ಇಂದಿನಿಂದ ಮಂಗಳೂರು ಮರವೂರು ಸೇತುವೆ ಮತ್ತೆ ಎಲ್ಲಾ ವಾಹನಗಳ ಸಂಚಾರಕ್ಕೆ ಲಭ್ಯ
ಮಂಗಳೂರು: ಮಳೆಯ ಕಾರಣ ಕುಸಿದಿದ್ದ ಮರವೂರು ಸೇತುವೆ ದುರಸ್ತಿ ಪೂರ್ಣಗೊಂಡಿದ್ದು ಇಂದಿನಿಂದ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಹಿರಿಯ ಪರೀಕ್ಷಕ ಜಯಗೋಪಾಲ್ ನೇತ್ರತ್ವದಲ್ಲಿ ತಜ್ಞರು, ಸೇತುವೆ ವಾಹನ ಸಂಚಾರಕ್ಕೆ ಯೋಗ್ಯವಾಗಿದೆಯೇ ಎಂದು ಪರೀಕ್ಷಿಸಲು ರೋಡ್ ಟೆಸ್ಟ್ ನಡೆಸಿದ್ದಾರೆ. 28 ಟನ್, 30 ಟನ್ ಹೀಗೆ ವಿವಿಧ ಭಾರಗಳನ್ನು ಹಾಕಿದ ಟ್ರಕನ್ನು ಸೇತುವೆ ಮೇಲ್ಬಾಗದಲ್ಲಿ ನಿಲುಗಡೆಗೊಳಿಸಿ ಬೇರೆ ಬೇರೆ ವಿಧದಲ್ಲಿ ಪರೀಕ್ಷೆ ನಡೆಸಿದ್ದಾರೆ. ಪರೀಕ್ಷೆಯಲ್ಲಿ ಸೇತುವೆ ವಾಹನ ಸಂಚಾರಕ್ಕೆ ಸಂಪೂರ್ಣ ಫಿಟ್ ಆಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನೇರ ಸಂಪರ್ಕ ಕಲ್ಪಿಸಲು ಸಹಕಾರಿಯಾಗಿದ್ದ ಮರವೂರು ಸೇತುವೆ ಒಂದುವರೆ ತಿಂಗಳ ಹಿಂದೆ ಎರಡು ಅಡಿಯಷ್ಟು ಕುಸಿದಿತ್ತು. ಬೆಂಗಳೂರಿನಿಂದ ಬಂದ ತಜ್ಞ ಇಂಜಿನಿಯರ್ ಗಳ ತಂಡ ಪರಿಶೀಲಿಸಿ ಸರಿಪಡಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬಹುದು ಎಂದು ವರದಿ ನೀಡಿದ ಬಳಿಕ ಕಾಮಗಾರಿ ಆರಂಭಿಸಲಾಗಿತ್ತು.
ಈ ಹಿನ್ನಲೆ ಇಂದು ಸಂಜೆಯಿಂದ ಎಲ್ಲಾ ತರಹದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.