ಯತ್ನಾಳ್ ಜೆಡಿಎಸ್ಗೆ ಹೋಗಿದ್ದಾಗ ಹಿಂದುತ್ವ ಎಲ್ಲಿ ಹೋಗಿತ್ತು? -ರೇಣುಕಾಚಾರ್ಯ ಟೀಕೆ
ಜೆಡಿಎಸ್ ಗೆ ಹೋದಾಗ ನಿಮ್ಮ ಹಿಂದುತ್ವ ಎಲ್ಲಿ ಹೋಗಿತ್ತು ಸ್ವಾರ್ಥಕ್ಕಾಗಿ ಹಿಂದುತ್ವ ಬೇಕಾ? ಜೆಡಿಎಸ್ ನಲ್ಲಿದ್ದಾಗ ಅಲ್ಪಸಂಖ್ಯಾತ ಓಲೈಕೆ ಮಾಡಿಲ್ಲವೇ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯಡಿಯೂರಪ್ಪ ಅವರ ವಿರುದ್ಧ ಯತ್ನಾಳ್ ನಡೆಸಿದ ಆರೋಪಗಳಿಗೆ ತಿರುಗೇಟು ನೀಡಿದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು, ಯಡಿಯೂರಪ್ಪರ ಸಾಮರ್ಥ್ಯ, ನಾಯಕತ್ವ, ಹೋರಾಟ ದೊಡ್ಡದು. ಹಲವು ಪಾದಯಾತ್ರೆ, ಹೋರಾಟ ಮಾಡಿದ್ದಾರೆ. ಅನೇಕ ಬಾರಿ ಜೈಲಿಗೆ ಹೋಗಿದ್ದಾರೆ. ಯಾರೋ ಒಬ್ಬರು ಮಾತಾಡಿದರೆ ಯಡಿಯೂರಪ್ಪ ಅವರ ಗೌರವ ಕಡಿಮೆಯಾಗಲ್ಲ. ಬಿಜೆಪಿಗೆ ಯಡಿಯೂರಪ್ಪ ಅವರ ಬಗ್ಗೆ ಅಪಾರ ಗೌರವ ಇದೆ ಎಂದರು.
ಯಡಿಯೂರಪ್ಪ ಅವರು ಹೋರಾಟದ ಶ್ರಮದಿಂದ ಬಿಜೆಪಿಯು ಅಧಿಕಾರಕ್ಕೆ ಬಂದಿದೆ. ಇಬ್ಬರಿದ್ದಾಗ ಯಡಿಯೂರಪ್ಪ ಯೋಚಿಸಲಿಲ್ಲ. ಈಗ 120 ಸಂಖ್ಯೆ ಆಗಿದೆ. ಪಕ್ಷದ ವರಿಷ್ಟರಿಗೆ ಗೌರವ ನೀಡಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಯಡಿಯೂರಪ್ಪ ಮೋಜು ಮಸ್ತಿಗಾಗಿ ಅಧಿಕಾರದಲ್ಲಿ ಇರಲಿಲ್ಲ. ಹೈಕಮಾಂಡ್ ಹಾಗೂ ಸಂಘ ಪರಿವಾರದವರು ಯಡಿಯೂರಪ್ಪ ಅವರನ್ನು ಶ್ಲಾಘಿಸಿದ್ದಾರೆ ಯಡಿಯೂರಪ್ಪ ಬಗ್ಗೆ ಮಾತನಾಡುವುದು ಎಷ್ಟು ಸೂಕ್ತ? ಯತ್ನಾಳ್ ಅವರು ಯಡಿಯೂರಪ್ಪ ಅವರ ಕೈಕಾಲು ಹಿಡಿದು ಪಕ್ಷಕ್ಕೆ ಬಂದಿದ್ದಾರೆ.ಈಗ ಏನೇನೊ ಮಾತಾಡುತ್ತಾರೆ ಎಂದು ಟೀಕಿಸಿದರು.