ಲವೀನಾಳ ಬಿರುಸಿನ ಪಂಚ್ ಗೆ ಉದುರಿ ಬಿತ್ತು ಇನ್ನೊಂದು ಒಲಿಂಪಿಕ್ ಪದಕ | ಕಂಚು ಗ್ಯಾರಂಟಿ, ಗುರಿ ನೆಟ್ಟಿದೆ ಚಿನ್ನದ ಕಡೆಗೆ !

ಬಾಕ್ಸಿಂಗ್ ವೆಲ್ಟರ್ ಕ್ಯಾಟಗರಿಯಲ್ಲಿ ಭಾರತದ ಲವೀನಾ ಬೊರ್ಗೊಹೈನ್ ಸೆಮಿಫೈನಲ್ಸ್ ತಲುಪಿದ್ದು, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನಮ್ಮ ದೇಶಕ್ಕೆ ಎರಡನೇ ಪದಕ ಸಿಗುವುದು ಖಚಿತವಾಗಿದೆ.

 

ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲವೀನಾ ಅವರು, ಚೀನಾದ ಚೆನ್ ನೈನ್-ಚಿನ್ ಅವರನ್ನು 4-1 ಸ್ಕೋರ್‌ನಿಂದ ಮಣಿಸಿ ಸೆಮಿಫೈನಲ್ ತಲುಪಿದ್ದಾರೆ.

ಬಾಕ್ಸಿಂಗ್ ವೆಲ್ಟರ್ (64-69 ಕೆಜಿ) ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, ಮೊದಲ ರೌಂಡ್‌ನಲ್ಲಿ ಐವರು ಜಡ್ಜ್‌ಗಳಲ್ಲಿ ಮೂವರು ಲವೀನಾ ಪರವಾಗಿ ತೀರ್ಪು ಕೊಟ್ಟ ಹಿನ್ನೆಲೆಯಲ್ಲಿ 3-2 ಸ್ಕೋರ್ ಬಂತು. ಎರಡನೇ ರೌಂಡ್ ಸರ್ವಾನುಮತವಾಗಿ ಲವೀನಾ ಪರ ತೀರ್ಪು ಸಿಕ್ಕರೆ, ಮೂರನೇ ಅಂತಿಮ ರೌಂಡ್‌ನಲ್ಲಿ ಸ್ಟ್ರೀಟ್ ಡಿಸಿಷನ್‌ನಲ್ಲಿ 4-1 ಸ್ಕೋರ್ ಗಳಿಸಿದರು. ಈ ಮೂಲಕ ವಿಜಯ ಸಾಧಿಸಿದ ಲವೀನಾ, ಸೆಮಿಫೈನಲ್ಸ್ ಪ್ರವೇಶಿಸಿದರು.

ಇದಕ್ಕೂ ಮುನ್ನ, ರೌಂಡ್ ಆಫ್ 16 ಪಂದ್ಯದಲ್ಲಿ ಜರ್ಮನಿಯ ನಾಡೀನ್ ಅಪೆಟೈರನ್ನು ಮಂಗಳವಾರ 3-2 ಸ್ಕೋರ್‌ನೊಂದಿಗೆ ಅವರು ಮಣಿಸಿದ್ದರು. ಇದೀಗ ಸೆಮಿಫೈನಲ್ಸ್‌ನಲ್ಲಿ ಟರ್ಕಿಯ ಬುಸೆನಾಸ್ ಸುರ್ಮೆನೆಲಿ ಅವರ ವಿರುದ್ಧ ಸೆಣೆಸಲಿರುವ ಲವೀನಾಗೆ ಕಂಚಿನ ಪದಕವಂತೂ ಕಟ್ಟಿಟ್ಟ ಬುತ್ತಿ. ಇನ್ನು ಯಾವ ಪದಕ ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಅವರ ಈ ಐತಿಹಾಸಿಕ ಗೆಲುವಿನೊಂದಿಗೆ ಒಲಿಂಪಿಕ್ಸ್‌ನಲ್ಲಿ ಒಟ್ಟಾರೆಯಾಗಿ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಪದಕವನ್ನು ತರುತ್ತಿರುವ ಮೂರನೇ ವ್ಯಕ್ತಿಯಾಗಿದ್ದಾರೆ, ಅಸ್ಸಾಂನ ಆಟಗಾರ್ತಿ ಲವೀನಾ. ಹಾಗೆಯೇ ಬಾಕ್ಸಿಂಗ್‌ನಲ್ಲಿ ಪದಕ ಗೆಲ್ಲುವ ಎರಡನೇ ಮಹಿಳೆಯಾಗಿದ್ದಾರೆ. ಈ ಹಿಂದಿನ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಬಾಕ್ಸರ್‌ಗಳೆಂದರೆ, ಮೇರಿ ಕೋಂ ಮತ್ತು ವಿಜೇಂದರ್ ಸಿಂಗ್.

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ವೇಯ್ಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಅವರು ಭಾರತದ ಮೊದಲ ಬೆಳ್ಳಿ ಪದಕವನ್ನು ಗಳಿಸಿದ್ದರು. ಲವೀನಾ ಅವರು ಪದಕ ಗೆಲ್ಲುವ ಎರಡನೇ ಸ್ಪರ್ಧಿ ಆಗಲಿದ್ದಾರೆ.

Leave A Reply

Your email address will not be published.