ರೈಲು ಬುಕ್ ಆದ ನಂತರ ಬೋರ್ಡಿಂಗ್ ನಿಲ್ದಾಣ ಬದಲಾಯಿಸಬೇಕಾದರೆ ಈ ವಿಧಾನವನ್ನು ಅನುಸರಿಸಿ

ಕೆಲವೊಮ್ಮೆ ರೈಲ್ವೆ ಪ್ರಯಾಣಿಕರು ಅನಿವಾರ್ಯ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಬುಕ್ ಮಾಡಿರುವ ನಿಲ್ದಾಣ ಬಿಟ್ಟು ಬೇರೆ ನಿಲ್ದಾಣದಲ್ಲಿ ರೈಲು ಹತ್ತುವ ಪ್ರಮೇಯ ಎದುರಾಗಬಹುದು. ಆದರೆ, ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸಲು ಕೂಡಾ ರೈಲ್ವೆಯಲ್ಲಿ ಕೆಲವೊಂದು ನಿಯಮಗಳಿವೆ.

ಕೆಲವೊಮ್ಮೆ ಇದ್ದಕ್ಕಿದ್ದಂತೆ, ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸುವ ಅವಶ್ಯಕತೆ ಎದುರಾಗುತ್ತದೆ. ಬೋರ್ಡಿಂಗ್ ನಿಲ್ದಾಣವು ದೂರವಿದ್ದು, ಸಮಯಕ್ಕೆ ಸರಿಯಾಗಿ ತಲುಪುವುದು ಸಾಧ್ಯವಾಗದೇ ಹೋದಾಗ ಹತ್ತಿರದ ಯಾವುದೇ ನಿಲ್ದಾಣವನ್ನು ಬೋರ್ಡಿಂಗ್ ಸ್ಟೇಷನ್ ಆಗಿ ಬದಲಾಯಿಸಿಕೊಳ್ಳಬಹುದು.

ಹೌದು, ಪ್ರಯಾಣಿಕರ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸುವ ಸೌಲಭ್ಯವನ್ನು ಐಆರ್‌ಸಿಟಿಸಿ (IRCTC) ನೀಡುತ್ತಿದೆ. ಐಆರ್‌ಸಿಟಿಸಿಯ ಈ ಸೌಲಭ್ಯದ ಲಾಭವನ್ನು ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್ ಮಾಡಿದ ಪ್ರಯಾಣಿಕರು ಪಡೆದುಕೊಳ್ಳಬಹುದು. ಆದರೆ, ಟ್ರಾವೆಲ್ ಏಜೆಂಟ್‌ಗಳ ಮೂಲಕ ಅಥವಾ ರಿಸರ್ವೇಶನ್ ಸಿಸ್ಟಮ್ ಮೂಲಕ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು ಈ ಸೌಲಭ್ಯವನ್ನು ಪಡೆಯಲು ಸಾಧ್ಯವಿಲ್ಲ.

ತಮ್ಮ ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸಲು ಬಯಸುವ ಪ್ರಯಾಣಿಕರು ರೈಲು ಹೊರಡುವ 24 ಗಂಟೆಗಳ ಮೊದಲು, ಆನ್‌ಲೈನ್‌ನಲ್ಲಿ ಈ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆದರೆ, ನೆನಪಿರಲಿ, ಒಮ್ಮೆ ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸಿದರೆ ಮತ್ತೆ ಮೊದಲ ಬೊರ್ಡಿಂಗ್ ಪಾಯಿಂಟ್ ನಲ್ಲಿ ರೈಲು ಹಿಡಿಯಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಈ ರೀತಿ ಮಾಡಿದರೆ, ದಂಡ ಪಾವತಿಸಬೇಕಾಗುತ್ತದೆ. ಬೋರ್ಡಿಂಗ್ ಪಾಯಿಂಟ್ ಮತ್ತು ಪರಿಷ್ಕೃತ ಬೋರ್ಡಿಂಗ್ ಪಾಯಿಂಟ್ ನಡುವಿನ ಶುಲ್ಕವನ್ನು ನೀಡಬೇಕಾಗುತ್ತದೆ. ಐಆರ್ ಸಿಟಿಸಿ ನಿಯಮಗಳ ಪ್ರಕಾರ ಬೋರ್ಡಿಂಗ್ ನಿಲ್ದಾಣವನ್ನು ಒಮ್ಮೆ ಮಾತ್ರ ಬದಲಾಯಿಸಬಹುದು.

ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸಲು ಇಲ್ಲಿದೆ ಸುಲಭ ಮಾರ್ಗ :

• ಮೊದಲು ನೀವು ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್‌ https://www.irctc.co.in/nget/train-search ಗೆ ಭೇಟಿ ನೀಡಿ
• ಲಾಗಿನ್ ಮತ್ತು ಪಾಸ್ವರ್ಡ್ ಅನ್ನು ನಮೂದಿಸಿ ಮತ್ತು ನಂತರ ‘Booking Ticket History’ ಹೋಗಿ
• ನಿಮ್ಮ ರೈಲನ್ನು ಆಯ್ಕೆ ಮಾಡಿ ಮತ್ತು ಅಲ್ಲಿ ‘change boarding point’ ಗೆ ಹೋಗಿ.
• ಆಗ ಹೊಸ ಪುಟ ತೆರೆಯುತ್ತದೆ, ಡ್ರಾಪ್‌ಡೌನ್‌ನಲ್ಲಿ ಆ ರೈಲುಗಾಗಿ ಹೊಸ ಬೋರ್ಡಿಂಗ್ ನಿಲ್ದಾಣವನ್ನು ಆಯ್ಕೆ ಮಾಡಿ
• ಹೊಸ ನಿಲ್ದಾಣವನ್ನು ಆಯ್ಕೆ ಮಾಡಿದ ನಂತರ, ಸಿಸ್ಟಮ್ ಕಂಫರ್ಮೆಶನ್ ಕೇಳುತ್ತದೆ. ಇಲ್ಲಿ OK ಮೇಲೆ ಕ್ಲಿಕ್ ಮಾಡಿ
• ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸಿರುವ ಬಗ್ಗೆ ನಿಮ್ಮ ಮೊಬೈಲ್ ಗೆ SMS ಬರುತ್ತದೆ

ಈ ಪ್ರಕಾರವಾಗಿ ನೀವು ನಿಮ್ಮ ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸಿಕೊಳ್ಳಬಹುದಾಗಿದೆ.

Leave A Reply

Your email address will not be published.