ನೂತನ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತಿದ್ದೇನೆ – ಬಸವರಾಜ್ ಬೊಮ್ಮಾಯಿ
ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಬೆಳಗ್ಗೆ 11 ಗಂಟೆಗೆ ರಾಜಭವನದ ಗಾಜಿನ ಮನೆಯಲ್ಲಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ರಾಜ್ಯಪಾಲ ಥಾವರ್‌ಚಾಂದ ಗೆಹ್ಲೋಟ್ ಅವರು ಪ್ರಮಾಣವಚನ ಬೋಧಿಸಿದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಕಾರ್ಯಕ್ರಮ ನಡೆಸಿಕೊಟ್ಟರು. ಬಳಿಕ ನೂತನ ಮುಖ್ಯಮಂತ್ರಿ ಕಡತಕ್ಕೆ ಸಹಿ ಹಾಕಿದರು. ನಂತರ ರಾಜ್ಯಪಾಲ ಗೆಹ್ಲೋಟ್ ಅವರ ಸಿಎಂ ಬೊಮ್ಮಾಯಿ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು.
ಬೊಮ್ಮಾಯಿ ಇಂದು ಬೆಳಿಗ್ಗೆ ಬೆಂಗಳೂರಿನ ಆಂಜನೇಯ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ತರುವಾಯ ಯಡಿಯೂರಪ್ಪನವರ ಮನೆಗೆ ತೆರಳಿ ಅವರ ಆಶೀರ್ವಾದ ಪಡೆದು ರಾಜಭವನಕ್ಕೆ ಬಂದಿದ್ದರು.
ಇಂದಿನಿಂದ ಬೊಮ್ಮಾಯಿ ರಾಜ್ಯಭಾರ ಶುರುವಾಗಲಿದೆ. ಶಿಷ್ಯನ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ 30 ನಿಮಿಷ ಮೊದಲೇ ಬಿ.ಎಸ್.ಯಡಿಯೂರಪ್ಪ ಹಾಜರಿದ್ದರು. ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ್ರಮಾಣ ವಚನಕ್ಕೆ ಹೋಗುವ ದಾರಿಯಲ್ಲಿ ಯಡಿಯೂರಪ್ಪನವರ ಕಾಲಿಗೆ ಎರಗಿ ಆಶೀರ್ವಾದ ಪಡೆದು ಪ್ರಮಾಣವಚನಕ್ಕೆ ಸಾಗಿದರು. ಬೊಮ್ಮಾಯಿ ಕುಟುಂಬಸ್ಥರು ಪ್ರಮಾಣವಚನ ಸ್ವೀಕರಿಸುವ ಕ್ಷಣವನ್ನು ಕಣ್ಣುಂಬಿಕೊಂಡರು. ನೂತನ ಮುಖ್ಯಮಂತ್ರಿಗೆ ಜೈಕಾರ, ಘೋಷಣೆಗಳು ಮೊಳಗಿದವು.
ಯಡಿಯೂರಪ್ಪ ಜತೆ ಬೊಮ್ಮಾಯಿ ಕುಟುಂಬಸ್ಥರು ವಿಕ್ಟರಿ ಸಿಂಬಲ್ ತೋರಿಸಿ ಗೆಲುವಿನ ನಗೆ ಬೀರಿದರು. ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಬೊಮ್ಮಾಯಿ ಜತೆ ವೇದಿಕೆ ಮುಂಭಾಗದಲ್ಲಿ ಬಿಎಸ್ ವೈ ವಿಕ್ಟರಿ ಸಿಂಬಲ್ ತೋರಿಸಿದರು. ರಾಜಭವನ ಸುತ್ತ ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು.