ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ: ಸಿಎಂ ಬೊಮ್ಮಾಯಿ ಘೋಷಣೆ
ರಾಜ್ಯದಲ್ಲಿ ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಡೆದ ಮೊದಲ ಸುದ್ದಿಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ್ದಾರೆ.
ರೈತರ ಮಕ್ಕಳು ಕೂಡಾ ಉನ್ನತ ಶಿಕ್ಷಣ ಪಡೆಯಲು ಅನುಕೂಲ ಆಗುವ ನಿಟ್ಟಿನಲ್ಲಿ ಈ ಕ್ರಮ ವಹಿಸಲಾಗಿದೆ. ಇದಕ್ಕಾಗಿ ಒಂದು ಸಾವಿರ ಕೋಟಿ ರೂ. ಮೀಸಲಿಡುವುದಾಗಿ ಅವರು ತಿಳಿಸಿದ್ದಾರೆ.
ಎಲ್ಲ ಇಲಾಖೆಗಳಲ್ಲೂ ಅನಗತ್ಯ ಖರ್ಚು ಕಡಿಮೆ ಮಾಡಬೇಕೆಂದು ಸೂಚಿಸಿದ್ದೇನೆ. ಕನಿಷ್ಠ ಶೇ. 5ರಷ್ಟು ಅನಗತ್ಯ ಖರ್ಚು ಕಡಿಮೆ ಮಾಡಬೇಕು ಎಂದು ಇಂದಿನ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸರ್ಕಾರಿ ಉದ್ಯೋಗಿಗಳು ಏನು ಮಾಡಿದರೂ ನಡೆಯುತ್ತದೆ ಎಂಬ ಮನೋಭಾವಕ್ಕೆ ಇನ್ನು ಅವಕಾಶವಿಲ್ಲ. ಎಲ್ಲರೂ ಕಟ್ಟುನಿಟ್ಟಾಗಿ ಕೆಲಸ ಮಾಡಲೇಬೇಕು. ಎಲ್ಲ ಇಲಾಖೆಯ ಅಧಿಕಾರಿಗಳೂ ಆಯಾ ಇಲಾಖೆಗಳಿಗೆ ಸಂಬಂಧಿಸಿದ ಫೈಲ್ಗಳನ್ನು ಕಳುಹಿಸುತ್ತಾರೆ. ಮುಂದಿನ 15 ದಿನಗಳೊಳಗೆ ಆ ಎಲ್ಲ ಫೈಲ್ಗಳೂ ಕ್ಲಿಯರ್ ಆಗಬೇಕೆಂದು ಆದೇಶಿಸಿದ್ದೇನೆ ಎನ್ನುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಿ ಇಲಾಖೆಗಳ ಸಿಬ್ಬಂದಿಗೆ ಚುರುಕು ಮುಟ್ಟಿಸಲು ಮುಂದಾಗಿದ್ದಾರೆ.
ಸಂಧ್ಯಾ ಸುರಕ್ಷಾ ಯೋಜನೆ ಹಾಗೂ ವಿಧವಾ ವೇತನದ ಮೊತ್ತವನ್ನು ಏರಿಕೆ ಮಾಡಿದ್ದಾರೆ. ಸಂಧ್ಯಾ ಸುರಕ್ಷಾ ಯೋಜನೆ ಮೊತ್ತ ಸದ್ಯ 1000 ರೂಪಾಯಿ ಇದೆ. ಅದನ್ನು 1200 ರೂಪಾಯಿಗೆ ಏರಿಕೆ ಮಾಡಲಾಗುವುದು. ಹಾಗೂ ವಿಧವಾ ವೇತನ ಮಾಸಿಕ 600 ರೂಪಾಯಿ ಇತ್ತು. ಅದನ್ನು 800 ರೂಪಾಯಿಗೆ ಏರಿಕೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.