿ ಮಾಡುವವರಿಗೆ ಸರಕಾರವು ಗುತ್ತಿಗೆ ನೀಡಲಿದೆ. ನ್ಯಾಯಾಲಯದ ಆದೇಶದ ಕುರಿತಂತೆ ದ.ಕ. ಜಿಲ್ಲಾಧಿಕಾರಿಗಳಲ್ಲಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರಲ್ಲಿ ಮಾತುಕತೆ ನಡೆಸಲಾಗಿದೆ. ಇನ್ನು ೫ ತಿಂಗಳೊಳಗೆ ಟೆಂಡರ್ ಸಹಿತ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡು ದ.ಕ. ಜಿಲ್ಲೆಯಲ್ಲಿ ನಾನ್ ಸಿಆರ್‌ಝಡ್ ಬ್ಲಾಕ್‌ಗಳಿಂದ ನಿರಂತರವಾಗಿ ಬೇಡಿಕೆಯ ಪ್ರಮಾಣದಲ್ಲಿ ಮರಳು ಸರಬರಾಜುಗೊಳ್ಳಲಿದೆ. ಈಗಾಗಲೇ ಮರಳು ಪಡೆಯಲು ನಾನ್ ಸಿಆರ್‌ಝಡ್ ಆ್ಯಪ್ ತೆರೆಯಲಾಗಿದ್ದು ಆನ್‌ಲೈನ್ ಮೂಲಕವೂ ಮರಳು ಪಡೆದುಕೊಳ್ಳಲು ಅವಕಾಶವಿದೆ ಎಂದು ಮರಳು ವ್ಯಾಪಾರಸ್ಥರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಪಳ್ಳಿಪ್ಪಾಡಿ ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ಮರಳು ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಪಳ್ಳಿಪ್ಪಾಡಿ, ಬಾಲಕೃಷ್ಣ ಬಾಣಜಾಲು, ಸದಸ್ಯರಾದ ಚರಣ್ ಬಂಟ್ವಾಳ, ಯೂಸುಫ್, ಸುರೇಶ್, ಗೋಪಾಲಕೃಷ್ಣ ಭಟ್, ಬಿ.ಪಿ. ಎಲಿಯಾಸ್, ಸಂಜೀವ, ಇಬ್ರಾಹಿಂ, ರೋಹಿತ್ ಶೆಟ್ಟಿ, ಪುಷ್ಪರಾಜ ಚೌಟ, ಚೆನ್ನಪ್ಪ ಗೌಡ, ತೀರ್ಥರಾಮ, ಬಾಲಕೃಷ್ಣ ಬಾಣಜಾಲು, ರವೀಂದ್ರನಾಥ, ತನಿಯಪ್ಪ, ಗೋಪಾಲಕೃಷ್ಣ ಪ್ರಸಾದ್ ಗರೋಡಿ, ಪುರಂದರ ಕಡಬ ಉಪಸ್ಥಿತರಿದ್ದರು.